Mangalore stone railway track, Thokottu; ರೈಲು ಹಳಿ ತಪ್ಪಿಸಲು ಭಾರೀ ಸಂಚು? ರೈಲು ಹಳಿಯಲ್ಲಿ ಕಲ್ಲುಗಳನ್ನಿಟ್ಟ ಆಗಂತುಕರು! ತೊಕ್ಕೊಟ್ಟಿನಲ್ಲಿ ಆತಂಕ ಹುಟ್ಟಿಸಿದ ವಿದ್ಯಮಾನ 

20-10-24 11:47 am       Mangaluru Correspondent   ಕ್ರೈಂ

ರೈಲ್ವೇ ಹಳಿಯ ಎರಡೂ ಬದಿಗಳಲ್ಲಿ ಆಗಂತುಕರಿಬ್ಬರು ಜಲ್ಲಿ ಕಲ್ಲುಗಳನ್ನಿಟ್ಟು ಪರಾರಿಯಾದ ಘಟನೆ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ರೈಲ್ವೇ ಓವರ್ ಬ್ರಿಡ್ಜ್ ಕೆಳಭಾಗದಲ್ಲಿ ನಿನ್ನೆ ರಾತ್ರಿ ನಡೆದಿದೆ. ಹಳಿಯಲ್ಲಿ ರೈಲುಗಳು ಚಲಿಸುವಾಗ ಭಾರೀ ಸದ್ದು ಕೇಳಿಸಿದ್ದು ಸ್ಥಳೀಯರು ಘಟನೆಯಿಂದ ಆತಂಕಕ್ಕೀಡಾಗಿದ್ದಾರೆ.

ಉಳ್ಳಾಲ, ಅ-20: ರೈಲ್ವೇ ಹಳಿಯ ಎರಡೂ ಬದಿಗಳಲ್ಲಿ ಆಗಂತುಕರಿಬ್ಬರು ಜಲ್ಲಿ ಕಲ್ಲುಗಳನ್ನಿಟ್ಟು ಪರಾರಿಯಾದ ಘಟನೆ ಉಳ್ಳಾಲ ತಾಲೂಕಿನ ತೊಕ್ಕೊಟ್ಟು ರೈಲ್ವೇ ಓವರ್ ಬ್ರಿಡ್ಜ್ ಕೆಳಭಾಗದಲ್ಲಿ ನಿನ್ನೆ ರಾತ್ರಿ ನಡೆದಿದೆ. ಹಳಿಯಲ್ಲಿ ರೈಲುಗಳು ಚಲಿಸುವಾಗ ಭಾರೀ ಸದ್ದು ಕೇಳಿಸಿದ್ದು ಸ್ಥಳೀಯರು ಘಟನೆಯಿಂದ ಆತಂಕಕ್ಕೀಡಾಗಿದ್ದಾರೆ.

ನಿನ್ನೆ ತಡರಾತ್ರಿ 8 ಗಂಟೆ ಸುಮಾರಿಗೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ನಿವಾಸಿ ಮಹಿಳೆಯರು ಹಳಿಯಲ್ಲಿ ಇಬ್ಬರು ಅಪರಿಚಿತರನ್ನ ಕಂಡಿದ್ದರು. ಮಹಿಳೆಯರು ಮನೆ ತಲುಪಿದಾಗ ರೈಲೊಂದು ಕೇರಳ ಕಡೆಗೆ ತೆರಳಿದ್ದು, ಈ ವೇಳೆ ಭಾರೀ ಸದ್ದು ಕೇಳಿಸಿತ್ತು. ಇದನ್ನ ಸ್ಥಳೀಯರು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬಳಿಕ ಎರಡು ರೈಲು ಚಲಿಸಿದಾಗಲೂ ಮತ್ತೆ ಅಂತಹದ್ದೇ ಭಾರಿ ಸದ್ದು ಕೇಳಿಸಿದೆ. ಘಟನೆಯಿಂದ ಸ್ಥಳೀಯರ ಮನೆಗಳೂ ಕಂಪಿಸಿದೆ‌. ತಕ್ಷಣವೇ ಸ್ಥಳೀಯರು ರೈಲು ಅಪಘಾತವೆಂದು ಭಾವಿಸಿ ಹಳಿಯತ್ತ ದೌಡಾಯಿಸಿದಾಗ  ಹಳಿ ಮೇಲಿರಿಸಲಾದ ಜಲ್ಲಿಕಲ್ಲುಗಳು ತುಂಡಾಗಿರುವುದು ಕಂಡು ಬಂದಿದೆ. ಅನೇಕ ವರ್ಷಗಳಿಂದ ತೊಕ್ಕೊಟ್ಟು ಪರಿಸರದಲ್ಲಿ ನಾವು ನೆಲೆಸಿದ್ದು ರೈಲು ಹಳಿಯಲ್ಲಿ ಕಂಪನದ ಅನುಭವ ಇದೇ ಮೊದಲ ಬಾರಿಗೆ ಆಗಿದೆ ಅನ್ನುವ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಈ ಕುರಿತು ರೈಲ್ವೇ ಪೊಲೀಸ್ ಠಾಣೆ ಮತ್ತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.  ಓವರ್ ಬ್ರಿಡ್ಜ್ ಕೆಳಗಡೆಯ ರೈಲ್ವೇ ಹಳಿಗಳಲ್ಲಿ ನಿತ್ಯವೂ ಅಪರಿಚಿತರು ಪಾನಮತ್ತರಾಗಿ ಬಂದು ಕುಳಿತು ಕೊಳ್ಳುತ್ತಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ರೈಲ್ವೇ ಹಳಿಯಲ್ಲಿ ಸಂಭವನೀಯ ಅನಾಹುತವೊಂದು ತಪ್ಪಿದ್ದು, ರೈಲ್ವೇ ಇಲಾಖೆಯು ಘಟನೆಯನ್ನ ಗಂಭೀರ ಪರಿಗಣಿಸಿ ಈ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರು ಆದಿತ್ಯವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿಗೆ ಪಾಕ್‌ ಭಯೋತ್ಪಾದಕ ಫ‌ರ್ಹಾತುಲ್ಲಾ ಘೋರಿ ಭಾರತದಾದ್ಯಂತ ರೈಲುಗಳನ್ನು ಹಳಿ ತಪ್ಪಿಸುವ ಎಚ್ಚರಿಕೆ ನೀಡಿದ್ದ ಬೆನ್ನಲ್ಲೇ ತೊಕ್ಕೊಟ್ಟಿನ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

On Saturday night, miscreants placed stones on the railway tracks near Ganesh Nagar, Thokkottu overbridge, causing an incident that left locals startled when the train passed over them.