Belthangady Murder, Crime, Mangalore; ಬೆಚ್ಚಿಬಿದ್ದ ಬೆಳಾಲು ಗ್ರಾಮ ; ಹಾಡಹಗಲೇ ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ, ಜನಪ್ರಿಯ ಮೇಷ್ಟ್ರನ್ನು ಕಳಕೊಂಡು ದುಃಖಿಸಿದ ಸ್ಥಳೀಯರು, ಇಬ್ಬರು ಪುತ್ರರಿದ್ದರೂ ಒಬ್ಬಂಟಿಯಿದ್ದ ಮೇಷ್ಟ್ರು!

20-08-24 10:37 pm       Mangaluru Correspondent   ಕ್ರೈಂ

ಧರ್ಮಸ್ಥಳ ಠಾಣೆ ವ್ಯಾಪ್ತಿಯ ಬೆಳಾಲು ಗ್ರಾಮದಲ್ಲಿ ನಿವೃತ್ತ ಶಿಕ್ಷಕ, ಸ್ಥಳೀಯವಾಗಿ ಜನಾನುರಾಗಿ ವ್ಯಕ್ತಿತ್ವದ ಬಾಲಕೃಷ್ಣ ಭಟ್ (83) ಎಂಬವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಬೆಳ್ತಂಗಡಿ, ಆಗಸ್ಟ್ 20: ಧರ್ಮಸ್ಥಳ ಠಾಣೆ ವ್ಯಾಪ್ತಿಯ ಬೆಳಾಲು ಗ್ರಾಮದಲ್ಲಿ ನಿವೃತ್ತ ಶಿಕ್ಷಕ, ಸ್ಥಳೀಯವಾಗಿ ಜನಾನುರಾಗಿ ವ್ಯಕ್ತಿತ್ವದ ಬಾಲಕೃಷ್ಣ ಭಟ್ (83) ಎಂಬವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಂಗಳವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ಬೆಳಕಿಗೆ ಬಂದಿದ್ದು, ಬೆಳಾಲು ಗ್ರಾಮದ ಜನರು ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದಾರೆ.

ಮನೆಯ ಅಂಗಳದಲ್ಲಿ ತಲೆಯ ಭಾಗಕ್ಕೆ ಕತ್ತಿಯಿಂದ ಕಡಿದ ರೀತಿ ಮೃತದೇಹ ಪತ್ತೆಯಾಗಿದೆ. ಮನೆಯ ಒಳಗೆ ಮತ್ತು ಜಗಲಿಯಲ್ಲಿ ರಕ್ತ ಬಿದ್ದಿರುವುದು ಕಂಡುಬಂದಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಾಲಕೃಷ್ಣ ಭಟ್ ಅವರ ಪತ್ನಿಯೂ ನಿವೃತ್ತ ಶಿಕ್ಷಕಿಯಾಗಿದ್ದು ಐದು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಇವರಿಗೆ ಇಬ್ಬರು ಪುತ್ರರಿದ್ದು, ದೊಡ್ಡ ಮಗ ಹರೀಶ್ ಬೆಂಗಳೂರಿನಲ್ಲಿ ಸ್ವಂತ ಗ್ಯಾರೇಜ್ ಹೊಂದಿದ್ದಾರೆ. ಇನ್ನೊಬ್ಬ ಮಗ ಸುರೇಶ್ ಸರಿಯಾದ ಕೆಲಸ ಹೊಂದಿಲ್ಲ ಎನ್ನಲಾಗುತ್ತಿದ್ದು, ಪುತ್ತೂರಿಗೆಂದು ಹೋಗಿ ಬರುವುದು ಮಾಡುತ್ತಿದ್ದ. ಜೊತೆಗೆ, ಕುಡಿತದ ಚಟವನ್ನೂ ಹೊಂದಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕೆಲವು ವರ್ಷಗಳಿಂದ ಬಾಲಕೃಷ್ಣ ಭಟ್ ಅವರೇ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದರು. ಕೆಲವೊಮ್ಮೆ ಮಗನೂ ಜೊತೆಗೆ ಇರುತ್ತಿದ್ದ. ಇಂದು ಕೃತ್ಯ ನಡೆಯುವಾಗ ಮಗ ಎಲ್ಲಿದ್ದ ಎನ್ನುವುದು ಗೊತ್ತಿಲ್ಲ. ಘಟನೆ ತಿಳಿದು ಸ್ಥಳೀಯರು ಸೇರಿದಾಗ, ಮನೆಯಲ್ಲಿ ಮಗನೂ ಇದ್ದ. ಪೊಲೀಸರು ಬಂದು ಪ್ರಶ್ನೆ ಮಾಡಿದಾಗ, ನಾನು ಬರುವಾಗ ತಂದೆ ಅಂಗಳದಲ್ಲಿ ಬಿದ್ದು ಕೊಲೆಯಾಗಿದ್ದರು. ನಾನೇ ಊಟ ಮಾಡಿ ಕೊಡುತ್ತಿದ್ದೆ ಎಂದು ತಿಳಿಸಿದ್ದಾನೆ. ಮನೆಯಲ್ಲಿ ಬೇರಾವುದೇ ವಸ್ತು ಕಳವಾಗಿರುವುದು ಕಂಡುಬಂದಿಲ್ಲ. ಮಗನ ಬಗ್ಗೆಯೇ ಸ್ಥಳೀಯರಿಗೆ ಸಂಶಯಗಳಿವೆ ಎನ್ನುವ ಮಾತು ಕೇಳಿಬರುತ್ತಿದೆ.

ಬೆಳಾಲು ಶಾಲೆಯಲ್ಲೇ ಸುದೀರ್ಘ ಕಾಲ ಸೇವೆಗೈದು ನಿವೃತ್ತಿಯಾಗಿದ್ದ ಬಾಲಕೃಷ್ಣ ಭಟ್ ಅವರಿಗೆ ಅಪಾರ ಶಿಷ್ಯ ವೃಂದ ಇದೆ. ಅಕ್ಕಪಕ್ಕದ ಊರಿನವರಿಗೆಲ್ಲ ಇವರೇ ಕಲಿಸಿದವರು. ಹೀಗಾಗಿ ಇವರ ಬಗ್ಗೆ ಸ್ಥಳೀಯರು ಭಯ ಭಕ್ತಿ ಹೊಂದಿದ್ದರು. ಸುದ್ದಿ ತಿಳಿದು ಬಂದವರೆಲ್ಲ ನಮ್ಮ ಮೇಷ್ಟ್ರಿಗೆ ಈ ಸ್ಥಿತಿ ಬರಬಾರದಿತ್ತು ಎಂದು ದುಃಖಿಸಿದ್ದಾರೆ.

An 83-year-old teacher was brutally murdered in Belthangady in front of his house. The deceased has been identified as Balakrishna Bhat.