Bangalore crime, Drugs, CCB: ಡ್ರಗ್ಸ್​ ಮಾರುತ್ತಿದ್ದ ವಿದೇಶಿ ಪ್ರಜೆ ಸಹಿತ ಬೆಂಗಳೂರು ಲೇಡಿ ಬಂಧನ ; 1.50 ಕೋಟಿ ಮೌಲ್ಯದ ಎಂಡಿಎಂಎ ವಶಕ್ಕೆ 

23-09-24 09:12 pm       Bangalore Correspondent   ಕ್ರೈಂ

ಮಾದಕ ಪದಾರ್ಥಗಳನ್ನ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಹಾಗೂ ಸ್ಥಳೀಯ ಮಹಿಳೆಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಮಿಖಾಯಿಲ್ ಡೈಕೆ ಒಕೋಲಿ (41) ಹಾಗೂ ಬೆಂಗಳೂರಿನ ಸಹನಾ ದಾಸ್ (25) ಬಂಧಿತ ಆರೋಪಿಗಳು.

ಬೆಂಗಳೂರು, ಸೆ.23: ಮಾದಕ ಪದಾರ್ಥಗಳನ್ನ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಹಾಗೂ ಸ್ಥಳೀಯ ಮಹಿಳೆಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಮಿಖಾಯಿಲ್ ಡೈಕೆ ಒಕೋಲಿ (41) ಹಾಗೂ ಬೆಂಗಳೂರಿನ ಸಹನಾ ದಾಸ್ (25) ಬಂಧಿತ ಆರೋಪಿಗಳು.

ಬಂಧಿತರಿಂದ ಬರೋಬ್ಬರಿ 1.50 ಕೋಟಿ ಮೌಲ್ಯದ 1 ಕೆ.ಜಿ 50 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 3 ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

ಜುಲೈ 24ರಂದು ನೈಜೀರಿಯಾ ಮೂಲದ ಚುಕುದ್ವೇಮ್‌ ಜಸ್ಟೀಸ್‌ ನ್ವಾಫಾರ್‌ ಎಂಬಾತನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಆತನಿಂದ 4 ಕೆ.ಜಿ ಎಂಡಿಎಂಎ ಕ್ರಿಸ್ಟೆಲ್‌ಗಳನ್ನ ವಶಪಡಿಸಿಕೊಂಡಿದ್ದರು. ತನಿಖಾ ಕಾಲದಲ್ಲಿ ಈ ಆರೋಪಿಯು ಮಿಖಾಯಿಲ್ ಡೈಕೆ ಒಕೋಲಿಯಿಂದ ಎಂಡಿಎಂಎ ಖರೀದಿಸಿದ್ದಾಗಿ ಹೆಸರನ್ನಷ್ಟೇ ತಿಳಿಸಿದ್ದ. ಆರೋಪಿಯ ಪತ್ತೆಕಾರ್ಯ ಮುಂದುವರೆಸಿದ್ದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಯರಪ್ಪನಹಳ್ಳಿಯ ಬಾಲಾಜಿ ಲೇಔಟ್‌ನಲ್ಲಿ ವಾಸವಾಗಿದ್ದ ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ‌.

ಈ ಹಿಂದೆ ಕೆ. ಆರ್. ಪುರಂನಲ್ಲಿ ವಾಸವಿದ್ದ ಮಿಖಾಯಿಲ್ ಡೈಕೆ ಒಕೋಲಿಗೆ ಪಕ್ಕದ ಮನೆಯಲ್ಲಿ ವಾಸವಿದ್ದ ಸಹನಾಳ ಪರಿಚಯವಾಗಿತ್ತು. ಬಳಿಕ ಇಬ್ಬರು ಯರಪ್ಪನಹಳ್ಳಿಯ ಬಾಲಾಜಿ ಲೇಔಟ್‌ನಲ್ಲಿ ವಾಸವಾಗಿದ್ದರು. ಮಿಖಾಯಿಲ್ ವಿರುದ್ಧ 2018ರಲ್ಲಿಯೂ ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

25 year old girl arrested with African drug peddler in Bangalore by CCB police, 1.50 crore MDMA seized.