Sri Bhagavathi Co Operative Bank fraud, Mangalore: ಭಗವತಿ ಸಹಕಾರಿ ಬ್ಯಾಂಕಿನಲ್ಲೂ ಮೋಸದ ಜಾಲ ; ಬ್ಯಾಂಕಿನ ಅಧ್ಯಕ್ಷ, ಜನರಲ್ ಮ್ಯಾನೇಜರ್, ಬ್ರಾಂಚ್ ಮ್ಯಾನೇಜರುಗಳೇ ಆರೋಪಿಗಳು, ಸತ್ತವರ ಹೆಸರಲ್ಲೂ ಸಾಲ ಮಂಜೂರು, ಪಾಂಡೇಶ್ವರದಲ್ಲಿ ಎಫ್ಐಆರ್  

03-01-25 09:26 pm       Mangalore Correspondent   ಕ್ರೈಂ

ಮಂಗಳೂರಿನ ಮತ್ತೊಂದು ಸಹಕಾರಿ ಬ್ಯಾಂಕಿನಲ್ಲಿ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ತೀಯಾ ಸಮಾಜಕ್ಕೆ ಒಳಪಟ್ಟ ಭಗವತೀ ಸಹಕಾರಿ ಬ್ಯಾಂಕಿನ ಜೆಪ್ಪಿನಮೊಗರಿನ ಮೋರ್ಗನ್ಸ್ ಗೇಟ್ ಶಾಖೆಯಲ್ಲಿ ಆರ್ ಬಿಐ ನಿಯಮಗಳನ್ನು ಉಲ್ಲಂಘಿಸಿ ಸಾಲಗಾರ ವ್ಯಕ್ತಿ ಸತ್ತ ಬಳಿಕವೂ ಆತನ ಹೆಸರಲ್ಲಿ 20 ಲಕ್ಷ ರೂ. ಮಂಜೂರು ಮಾಡಲಾಗಿದೆ.

ಮಂಗಳೂರು, ಜ.3: ಮಂಗಳೂರಿನ ಮತ್ತೊಂದು ಸಹಕಾರಿ ಬ್ಯಾಂಕಿನಲ್ಲಿ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ತೀಯಾ ಸಮಾಜಕ್ಕೆ ಒಳಪಟ್ಟ ಭಗವತೀ ಸಹಕಾರಿ ಬ್ಯಾಂಕಿನ ಜೆಪ್ಪಿನಮೊಗರಿನ ಮೋರ್ಗನ್ಸ್ ಗೇಟ್ ಶಾಖೆಯಲ್ಲಿ ಆರ್ ಬಿಐ ನಿಯಮಗಳನ್ನು ಉಲ್ಲಂಘಿಸಿ ಸಾಲಗಾರ ವ್ಯಕ್ತಿ ಸತ್ತ ಬಳಿಕವೂ ಆತನ ಹೆಸರಲ್ಲಿ 20 ಲಕ್ಷ ರೂ. ಮಂಜೂರು ಮಾಡಲಾಗಿದೆ. ಇದಲ್ಲದೆ, ಸಾಲ ಕಟ್ಟದೆ ದಿವಾಳಿಯಾದ ವ್ಯಕ್ತಿಯ ಹೆಸರಲ್ಲಿ ಮತ್ತೆ ಮತ್ತೆ ಸಾಲ ನೀಡಲಾಗಿದ್ದು ಬ್ಯಾಂಕಿನ ಅಧ್ಯಕ್ಷ, ಮ್ಯಾನೇಜರುಗಳೇ ಮೋಸ ಮಾಡಿದ್ದಾರೆಂದು ದೂರು ನೀಡಲಾಗಿದ್ದು, ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕಿನಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಮಾಜಿ ನಿರ್ದೇಶಕರೂ ಆಗಿರುವ ಹರೀಶ್ ಇರಾ ಎಂಬವರು ನವೆಂಬರ್ ತಿಂಗಳಲ್ಲಿ ಮಂಗಳೂರಿನ 2ನೇ ಜೆಎಂಎಫ್ ಕೋರ್ಟಿನಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಅದನ್ನು ಪರಿಗಣಿಸಿ ಕೋರ್ಟ್, ಡಿ.2ರಂದು ಪಾಂಡೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶ ಮಾಡಿತ್ತು. ಆದರೆ 20 ದಿನ ಕಳೆದರೂ ಪೊಲೀಸರು ಕೇಸು ದಾಖಲಿಸಿಲ್ಲ ಎಂದು ಹರೀಶ್ ಅವರು ಮಂಗಳೂರು ಕಮಿಷನರ್ ಗೆ ದೂರು ನೀಡಿದ್ದರು. ಅದರಂತೆ, ಜ.3ರಂದು ಪಾಂಡೇಶ್ವರ ಠಾಣೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಮಾಧವ ಎಂ.ಬಿ., ಜನರಲ್ ಮ್ಯಾನೇಜರ್ ಸುಷ್ಮಾ ಮತ್ತು ಶಾಖಾ ಮ್ಯಾನೇಜರ್ ರಾಘವ ಉಚ್ಚಿಲ್ ಎಂಬವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ದೂರಿನ ಪ್ರಕಾರ, ವಿಟ್ಲ ಸಮೀಪದ ಸಾಲೆತ್ತೂರು ನಿವಾಸಿ ವಿಠಲ್ ಶೆಟ್ಟಿ ಎಂಬವರು 2010ರ ಆಗಸ್ಟ್ 31ರಂದು ತನ್ನ ಜಾಗ ಅಡವಿಟ್ಟು 15 ಲಕ್ಷ ಸಾಲ ಮಾಡಿದ್ದರು. ಆದರೆ ಸಾಲ ಮರುಪಾವತಿ ಮಾಡದೇ ಇದ್ದುದರಿಂದ ವಿಠಲ ಶೆಟ್ಟಿ ದಿವಾಳಿಗಾರ ಎಂದು ಘೋಷಿಸಲ್ಪಟ್ಟು ಸದ್ರಿ ಜಾಗವನ್ನು ಬ್ಯಾಂಕಿನಿಂದ ಜಪ್ತಿ ಮಾಡಲಾಗಿತ್ತು. ಇದರಂತೆ, 2022ರ ಜನವರಿ 24ರಂದು ಸಾಲದ ಖಾತೆಯನ್ನು ಕ್ಲೋಸ್ ಮಾಡಲಾಗಿತ್ತು. ದಿವಾಳಿಯಾದ ವ್ಯಕ್ತಿಗೆ ಸಾಲದ ಖಾತೆ ಕೊನೆಗೊಂಡ ಆರು ತಿಂಗಳ ಕಾಲ ಮತ್ತೆ ಸಾಲ ನೀಡುವಂತಿಲ್ಲ ಎಂದು ಆರ್ ಬಿಐ ಮತ್ತು ಸಹಕಾರಿ ಸಂಘದ ನಿಯಮ ಇದ್ದರೂ, ಅದನ್ನು ಉಲ್ಲಂಘಿಸಿ ಮರುದಿನವೇ ಅಂದರೆ, 2022ರ ಜನವರಿ 25ರಂದು ವಿಠಲ ಶೆಟ್ಟಿ ಹೆಸರಲ್ಲಿ ಮತ್ತೆ 25 ಲಕ್ಷ ಸಾಲ ಮಂಜೂರು ಮಾಡಲಾಗಿತ್ತು. ಈ ಸಾಲವನ್ನು ಅದೇ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಕ್ಲೋಸ್ ಮಾಡಿದಂತೆ ತೋರಿಸಿ, ಅದೇ ತಿಂಗಳ 15ರಂದು ಮತ್ತೆ 35 ಲಕ್ಷ ಸಾಲವನ್ನು ವಿಠಲ ಶೆಟ್ಟಿ ಹೆಸರಲ್ಲಿ ನೀಡಲಾಗಿತ್ತು.

ಈ ನಡುವೆ, ವಿಠಲ ಶೆಟ್ಟಿ ಅನಾರೋಗ್ಯದಲ್ಲಿದ್ದರೂ ಅವರ ಹೆಸರಲ್ಲಿದ್ದ 35 ಲಕ್ಷ ಸಾಲವನ್ನು 06-06-2024ರಂದು ಬ್ಯಾಂಕಿನಲ್ಲಿ ಕ್ಲೋಸ್ ಮಾಡಿದ್ದಾಗಿ ತೋರಿಸಿ 07-06-2024ರಂದು ಮತ್ತೆ 40 ಲಕ್ಷ ಸಾಲವನ್ನು ಮಂಜೂರು ಮಾಡಿದ್ದಾರೆ. ಇದರ ಬೆನ್ನಲ್ಲೇ 2024ರ ಸೆಪ್ಟಂಬರ್ 3ರಂದು ವಿಠಲ್ ಶೆಟ್ಟಿ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಸೆ.9ರಂದು ಸಾವಿಗೀಡಾಗಿದ್ದಾರೆ. ವಿಚಿತ್ರ ಎಂದರೆ, ಇದರ ಮರುದಿನವೇ ಭಗವತಿ ಸಹಕಾರಿ ಬ್ಯಾಂಕಿನ ಮೋರ್ಗನ್ಸ್ ಗೇಟ್ ಶಾಖೆಯಿಂದ ಮತ್ತೆ 20 ಲಕ್ಷ ಸಾಲವನ್ನು ವಿಠಲ್ ಶೆಟ್ಟಿ ಹೆಸರಲ್ಲಿ ಮಂಜೂರು ಮಾಡಿದ್ದು, ಬ್ಯಾಂಕಿನ ಆಸ್ತಿಯನ್ನು ಲೂಟಿ ಮಾಡಿದ್ದಾರೆಂದು ಹರೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬ್ಯಾಂಕಿನಲ್ಲಿ ಈ ರೀತಿ ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಿರುವುದು, ಮರುಪಾವತಿಯಾಗದೆ ಕ್ಲೋಸ್ ಮಾಡಿರುವ ಹಲವು ಪ್ರಕರಣಗಳನ್ನು ಉಲ್ಲೇಖಿಸಿ ಆರ್ ಬಿಐಗೂ ದೂರು ನೀಡಿದ್ದಾರೆ. ಬ್ಯಾಂಕಿನ ಆಸ್ತಿಯನ್ನು ಲೂಟಿ ಮಾಡುವುದಕ್ಕಾಗಿ ಅಧ್ಯಕ್ಷ  ಮಾಧವ ಎಂ.ಬಿ., ಜನರಲ್ ಮ್ಯಾನೇಜರ್ ಸುಷ್ಮಾ ಮತ್ತು ಶಾಖಾ ಮ್ಯಾನೇಜರ್ ರಾಘವ ಉಚ್ಚಿಲ್ ಜೊತೆಗೂಡಿ ಮೋಸ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದು, ಇವರ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಪ್ರಕರಣದಲ್ಲಿ ಆರೋಪಿಯಾಗಿರುವ ರಾಘವ ಉಚ್ಚಿಲ್ ಅವರು, ಈ ಬಾರಿ ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಗೆ ನಿಂತಿದ್ದು ಇದೇ ಜನವರಿ 5ರಂದು ಚುನಾವಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಇವರು ಮ್ಯಾನೇಜರ್ ಆಗಿರುವ ಭಗವತಿ ಸಹಕಾರಿ ಬ್ಯಾಂಕಿನಲ್ಲಿ ಅವ್ಯವಹಾರ ಪ್ರಕರಣ ಹೊರ ಬಂದಿರುವುದು ಚರ್ಚೆಗೀಡಾಗಿದೆ. ಮೊನ್ನೆಯಷ್ಟೇ ಸಮಾಜ ಸೇವಾ ಸಹಕಾರಿ ಬ್ಯಾಂಕಿನಲ್ಲಿ ಆಡಳಿತ ಮಂಡಳಿ ಸದಸ್ಯರೇ ಸೇರಿಕೊಂಡು ಎರಡೂವರೆ ಕೋಟಿ ನಕಲಿ ಚಿನ್ನದ ಸಾಲವನ್ನು ಮುಚ್ಚಿ ಹಾಕಲೆತ್ನಿಸಿ, ಆರೋಪ ಹೊತ್ತವನನ್ನೇ ಬಚಾವ್ ಮಾಡಿರುವ ಪ್ರಕರಣ ಬಯಲಿಗೆ ಬಂದಿತ್ತು. ಸಹಕಾರಿ ಬ್ಯಾಂಕುಗಳಲ್ಲಿ ಆಡಳಿತಗಾರರೇ ಸುಪ್ರೀಂ ಎನ್ನುವಂತಾಗಿದ್ದು, ಜನಸಾಮಾನ್ಯರ ದುಡ್ಡನ್ನು ಸಾಲದ ರೂಪದಲ್ಲಿ ಪಡೆದು ಮೋಸ ಮಾಡುತ್ತಿರುವುದು ಒಂದೊಂದೇ ಬೆಳಕಿಗೆ ಬರುತ್ತಿದೆ‌.

Sri Bhagavathi Co Operative Bank fraud exposed in Morgans Gate Branch. FIR has been registered against president and Manager For issuing fake loans in the name of dead persons. Case has been registered against Bank President Madhan M B, General Manager Sushma and Branch Manager Raghav Uchil.