Moodabidri Alvas college, suicide, crime: ಆಳ್ವಾಸ್ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ ಆತ್ಮಹತ್ಯೆ ; ಸಾವಿಗೆ ವ್ಯಕ್ತಿಯೊಬ್ಬನ ಕಿರುಕುಳದ ಬಗ್ಗೆ ಶಂಕೆ, ಸಮಗ್ರ ತನಿಖೆಗೆ ಆಗ್ರಹಿಸಿದ ಎನ್ಎಸ್ ಯುಐ  

11-07-24 10:57 pm       Mangalore Correspondent   ಕ್ರೈಂ

ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಸಿಎ ಕಲಿಯುತ್ತಿದ್ದ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ(21) ಎಂಬ ಯುವತಿ ದಿಢೀರ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರು, ಜುಲೈ 11: ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಸಿಎ ಕಲಿಯುತ್ತಿದ್ದ ವಿದ್ಯಾರ್ಥಿನಿ ಶ್ರೀನಿಧಿ ಶೆಟ್ಟಿ(21) ಎಂಬ ಯುವತಿ ದಿಢೀರ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆಕೆಯ ಆತ್ಮಹತ್ಯೆಗೆ ವ್ಯಕ್ತಿಯೊಬ್ಬನ ಕಿರುಕುಳ ಕಾರಣ ಎನ್ನುವ ಆರೋಪ ಕೇಳಿಬಂದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಆಗ್ರಹ ಮಾಡಿದ್ದಾರೆ.

ಶ್ರೀನಿಧಿ ಶೆಟ್ಟಿ ಜುಲೈ 5ರಂದು ಉಡುಪಿ ಜಿಲ್ಲೆಯ ಮಣಿಪಾಲ ಠಾಣೆ ವ್ಯಾಪ್ತಿಯ ಹೆರ್ಗಂದೂರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವೇಳೆ ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಕಾರಣವಾದ ವ್ಯಕ್ತಿಯ ಬಗ್ಗೆ ಬರೆದಿಟ್ಟಿದ್ದಾಳೆ ಎನ್ನಲಾಗುತ್ತಿದೆ. ಮಣಿಪಾಲ ಠಾಣೆಯಲ್ಲಿ ಈ ಬಗ್ಗೆ ಅಸಹಜ ಸಾವು ಎಂದಷ್ಟೇ ಪ್ರಕರಣ ದಾಖಲಾಗಿದೆ. ಶ್ರೀನಿಧಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾಗಿದ್ದು, ಈಕೆಯ ತಂದೆ ಮಣಿಪಾಲ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಇವರು ಮಣಿಪಾಲ ಬಳಿಯಲ್ಲೇ ಬಾಡಿಗೆ ಮನೆ ಮಾಡಿಕೊಂಡಿದ್ದರು.

ಜಾಲತಾಣದಲ್ಲಿ ಶ್ರೀನಿಧಿ ಪರವಾಗಿ ಇತರೇ ವಿದ್ಯಾರ್ಥಿಗಳು ಧ್ವನಿ ಎತ್ತಿದ್ದು ಜಸ್ಟಿಸ್ ಫಾರ್ ಶ್ರೀನಿಧಿ ಎನ್ನುವ ಹ್ಯಾಶ್ ಟ್ಯಾಗ್ ಹಾಕುತ್ತಿದ್ದಾರೆ. ಶ್ರೀನಿಧಿ ಸಾವಿನ ಬಗ್ಗೆ ತನಿಖೆ ಮಾಡಬೇಕೆಂದು ಮೂಡುಬಿದ್ರೆ ಠಾಣೆಗೆ ಮನವಿ ನೀಡಿದ್ದೇವೆ. ಅಲ್ಲದೆ, ಮಣಿಪಾಲ ಠಾಣೆಯ ಪೊಲೀಸರಿಗೂ ನಮ್ಮ ಸಂಘಟನೆಯಿಂದ ಒತ್ತಡ ಹೇರುತ್ತೇವೆ. ಕಾಲೇಜಿನವರು ಸರಣಿ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ತನಿಖೆ ನಡೆಸಬೇಕು. ಇಲ್ಲದಿದ್ದರೆ, ನಾವು ಎನ್ಎಸ್ ಯುಐ ವತಿಯಿಂದ ಮುತ್ತಿಗೆ ಹಾಕುತ್ತೇವೆ ಎಂದು ಸುಹಾನ್ ಆಳ್ವ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Moodabidri Alvas college CA student Shrinidhi Shetty suspicious suicide, congress NSIU demands probe, alleges sexually harassment by teacher. Shrinidhi Shetty was found hanging in her room.