ಮುಂಬೈ ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ವಂಚನೆ ; ಉಡುಪಿ ವೈದ್ಯನಿಗೆ 13 ಲಕ್ಷ ಖೋತಾ, ಗುಜರಾತ್ ಮೂಲದ ಖದೀಮರಿಬ್ಬರ ಸೆರೆ 

26-08-24 01:34 pm       Udupi Correspondent   ಕ್ರೈಂ

ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ಉಡುಪಿಯ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ಆನ್‌ಲೈನ್ ಮೂಲಕ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಸೆನ್ ಪೊಲೀಸರು ಗುಜರಾತ್ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಉಡುಪಿ, ಆಗಸ್ಟ್ 26: ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ಉಡುಪಿಯ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ಆನ್‌ಲೈನ್ ಮೂಲಕ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಡುಪಿ ಸೆನ್ ಪೊಲೀಸರು ಗುಜರಾತ್ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಗುಜರಾತ್ ರಾಜ್ಯದ ಸೂರತ್‌ನ ನವಾದಿಯಾ ಮುಖೇಶ್ ಭಾಯಿ ಗಣೇಶ್‌ಬಾಯಿ(44) ಹಾಗೂ ರಾಜ್‌ಕೋಟ್ ಜಿಲ್ಲೆಯ ಧರಮ್ಜೀತ್ ಕಮಲೇಶ್ ಚೌಹಾನ್(28) ಬಂಧಿತ ಆರೋಪಿಗಳು. ಇವರಿಂದ 5 ಮೊಬೈಲ್ ಪೋನ್‌ ಹಾಗೂ 13,95,000 ರೂ. ನಗದನ್ನು ಪೊಲೀಸರು ವಶಪಡಿಸಿದ್ದಾರೆ. 

ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್(53) ಎಂಬವರಿಗೆ ಜು.29ರಂದು ಅಪರಿಚಿತರು ಕಸ್ಟಮ್ಸ್‌ ಇಲಾಖೆಯ ಹೆಸರಲ್ಲಿ ಕರೆ ಮಾಡಿ, ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್, 5 ಎಟಿಎಂ ಕಾರ್ಡ್, 200 ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್ ಇದ್ದು, ಕೊರಿಯರ್ ಮುಂಬೈ ಕಸ್ಟಮ್ಸ್‌ ವಶದಲ್ಲಿ ಇರುವುದಾಗಿ ತಿಳಿಸಿದ್ದರು.

ಬಳಿಕ ಪೊಲೀಸ್ ಅಧಿಕಾರಿ ಎಂದು ನಂಬಿಸಿದ್ದ ಮತ್ತೊಬ್ಬ ವ್ಯಕ್ತಿ ಅರುಣ್ ಕುಮಾರ್‌ಗೆ ಕರೆ ಮಾಡಿ, ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಬಗ್ಗೆ ದೂರನ್ನು ಸ್ವೀಕರಿಸಲಾಗಿದ್ದು, ನಿಮ್ಮ ಆಧಾರ್ ಕಾರ್ಡ್‌ ಅನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದಾರೆ. ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೆ ಜು.29ರಿಂದ ಆ.9ರ ತನಕ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಸಂಪರ್ಕಿಸದಂತೆ ಸೂಚಿಸಿದ್ದರು. 

ಪ್ರಕರಣವನ್ನು ಸರಿಪಡಿಸಲು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು ಅದರಂತೆ ಅರುಣ್ ಕುಮಾರ್, ತಮ್ಮ ಖಾತೆಯಿಂದ ಆ.6ರಿಂದ ಆ.9ರ ವರೆಗೆ ಹಂತ ಹಂತವಾಗಿ ಒಟ್ಟು 13,3,81,000 ರೂ. ಹಣವನ್ನು ವರ್ಗಾಯಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೆನ್ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಎಸ್ಸೈ ಅಶೋಕ್, ಸಿಬ್ಬಂದಿ ಪ್ರವೀಣ ಶೆಟ್ಟಿಗಾರ್, ರಾಜೇಶ್, ಅರುಣ ಕುಮಾರ್, ಯತೀನ್ ಕುಮಾರ್, ರಾಘವೇಂದ್ರ ಕಾರ್ಕಡ, ದಿಕ್ಷೀತ್, ಪ್ರಶಾಂತ್, ಮುತ್ತೆಪ್ಪ ಆಡೀನ್, ಮಾಯಪ್ಪ ಗಡಾದೆ, ಪರಶುರಾಮ ಮತ್ತು ಸುದೀಪ್ ಅವರನ್ನು ಒಳಗೊಂಡ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದೆ.

The Udupi Cyber Police have arrested two individuals from Gujarat for cheating a local doctor of crores of rupees online. The accused, Mukesh Bhai Ganeshbhai (44) and Dharamjeet Kamlesh Chauhan (28) were arrested for posing as Mumbai customs officials and deceiving Dr. Arun Kumar (53) into transferring ₹1,33,81,000 into various bank accounts.