Belthangady murder, arrest, crime: 15 ಸೆಂಟಿನ ಇಷ್ಟಗಲದ ಜಾಗದ ಮೇಲೆ ಆಸೆ ; ಪ್ರೀತಿಯ ಮೇಷ್ಟ್ರನ್ನೇ ಕೊಲೆ ಮಾಡಿ ಮುಗಿಸಿದ ಅಳಿಯ, ಮೊಮ್ಮಗ, ಬೆಳಾಲಿನ ಭೀಕರ ಕೊಲೆ ರಹಸ್ಯ ಭೇದಿಸಿದ ಪೊಲೀಸರು, ಭಟ್ಟರು ತಾನೇ ಕೈಯಾರೆ ಬಡಿಸಿದ್ದ ಬಾಳೆಲೆ ಮತ್ತು ಪೊಲೀಸ್ ನಾಯಿ ನೀಡಿತ್ತು ಸುಳಿವು !

24-08-24 11:03 pm       Mangalore Correspondent   ಕ್ರೈಂ

ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಕೊಲೆ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿದ್ದು, ನಿಕಟ ಸಂಬಂಧಿಕರೇ ಆದ ಅಳಿಯ ಮತ್ತು ಮೊಮ್ಮಗನನ್ನು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿಗಳಾದ ರಾಘವೇಂದ್ರ ಕೆದಿಲಾಯ(53) ಮತ್ತು ಅವರ ಮಗ ಮುರಳಿಕೃಷ್ಣ (21) ಬಂಧಿತರು.

ಮಂಗಳೂರು, ಆಗಸ್ಟ್ 24: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ನಿವೃತ್ತ ಶಿಕ್ಷಕ ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಕೊಲೆ ಪ್ರಕರಣವನ್ನು ಧರ್ಮಸ್ಥಳ ಪೊಲೀಸರು ಭೇದಿಸಿದ್ದು, ನಿಕಟ ಸಂಬಂಧಿಕರೇ ಆದ ಅಳಿಯ ಮತ್ತು ಮೊಮ್ಮಗನನ್ನು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿಗಳಾದ ರಾಘವೇಂದ್ರ ಕೆದಿಲಾಯ(53) ಮತ್ತು ಅವರ ಮಗ ಮುರಳಿಕೃಷ್ಣ (21) ಬಂಧಿತರು.

ಆಗಸ್ಟ್ 20ರಂದು ಬೆಳಾಲು ಗ್ರಾಮದಲ್ಲಿ ಅತಿ ಜನಪ್ರಿಯ ಮತ್ತು ಎಲ್ಲರಿಗೂ ಮಾದರಿ ಅನ್ನುವಂತಿದ್ದ ಬಾಲಕೃಷ್ಣ ಭಟ್ಟರನ್ನು ಹಾಡಹಗಲೇ ಕೊಲೆ ಮಾಡಲಾಗಿತ್ತು. ನೂರಾರು ಮಂದಿಗೆ ವಿದ್ಯೆ ಕಲಿಸಿದ್ದ ಮೇಷ್ಟ್ರನ್ನು ಬರ್ಬರವಾಗಿ ಕೊಲೆ ಮಾಡಿರುವುದು ಸ್ಥಳೀಯರಿಗೆ ಅಚ್ಚರಿ ಉಂಟು ಮಾಡಿತ್ತು. ಯಾಕಂದ್ರೆ, ಅವರಿಗೇನೂ ಆಸ್ತಿ ಇರಲಿಲ್ಲ. ಸರಳ, ಸಾಧು ಸ್ವಭಾವದ ಶತ್ರುಗಳೂ ಇರಲಿಲ್ಲ. ಹೀಗಾಗಿ ಪೊಲೀಸರು ಯಾರು ಕೃತ್ಯ ಎಸಗಿದ್ದಾರೆ ಎನ್ನುವುದನ್ನು ಪತ್ತೆ ಮಾಡಲು ಸಾಕಷ್ಟು ತಲೆ ಖರ್ಚು ಮಾಡಿದ್ದರು. ಅಂಗಳದಲ್ಲಿ ಕತ್ತಿಯಿಂದ ಕಡಿದು ಬಿದ್ದ ಸ್ಥಿತಿಯಲ್ಲಿ ಬಾಲಕೃಷ್ಣ ಭಟ್ ಶವ ಬಿದ್ದಿದ್ದರಿಂದ ಯಾರೋ ದ್ವೇಷದಿಂದ ಕೊಲೆ ಮಾಡಿದ್ದಾರೆ ಎನ್ನುವ ಗುಮಾನಿ ಇತ್ತು.

ಮಂಗಳೂರಿನಿಂದ ಶ್ವಾನದಳವನ್ನು ಕರೆಸಿ ತನಿಖೆ ನಡೆಸಲಾಗಿತ್ತು. ಶ್ವಾನ ಮನೆಯ ಒಳಗಿನಿಂದ ಮೃತದೇಹ ಬಿದ್ದುಕೊಂಡಿದ್ದ ಜಾಗ ಮತ್ತು ಮನೆಯ ಎದುರಿನ ತೆಂಗಿನ ಮರದ ಬುಡದಲ್ಲಿದ್ದ ಬಾಳೆ ಎಲೆಯ ಬಳಿಗೆ ಹೋಗಿತ್ತು. ಆನಂತರ, ರಸ್ತೆಯ ವರೆಗೂ ಹೋಗಿದ್ದರಿಂದ ಯಾರೋ ನಿಕಟವರ್ತಿಗಳೇ ಬಂದು ಹೋಗಿದ್ದಾರೆ ಎನ್ನುವ ಸುಳಿವು ಪೊಲೀಸರಿಗೆ ಲಭಿಸಿತ್ತು. ಹೀಗಾಗಿ ಪೊಲೀಸರು ಮನೆಯವರನ್ನು ವಿಚಾರಣೆ ನಡೆಸಿದ್ದರು. ಅಲ್ಲದೆ, ಹತ್ತಿರದ ಸಂಬಂಧಿಕರ ಮೊಬೈಲ್ ನಂಬರನ್ನೂ ಪಡೆದು ತನಿಖೆ ಆರಂಭಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಬಾಲಕೃಷ್ಣ ಭಟ್ ಅವರ ಮಗಳ ಗಂಡ ರಾಘವೇಂದ್ರ ಕೆದಿಲಾಯ ತಮ್ಮ ಕುಟುಂಬದ ಜೊತೆಗೆ ದ್ವೇಷ ಹೊಂದಿರುವ ಸುಳಿವೂ ಸಿಕ್ಕಿತ್ತು.

ಮರುದಿನ ಬಾಲಕೃಷ್ಣ ಭಟ್ ಅವರ ಪೋಸ್ಟ್ ಮಾರ್ಟಂ ಬಳಿಕ ಅಂತ್ಯಸಂಸ್ಕಾರ ನಡೆಸುವ ಸಂದರ್ಭದಲ್ಲಿ ಅಳಿಯ ರಾಘವೇಂದ್ರ ಕೆದಿಲಾಯ ಮತ್ತು ಮಗಳು ವಿಜಯಲಕ್ಷ್ಮಿ ಬಂದಿದ್ದರು. ಇವರ ಮಗ ಮುರಳಿಕೃಷ್ಣ ಬಂದಿರಲಿಲ್ಲ. ತನಿಖೆಯ ಸಂದರ್ಭದಲ್ಲಿ ಮುರಳಿಕೃಷ್ಣ ವಿರುದ್ಧ ಬದಿಯಡ್ಕ ಠಾಣೆಯಲ್ಲಿ ಈ ಹಿಂದೆ ಕೊಲೆ ಪ್ರಕರಣ ದಾಖಲಾಗಿದ್ದ ವಿಚಾರವೂ ಪೊಲೀಸರಿಗೆ ತಿಳಿದುಬಂದಿತ್ತು. ಅಂತ್ಯಸಂಸ್ಕಾರ ಸಂದರ್ಭದಲ್ಲಿ ಬೇರೆಲ್ಲ ಸಂಬಂಧಿಕರು ಬಂದಿದ್ದಾರೆ, ಈತ ಯಾಕೆ ಬಂದಿಲ್ಲ ಅನ್ನುವ ಗುಮಾನಿಯಿಂದ ಆತನನ್ನು ವಶಕ್ಕೆ ಪಡೆದು ಪೊಲೀಸ್ ಟ್ರೀಟ್ಮೆಂಟ್ ನೀಡಿದ್ದರು. ಅಷ್ಟರಲ್ಲೇ ಮುರಳಿಕೃಷ್ಣ ನಿಜ ವಿಷಯ ಬಾಯಿಬಿಟ್ಟಿದ್ದಾನೆ.

15 ಸೆಂಟ್ ಜಾಗದ ಮೇಲೆ ಕಣ್ಣಿಟ್ಟಿದ್ದ ಅಳಿಯ

ಬಾಲಕೃಷ್ಣ ಭಟ್ ಅವರಿಗೆ ಮೂವರು ಮಕ್ಕಳು. ಮಗಳು ವಿಜಯಲಕ್ಷ್ಮಿ ಅವರನ್ನು ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾದಲ್ಲಿ ಜ್ಯೋತಿಷಿಯಾಗಿದ್ದ ರಾಘವೇಂದ್ರ ಕೆದಿಲಾಯಗೆ ಮದುವೆ ಮಾಡಿ ಕೊಡಲಾಗಿತ್ತು. ಇನ್ನೊಬ್ಬ ಮಗ ಹರೀಶ್ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರೆ, ಸಣ್ಣ ಮಗ ಸುರೇಶ್ ಪುತ್ತೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಬಾಲಕೃಷ್ಣ ಭಟ್ ಮತ್ತು ಅವರ ಪತ್ನಿ ಇಬ್ಬರೂ ಶಿಕ್ಷಕರಾಗಿದ್ದು ನಿವೃತ್ತರಾಗಿದ್ದರು. ದೀರ್ಘ ಕಾಲ ಶಿಕ್ಷಕ ವೃತ್ತಿಯಲ್ಲಿದ್ದರೂ ಆಸ್ತಿಯೇನೂ ಮಾಡಿರಲಿಲ್ಲ. ಇವರಿಗೆ ಇದ್ದದ್ದು 15 ಸೆಂಟು ಅಗಲದ ಮನೆ ಮತ್ತು ಆವರಣದಲ್ಲಿದ್ದ ಜಾಗ ಮಾತ್ರ ಎನ್ನುತ್ತಾರೆ, ಸ್ಥಳೀಯರು. ಐದು ವರ್ಷಗಳ ಹಿಂದೆ ಇವರ ಪತ್ನಿ ತೀರಿಕೊಂಡಿದ್ದರು.

ಪತ್ನಿ ಲೀಲಾ ತೀರಿಕೊಂಡ ಬಳಿಕ ಅವರಲ್ಲಿದ್ದ ಒಡವೆಗಳನ್ನು ಬಾಲಕೃಷ್ಣ ಭಟ್ ಯಾರಿಗೂ ಕೊಡದೆ ಬ್ಯಾಂಕಿನ ಲಾಕರಿನಲ್ಲಿಟ್ಟಿದ್ದರು. ಅಳಿಯ ರಾಘವೇಂದ್ರ ತನಗೆ ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಕೇಳಿದ್ದ. ಆದರೆ, ಹೆಚ್ಚೇನೂ ಆಸ್ತಿಯಿಲ್ಲ, ಕೊಡುವುದಕ್ಕೇನಿದೆ ಎಂದು ಮೇಷ್ಟ್ರು ಪ್ರಶ್ನೆ ಮಾಡಿದ್ದರು. ಇದರಿಂದ ರಾಘವೇಂದ್ರ ತೀವ್ರ ಸಿಟ್ಟಿಗೆದ್ದು ಮೇಷ್ಟ್ರು ಮತ್ತು ಮಗನ ಜೊತೆ ಹಿಂದೆ ಜಗಳವನ್ನೂ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಇವರನ್ನು ಮತ್ತು ಮಗ ಸುರೇಶನನ್ನು ಮುಗಿಸಿಯೇ ತೀರಬೇಕು ಎಂದು ಮೊನ್ನೆ ತಂದೆ, ಮಗ ಯೋಜನೆ ಹಾಕಿಯೇ ಬಂದಿದ್ದರು. ರಾಘವೇಂದ್ರ ಕಾಸರಗೋಡಿನಿಂದ ಮಂಗಳೂರು ವರೆಗೆ ಒಂದು ಸ್ಕೂಟರಿನಲ್ಲಿ ಬಂದಿದ್ದರೆ, ಮಗ ಮುರಳಿ ತನ್ನ ಸ್ನೇಹಿತನ ಬೈಕಿನಲ್ಲಿ ಮಂಗಳೂರಿಗೆ ಬಂದಿದ್ದ. ಅಲ್ಲಿಂದ ಇಬ್ಬರೂ ಸ್ಕೂಟರಿನಲ್ಲಿ ಧರ್ಮಸ್ಥಳ ಬಳಿಯ ಬೆಳಾಲಿಗೆ ಬಂದಿದ್ದರು.

ಅಪರೂಪಕ್ಕೆ ಅಳಿಯ ಮತ್ತು ಮೊಮ್ಮಗ ಮಧ್ಯಾಹ್ನ ಮನೆಗೆ ಬಂದಿದ್ದಾರೆಂಬ ಖುಷಿಯಲ್ಲಿ ಬಾಲಕೃಷ್ಣ ಭಟ್ಟರು ತಾನೇ ಕೈಯಾರೆ ತಯಾರಿಸಿದ್ದ ಅಡುಗೆಯನ್ನು ಬಾಳೆ ಎಲೆ ಹಾಕಿ ಬಡಿಸಿದ್ದರು. ಮೂವರೂ ಜೊತೆಗೆ ಕುಳಿತು ಊಟ ಮಾಡಿ, ಆನಂತರ ಹಿಂದಿರುಗುವ ಹೊತ್ತಲ್ಲಿ ಚಹಾವನ್ನೂ ಮಾಡಿಕೊಟ್ಟಿದ್ದರು. ಆದರೆ ಕಂತ್ರಿ ನಾಯಿ ಬುದ್ಧಿ ಹೊಂದಿದ್ದ ಅಳಿಯ, ಮೊಮ್ಮಗ ಇವರನ್ನು ಮುಗಿಸುವುದಕ್ಕೆ ಮೊದಲೇ ಪ್ಲಾನ್ ಮಾಡಿದ್ದರು. ಇದರಂತೆ, ಅಜ್ಜ ಮನೆಯೊಳಗೆ ಕುಳಿತು ಚಹಾ ಹೀರುತ್ತಿದ್ದಾಗಲೇ ಮೊಮ್ಮಗ ಮುರಳಿಕೃಷ್ಣ ಹಿಂದಿನಿಂದ ತಲೆಗೆ ಕತ್ತಿಯಿಂದ ಕಡಿದಿದ್ದ. ಆದರೂ ಕತ್ತಿಯೇಟಿನಿಂದ ತಪ್ಪಿಸಿಕೊಂಡು ಭಟ್ಟರು ಹೊರಗೋಡಿ ಬಂದಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಮನೆಯ ಒಳಗಿನಿಂದ ಹೊರಗಿನ ಉದ್ದಕ್ಕೂ ರಕ್ತದ ಕಲೆಗಳು ಬಿದ್ದಿದ್ದವು. ಅಂಗಳದ ಮೂಲೆಗೆ ತಲುಪುವಷ್ಟರಲ್ಲಿ ಮತ್ತೊಂದು ಏಟು ಹಾಕಿದ್ದು ನೆಲಕ್ಕೆ ಬಿದ್ದಿದ್ದಾರೆ. ಅಲ್ಲಿಯೇ ಇದ್ದ ಚಪ್ಪಡಿ ಕಲ್ಲನ್ನು ಎತ್ತಿ ಹಾಕಿ ಭೀಭತ್ಸ ರೀತಿಯಲ್ಲಿ ಕೊಲೆ ಮಾಡಿದ್ದಾನೆ. ಮಗ ಕೊಲೆ ಮಾಡುವುದನ್ನು ತಂದೆ ರಾಘವೇಂದ್ರ ಕೆದಿಲಾಯ ನೋಡುತ್ತ ನಿಂತಿದ್ದ. ತಮ್ಮ ಕೆಲಸ ಮುಗಿಸಿದ ಬಳಿಕ ಏನೂ ಆಗಿಯೇ ಇಲ್ಲ ಎಂಬಂತೆ ಕಾಸರಗೋಡಿನ ಮುಳ್ಳೇರಿಯಾದ ಮನೆಗೆ ಮರಳಿದ್ದರು. ಈ ವೇಳೆ, ಬಾಲಕೃಷ್ಣ ಭಟ್ಟರ ಜಾಗದ ಆಸ್ತಿ ಪತ್ರಗಳನ್ನೂ ಜೊತೆಗೆ ಒಯ್ದಿದ್ದರು.

ಮನೆಯಲ್ಲಿ ಬೇರೇನೂ ಬೆಲೆಬಾಳುವ ವಸ್ತುಗಳು ಇರಲಿಲ್ಲ. ಹೀಗಾಗಿ ಕಳವು ಏನೂ ಆಗಿಲ್ಲದ ಕಾರಣ ದರೋಡೆಕೋರರು ಮಾಡಿದ ಕೃತ್ಯ ಅಲ್ಲ ಅನ್ನೋದು ಪೊಲೀಸರಿಗೆ ತಿಳಿದಿತ್ತು. ಇತ್ತ ತನ್ನ ಮನೆಗೆ ಬಂದರೂ, ಪತ್ನಿ ಬಳಿ ರಾಘವೇಂದ್ರ ಏನೂ ಹೇಳಿರಲಿಲ್ಲ. ತಂದೆಯ ಕೊಲೆಯಾಗಿದೆ ಎಂದು ತಿಳಿದು ಮಗಳು ಅಂದೇ ಮನೆಗೆ ಓಡಿ ಬಂದಿದ್ದರು. ಆದರೆ, ಎರಡು ದಿನ ಕಳೆಯುವಷ್ಟರಲ್ಲಿ ತನ್ನ ಗಂಡ ಮತ್ತು ಮಗನನ್ನು ಪೊಲೀಸರು ಹೊತ್ತೊಯ್ದಾಗಲೇ ಶಂಕೆ ಮೂಡಿತ್ತು. ಇಷ್ಟಗಲದ ಜಾಗ, ಒಂದಷ್ಟು ಒಡವೆ ಮೇಲೆ ಆಸೆ ಇಟ್ಟಿದ್ದ ಅಳಿಯ, ಮೊಮ್ಮಗ 83ರ ಇಳಿವಯಸ್ಸಿನಲ್ಲಿದ್ದ ಅಜ್ಜನನ್ನು ಕೊಲೆ ಮಾಡಿ ಮುಗಿಸಿದ್ದಾರೆ ಎನ್ನುವುದು ಬೆಳಾಲಿನ ಸ್ಥಳೀಯರು ಮಾತ್ರ ಅಲ್ಲ, ಮೇಷ್ಟ್ರ ಸಂಬಂಧಿಕರಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಶ್ವಾನ ಕೊಟ್ಟ ಸುಳಿವು, ಟೆಕ್ನಿಕಲ್ ಸಾಕ್ಷ್ಯಗಳನ್ನು ಕಲೆಹಾಕಿದ ಪೊಲೀಸರು ಬೇರೇನೂ ಪ್ರತ್ಯಕ್ಷ ಸಾಕ್ಷ್ಯ ಇಲ್ಲದಿದ್ದರೂ ಆರೋಪಿಗಳನ್ನು ನಾಲ್ಕೇ ದಿನದಲ್ಲಿ ಹೆಡೆಮುರಿ ಕಟ್ಟಿದ್ದಾರೆ.

Belthangady Elderly man murder, son in law and son arrested for killing, two arrested.An elderly man was found hacked to death in the front yard of his residence in SPB Compound, Belalu village, Belthangady Taluk, on Tuesday, August 20.