Fake Gold Loan, Mangalore Samaja seva sahakari sangha: 500ಕ್ಕೂ ಹೆಚ್ಚು ನಕಲಿ ಚಿನ್ನದ ಬಳೆಗಳನ್ನಿಟ್ಟು ಕೋಟ್ಯಂತರ ರೂ. ಸಾಲ ; ಕೊಡಗಿನ ಬಳಿಕ ಮಂಗಳೂರಿನಲ್ಲೂ ನಕಲಿ ಚಿನ್ನ ದಂಧೆ, ಸಮಾಜ ಸೇವಾ ಸಹಕಾರಿ ಸಂಘದಲ್ಲಿ ಸ್ವಾಹಾ ! ಮ್ಯಾನೇಜರ್, ಬ್ಯಾಂಕಿನ ಆಡಳಿತ ಮಂಡಳಿಯೇ ಶಾಮೀಲು

25-12-24 02:41 pm       Mangalore Correspondent   ಕ್ರೈಂ

ಕೊಡಗಿನಲ್ಲಿ ಪತ್ತೆಯಾದ ನಕಲಿ ಚಿನ್ನದ ಬಳೆಗಳ ಮಾದರಿಯಲ್ಲೇ ಮಂಗಳೂರಿನಲ್ಲಿಯೂ ಸಹಕಾರಿ ಸಂಘದಲ್ಲಿ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳೂರು, ಡಿ.25: ಕೊಡಗಿನಲ್ಲಿ ಪತ್ತೆಯಾದ ನಕಲಿ ಚಿನ್ನದ ಬಳೆಗಳ ಮಾದರಿಯಲ್ಲೇ ಮಂಗಳೂರಿನಲ್ಲಿಯೂ ಸಹಕಾರಿ ಸಂಘದಲ್ಲಿ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದು ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿಶೇಷ ಅಂದ್ರೆ, ಈ ಪ್ರಕರಣದಲ್ಲಿ ಬ್ಯಾಂಕಿನ ಅಧಿಕಾರಿಗಳು, ಆಡಳಿತ ಮಂಡಳಿಯೇ ಶಾಮೀಲಾಗಿದ್ದಾರೆ. ಹೀಗಾಗಿ ಪ್ರಮುಖ ಆರೋಪಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಸಹಿತ ಒಟ್ಟು 28 ಮಂದಿ ವಿರುದ್ಧ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘದ ಮಂಗಳೂರಿನ ಪಡೀಲ್ ಶಾಖೆಯಲ್ಲಿ ಭಾರೀ ಗೋಲ್ಮಾಲ್ ಮಾಡಲಾಗಿದೆ. 2023ರ ನವೆಂಬರ್ 13ರಿಂದ 2024ರ ಫೆಬ್ರವರಿ 3ರ ನಡುವೆ ಬೇರೆ ಬೇರೆ ದಿನಗಳಂದು ಪುತ್ತೂರು ತಾಲೂಕಿನ ಈಶ್ವರಮಂಗಲ ನಿವಾಸಿ ಅಬುಬಕ್ಕರ್ ಸಿದ್ದಿಕ್ ಎಂಬಾತ 500ಕ್ಕೂ ಹೆಚ್ಚು ಚಿನ್ನದ ರೂಪದಲ್ಲಿದ್ದ ಬಳೆಗಳನ್ನು ಅಡವಿರಿಸಿ 2,11,89,800 ರೂಪಾಯಿ ಹಣವನ್ನು ಸಾಲ ಪಡೆದಿದ್ದಾನೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಇಷ್ಟೊಂದು ಭಾರೀ ಮೊತ್ತವನ್ನು ಸಹಕಾರಿ ಸಂಘದಿಂದ ಸಾಲ ನೀಡಿದ್ದೇ ಅಕ್ರಮವಾಗಿದ್ದು, ಪ್ರಕರಣದಲ್ಲಿ ಬ್ಯಾಂಕಿನಲ್ಲಿ ಚಿನ್ನದ ಪರಿವೀಕ್ಷಕನಾಗಿರುವ ವಿವೇಕ್ ಆಚಾರ್ಯ ಸಹಿತ ಬ್ಯಾಂಕಿನ ಮ್ಯಾನೇಜರ್ ಪ್ರಶಾಂತ್ ಮತ್ತು ಆಡಳಿತ ಮಂಡಳಿ ಸದಸ್ಯರು ಶಾಮೀಲಾಗಿದ್ದಾರೆ.

ಆರೋಪಿ ಅಬುಬಕ್ಕರ್ ಸಿದ್ದಿಕ್ ಗೆ ಇಪ್ಪತ್ತು ಬಾರಿ ಆಭರಣ ಅಡವಿನ ಸಾಲವನ್ನು ನೀಡಲಾಗಿದ್ದು, ಪ್ರತಿ ಬಾರಿಯೂ ಚಿನ್ನದ ಪರೀಕ್ಷಕ ಸರಿಯಾಗಿ ಪರೀಕ್ಷಿಸದೆ ಆರೋಪಿಯೊಂದಿಗೆ ಸಹಕರಿಸಿದ್ದಾರೆ. ಸಹಕಾರಿ ಸಂಘದಲ್ಲಿ ದಿನವೊಂದರಲ್ಲಿ 20 ಲಕ್ಷಕ್ಕಿಂತ ಹೆಚ್ಚು ಮೊತ್ತದ ಸಾಲ ನೀಡಲು ಸಾಧ್ಯವಿಲ್ಲ ಎಂಬ ನಿಮಯ ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಇದಲ್ಲದೆ, ಸಹಕಾರಿ ಸಂಘದಲ್ಲಿ ಅಬುಬಕ್ಕರ್ ಸಿದ್ದಿಕ್ ನಕಲಿ ಚಿನ್ನವಿಟ್ಟು ಸಾಲ ಪಡೆದಿರುವುದು ತಿಳಿದು ಬಂದಿದ್ದರೂ ಆಡಳಿತ ಮಂಡಳಿ ಸದಸ್ಯರು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ.  

ಆನಂತರ, ಆರೋಪಿ ಅಬುಬಕ್ಕರ್ ಸಿದ್ದಿಕ್ ಸಾಲ ಮರುಪಾವತಿ ಮಾಡದೇ ಇದ್ದಾಗ ಗುಪ್ತ ಸ್ಥಳದಲ್ಲಿ ಚಿನ್ನಾಭರಣವನ್ನು ಹರಾಜು ಪ್ರಕ್ರಿಯೆ ನಡೆಸಿದಂತೆ ತೋರಿಸಿದ್ದಾರೆ. ನಕಲಿ ಚಿನ್ನವನ್ನು ಮಂಗಳೂರಿನಲ್ಲಿ ಜುವೆಲ್ಲರಿ ಹೊಂದಿರುವ ವಿವೇಕ್ ಆಚಾರ್ಯ ಖರೀದಿಸಲು ಬಿಡ್ ದಾರರಾಗಿದ್ದರು. ಇದಕ್ಕಾಗಿ ಮತ್ತೆ ಸಮಾಜ ಸೇವಾ ಸಹಕಾರಿ ಸಂಘದ ಪಡೀಲ್ ಶಾಖೆಯಿಂದಲೇ ಆರೋಪಿ ಸಿದ್ದಿಕ್ ಗೆ ಮತ್ತೆ ಒಂದು ಕೋಟಿ ರೂಪಾಯಿ ಸಾಲ ಕೊಟ್ಟು ಆತನ ಸಾಲದ ಖಾತೆಗೆ ತುಂಬಿಸಿದ್ದಾರೆ. ಇದಲ್ಲದೆ, ಬ್ಯಾಂಕಿನ ಸಿಬಂದಿಗೆ ಏಳನೇ ವೇತನ ಆಯೋಗದಿಂದ ಮಧ್ಯಂತರ ಪರಿಹಾರವಾಗಿ ರಾಜ್ಯ ಸರಕಾರದಿಂದ ನೀಡಲ್ಪಟ್ಟಿದ್ದ 17 ಪರ್ಸೆಂಟ್ ಹಣವನ್ನು ಹೊಂದಿಸಿಕೊಂಡು ಅವರಿಂದಲೇ ಸಾಲ ಪಡೆದಿದ್ದಾಗಿ ತೋರಿಸಿ ಉಳಿದ 1.11 ಕೋಟಿ ಸಾಲದ ಮೊತ್ತವನ್ನು ಸಾಲದ ಖಾತೆಗೆ ತುಂಬಿಸಿ ಅಬುಬಕ್ಕರ್ ಸಿದ್ದಿಕ್ ಹೆಸರಲ್ಲಿದ್ದ ಚಿನ್ನದ ಸಾಲವನ್ನು ಕ್ಲೋಸ್ ಮಾಡಲು ಪ್ರಯತ್ನ ಪಟ್ಟಿದ್ದಾರೆ.

ನಕಲಿ ಚಿನ್ನ ಅಡವಿಟ್ಟು ಕೋಟ್ಯಂತರ ರೂ. ಸಾಲ ತೆಗೆದಿರುವ ವಿಚಾರ 2024ರ ಮಾರ್ಚ್ ತಿಂಗಳಲ್ಲಿಯೇ ಬಂಟ್ವಾಳ ಪ್ರಧಾನ ಕಚೇರಿಯ ಮಾಜಿ ಸದಸ್ಯರಿಗೆ ತಿಳಿದಿದ್ದು, ಸಹಕಾರಿ ಸಂಘದ ನಿಬಂಧಕರಿಗೆ ತನಿಖೆ ನಡೆಸುವಂತೆ ದೂರು ನೀಡಿದ್ದರು. ಮಾಜಿ ನಿರ್ದೇಶಕರಾದ ಲೋಕನಾಥ್ ಮತ್ತು ಹೇಮಂತ್ ಸಾಲ್ಯಾನ್ ದೂರಿನಂತೆ ಸಹಕಾರಿ ಇಲಾಖೆ ಉಪ ನಿಬಂಧಕರು ಬ್ಯಾಂಕ್ ಶಾಖೆಯಿಂದ ವರದಿ ಕೇಳಿದ್ದಲ್ಲದೆ, ದೂರುದಾರರಲ್ಲಿ ಹೆಚ್ಚಿನ ದಾಖಲಾತಿ ನೀಡುವಂತೆ ಸೂಚಿಸಿದ್ದರು. ಇದಲ್ಲದೆ, ಜಿಲ್ಲಾಧಿಕಾರಿ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಅವರಿಗೂ ಕಳೆದ ಜೂನ್ ತಿಂಗಳಲ್ಲಿ ದೂರು ನೀಡಲಾಗಿತ್ತು. ಜಿಲ್ಲಾಡಳಿತಕ್ಕೆ ದೂರಿತ್ತರೂ ಯಾವುದೇ ಬೆಳವಣಿಗೆಯಾಗದ ಹಿನ್ನೆಲೆಯಲ್ಲಿ ಲೋಕನಾಥ್ ಅವರು ಮಂಗಳೂರಿನ ಸೈಬರ್ ಮತ್ತು ಆರ್ಥಿಕ ಅಪರಾಧ ಠಾಣೆಗೆ ದೂರು ನೀಡಿದ್ದಾರೆ.

ಇದರಂತೆ, ಇದೇ ಡಿ.12ರಂದು ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಅಬುಬಕ್ಕರ್ ಸಿದ್ದಿಕ್, ಚಿನ್ನದ ಪರೀಕ್ಷಕ ವಿವೇಕ್ ಆಚಾರ್ಯ, ಬ್ಯಾಂಕಿನ ಮ್ಯಾನೇಜರ್ ಪ್ರಶಾಂತ್, ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್, ನಿರ್ದೇಶಕರಾದ ಪದ್ಮನಾಭ, ಜನಾರ್ದನ ಬೊಂಡಾಲ, ವಿಜಯ ಕುಮಾರ್, ರಮೇಶ್ ಸಾಲ್ಯಾನ್, ಸತೀಶ್, ವಿಶ್ವನಾಥ್, ಅರುಣ್ ಕುಮಾರ್, ಸುರೇಶ್ ಎನ್, ಜಯಂತಿ, ವಿದ್ಯಾ, ವಿಜಯಲಕ್ಷ್ಮೀ, ಜಗನ್ನಿವಾಸ ಗೌಡ, ಗಣೇಶ್ ಸಮಗಾರ್, ಭೋಜ ಮೂಲ್ಯ, ಮೋಹನ್ ಎಂ., ಉದಯ, ಶರತ್, ವಿನೋದ್, ನಳಿನಿ, ಯೋಗೀಶ್, ವಸಂತ, ಚಾರ್ಟೆಡ್ ಅಕೌಂಟ್ ಗಳಾದ ರೋಹಿತ್ ಮತ್ತು ಚಂದನ್ ಹೆಗ್ಡೆ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಬ್ಯಾಂಕಿನ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಮ್ಯಾನೇಜರ್ ಒಟ್ಟು ಹಗರಣದಲ್ಲಿ ಶಾಮೀಲಾಗಿದ್ದು ಮೇಲ್ನೋಟಕ್ಕೆ ಕಂಡುಬಂದಿದ್ದರೂ, ಇವರ ಸೂಚನೆಯಂತೆ ಲೆಕ್ಕ ಪರಿಶೋಧಕರು ಸಾಲದ ಖಾತೆಯನ್ನು ಮುಕ್ತಾಯಗೊಳಿಸಿದ್ದು ಮತ್ತು ಮರು ಸಾಲ ನೀಡಿರುವ ಅಂಶವನ್ನು ಅಡಿಟ್ ವರದಿಯಲ್ಲಿ ಉಲ್ಲೇಖಿಸದೆ ಮುಚ್ಚಿ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಲೋಕನಾಥ್ ತಿಳಿಸಿದ್ದಾರೆ.  

ಕೊಡಗಿನಲ್ಲೂ ಬಯಲಾಗಿತ್ತು ನಕಲಿ ಚಿನ್ನ ದಂಧೆ

ಇತ್ತೀಚೆಗೆ ಕೊಡಗಿನಲ್ಲಿ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು 35 ಲಕ್ಷ ರೂಪಾಯಿ ಸಾಲವನ್ನು ಪಡೆದಿರುವುದು ತಿಳಿದುಬಂದಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆಭರಣ ತಯಾರಿಸಿ ಮಾರಾಟ ಮಾಡಿದ್ದ ವ್ಯಕ್ತಿ ಸೇರಿದಂತೆ 12 ಮಂದಿಯನ್ನು ಬಂಧಿಸಿದ್ದರು. ಕೇರಳದಲ್ಲಿ ನಕಲಿ ಚಿನ್ನ ತಯಾರಿಸಿ ಕೊಡಗು, ಕೇರಳ, ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳಲ್ಲಿ ಅಡವಿಟ್ಟು ಸಾಲ ಪಡೆದು ವಂಚಿಸುತ್ತಿರುವುದು ತನಿಖೆಯಲ್ಲಿ ಬಯಲಾಗಿತ್ತು. ಮಂಗಳೂರಿನ ಹಲವು ಸಹಕಾರಿ ಸಂಘಗಳಲ್ಲಿ ಈ ರೀತಿ ನಕಲಿ ಚಿನ್ನವಿಟ್ಟು ವಂಚಿಸಿರುವ ಸಾಧ್ಯತೆಯಿದ್ದು, ಕೊಡಗಿನ ವಂಚನಾ ಜಾಲಕ್ಕೂ ಇಲ್ಲಿನ ವಂಚಕರಿಗೂ ಕನೆಕ್ಷನ್ ಇದೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗಿದೆ.

Mangalore, Fake gold bank fraud has been exposed at Samaja Seva Sahakari Sangha. The manager is involved in the case, where 500 fake gold bangles were pledged as original gold, leading to the release of a 2 crore loan. A case has been registered against 28 members of the bank, including the borrower, Abubakar Siddique, who pledged the fake gold. It appears that bank employees were complicit in this scheme.