IIFL Securities, share market, Mangalore cyber fraud: IIFL Securities ಹೆಸರಲ್ಲಿ ನಕಲಿ ಷೇರು ಮಾರ್ಕೆಟ್ ; ಅಪರಿಚಿತನ ಬಣ್ಣದ ಮಾತು ಕೇಳಿ 43 ಲಕ್ಷ ಕಳಕೊಂಡ ಮಂಗಳೂರಿನ ವ್ಯಕ್ತಿ

29-10-24 01:01 pm       Mangalore Correspondent   ಕ್ರೈಂ

IIFL Securities Ltd ಕಂಪನಿಯ ಪ್ರತಿನಿಧಿಯೆಂದು ಹೇಳಿಕೊಂಡು ವಾಟ್ಸಪ್ ನಲ್ಲಿ ಪರಿಚಯವಾಗಿದ್ದ ಅಪರಿಚಿತ ವ್ಯಕ್ತಿಯ ಮಾತು ಕೇಳಿ ಮಂಗಳೂರಿನ ವ್ಯಕ್ತಿಯೊಬ್ಬರು ಷೇರು ಮಾರುಕಟ್ಟೆ ಹೆಸರಲ್ಲಿ 43 ಲಕ್ಷ ರೂಪಾಯಿ ಹೂಡಿಕೆ ಮಾಡಿ ಮೋಸ ಹೋಗಿದ್ದು, ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು, ಅ.29: IIFL Securities Ltd ಕಂಪನಿಯ ಪ್ರತಿನಿಧಿಯೆಂದು ಹೇಳಿಕೊಂಡು ವಾಟ್ಸಪ್ ನಲ್ಲಿ ಪರಿಚಯವಾಗಿದ್ದ ಅಪರಿಚಿತ ವ್ಯಕ್ತಿಯ ಮಾತು ಕೇಳಿ ಮಂಗಳೂರಿನ ವ್ಯಕ್ತಿಯೊಬ್ಬರು ಷೇರು ಮಾರುಕಟ್ಟೆ ಹೆಸರಲ್ಲಿ 43 ಲಕ್ಷ ರೂಪಾಯಿ ಹೂಡಿಕೆ ಮಾಡಿ ಮೋಸ ಹೋಗಿದ್ದು, ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.

IIFL Securities ನಲ್ಲಿ ಹಣ ತೊಡಗಿಸಿದರೆ, ದೊಡ್ಡ ಮಟ್ಟದಲ್ಲಿ ಲಾಭ ಗಳಿಸಬಹುದೆಂದು ನಂಬಿಕೆ ಹುಟ್ಟಿಸಿದ್ದು, ಇದಕ್ಕಾಗಿ ಷೇರು ಮಾರುಕಟ್ಟೆಯ ಲಿಂಕ್ ಗಳನ್ನು ಕಳಿಸಿಕೊಟ್ಟಿದ್ದ. ಇನ್ವೆಸ್ಟ್ ಮೆಂಟ್ಸ್ ಪ್ಲಾನ್ ಬಗ್ಗೆ ಹೇಳಿ ಈ ಲಿಂಕ್ ಮೂಲಕ ಏಪ್ ಡೌನ್ಲೋಡ್ ಮಾಡಿ, ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದು, ಇದರಂತೆ ಮಂಗಳೂರಿನ ವ್ಯಕ್ತಿ ಏಪ್ ಡೌನ್ಲೋಡ್ ಮಾಡಿ ಹಣ ಹೂಡಿಕೆ ಮಾಡಿದ್ದಾರೆ. ಮಂಜು ಪಚಿಸಿಯಾ ಎಂದು ತನ್ನನ್ನು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿ ಆನಂತರ ಟೆಲಿಗ್ರಾಂ ಏಪ್ ಲಿಂಕ್ ಕಳುಹಿಸಿದ್ದ. ಟೆಲಿಗ್ರಾಂ ಮೂಲಕ ಇಬ್ಬರು ನಿರಂತರ ಸಂಪರ್ಕದಲ್ಲಿದ್ದರು.

ಅಪರಿಚಿತನ ಸೂಚನೆಯಂತೆ, ಸೆ.26ರಿಂದ ಅ.23ರ ವರೆಗೆ ನಿರಂತರವಾಗಿ ಹಣ ಹೂಡಿಕೆ ಮಾಡಿದ್ದಾರೆ. ತನ್ನ ಬರೋಡಾ ಬ್ಯಾಂಕ್ ಖಾತೆಯಿಂದ 22 ಲಕ್ಷ, ಎಸ್ ಬಿಐ ಖಾತೆಯಿಂದ 19.18 ಲಕ್ಷ, ಏಕ್ಸಿಸ್ ಖಾತೆಯಿಂದ 1.50 ಲಕ್ಷ ರೂ. ಹಣವನ್ನು ಐಐಎಫ್ಎಲ್ ಸೆಕ್ಯುರಿಟೀಸ್ ಹೆಸರಲ್ಲಿ ಅಪರಿಚಿತ ವ್ಯಕ್ತಿ ನೀಡಿದ್ದ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಏಪ್ ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವಂತೆ ತೋರಿಸುತ್ತಿದ್ದುದರಿಂದ ಅಧಿಕೃತ ಷೇರು ವಹಿವಾಟು ಎಂದು ನಂಬಿದ್ದರು. ಆದರೆ, ಹಣವನ್ನು ಹಿಂತೆಗೆಯಲು ಯತ್ನಿಸಿದಾಗ, ಅಪರಿಚಿತ ವ್ಯಕ್ತಿ 25 ಶೇಕಡಾ ಕಮಿಷನ್ ನೀಡುವಂತೆ ಒತ್ತಡ ಹೇರಿದ್ದಾನೆ. ಕೊನೆಗೆ, ಹಣವನ್ನು ಹಿಂತೆಗೆಯಲು ಸಾಧ್ಯವಾಗದೇ ಇದ್ದಾಗ, ತಾನು ಮೋಸ ಹೋಗಿದ್ದೇನೆ ಎಂದು ತಿಳಿದು ಸೈಬರ್ ಠಾಣೆಗೆ ಬಂದು ದೂರು ನೀಡಿದ್ದಾರೆ.

Fake share market group opened in the name of IIFL Securities, Mangalore man looses 43 lakhs for cyber fraud. Case has been registered at the cyber police station in Mangalore