Mangalore Mukka Srinivas College, Ragging: ಮುಕ್ಕದ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ರ್ಯಾಗಿಂಗ್ ; ಕೇರಳ ಮೂಲದ 9 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು, ಕಾಲೇಜಿನಿಂದ ಅಮಾನತು ಶಿಕ್ಷೆ

29-11-24 12:02 pm       Mangalore Correspondent   ಕ್ರೈಂ

ಮುಕ್ಕದ ಶ್ರೀನಿವಾಸ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗೆ ರ‍್ಯಾಗಿಂಗ್, ಹಲ್ಲೆ ಮಾಡಿದ ಘಟನೆ ನಡೆದಿದ್ದು, ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ನ.29: ಸುರತ್ಕಲ್ ಬಳಿಯ ಶ್ರೀನಿವಾಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗೆ ರ್ಯಾಗಿಂಗ್ ನಡೆಸಿದ ಆರೋಪದಲ್ಲಿ ಅದೇ ವರ್ಷದ ಮೂರನೇ ವರ್ಷದ 9 ಮಂದಿ ಕೇರಳ ಮೂಲದ ಕಾಲೇಜು ವಿದ್ಯಾರ್ಥಿಗಳ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ವಿದ್ಯಾರ್ಥಿಯೊಬ್ಬ ದೂರು ನೀಡಿದ್ದು, ಸಿದಾಯತ್, ಅಮಲ್ ಕೃಷ್ಣ, ಸಾಜಿದ್, ಅಜೀಮ್ ಶಾ, ಆಡಮ್, ಫಯಾದ್, ಅತುಲ್ ಕೆ, ದಿಲೀಪ್, ಅಫ್ಜಲ್, ಶಿಬಿನ್ ಆರೋಪಿಗಳು. ಇಡ್ಯಾ ಗ್ರಾಮದಲ್ಲಿ ಆರೋಪಿ ಸಿದಾಯತ್ ಮಾಡಿಕೊಂಡಿದ್ದ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿಗಳೆಲ್ಲ ಕೇರಳ ಮೂಲದವರಾಗಿದ್ದು, ಅಲೈಡ್ ಹೆಲ್ತ್ ಸೈನ್ಸ್ ವಿಭಾಗದಲ್ಲಿ ಸೈಕಾಲಜಿ ಓದುತ್ತಿದ್ದರು. ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಡಿಬಾರ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿದಾಯತ್ ನ.25ರಂದು ಸಂಜೆ 5.45ಕ್ಕೆ ಕರೆ ಮಾಡಿ, ಲೈವ್ ಲೊಕೇಶನ್ ಕಳಿಸಿ ತನ್ನ ಬಾಡಿಗೆ ಮನೆಗೆ ಬರಲು ಹೇಳಿದ್ದ. ಐವರು ಸ್ನೇಹಿತರ ಜೊತೆಗೆ ಅಲ್ಲಿದ್ದ ಕಟ್ಟಡದ ಮೊದಲ ಮಹಡಿಗೆ ಹೋದಾಗ ಅಲ್ಲಿ ಸಿದಾಯತ್, ಅಮಲ್ ಕೃಷ್ಣ ಹಾಗೂ ಸಾಜಿದ್ ಇದ್ದರು. ಅವರು ಅವಾಚ್ಯ ಶಬ್ದಗಳಿಂದ ಬೈದು ಬಾಗಿಲು ಮುಚ್ಚಿ ನನ್ನಲ್ಲಿ ಹಾಡಲು ಹೇಳಿ ಕುಣಿಯುವುದಕ್ಕೆ ಒತ್ತಡ ಹಾಕಿದ್ದರು. ಇದನ್ನು ವಿರೋಧಿಸಿದ್ದಕ್ಕೆ ಅಲ್ಲಿದ್ದ ಮೂವರು ಸೇರಿಕೊಂಡು ಕೆನ್ನೆಗೆ ಹೊಡೆದಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾರೆ.

ಬಳಿಕ ಶಿಬಿನ್, ಅಜೀಮ್ ಶಾ, ಆಡಮ್, ಫಹಾದ್, ಅತುಲ್, ದಿಲೀಪ್ ಕೊಠಡಿಗೆ ಬಂದಿದ್ದು, ಕಾಲೇಜು ಆಡಳಿತ ಮಂಡಳಿ ಅಥವಾ ಪೊಲೀಸರಿಗೆ ದೂರು ನೀಡಿದಲ್ಲಿ ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಬೆದರಿಕೆ ಹಾಕಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ತನ್ನ ಕಿವಿಯಲ್ಲಿ ರಕ್ತ ಸೋರುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಕಾಲೇಜಿನ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆಂಟಿ ರಾಗಿಂಗ್ ಕಮಿಟಿಗೆ ದೂರು ನೀಡಿದ್ದೇನೆ ಎಂದು ಸಂತ್ರಸ್ತ ವಿದ್ಯಾರ್ಥಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದು, ಸುರತ್ಕಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Ragging and Assult on junior student at mukka srinivas medical College in Mangalore, case filed. The surathkal police are now investigating the case after a junior studnet was ragged assulted and later was issue like threat.