Mysuru Robbery, Bidar Mangalore, Crime; ಬೀದರ್..ಮಂಗಳೂರು ಬಳಿಕ ಈಗ ಮೈಸೂರು ಸರದಿ ; ಕಾರ್ ಅಡ್ಡಗಟ್ಟಿ ಹಾಡಹಗಲೇ ರೋಡ್ ರಾಬರಿ, ಹಣದ ಜೊತೆಗೆ ಇನ್ನೋವಾ ಕಾರನ್ನೂ ತೆಗೆದುಕೊಂಡು ಪರಾರಿ

20-01-25 01:25 pm       HK News Desk   ಕ್ರೈಂ

ಬೀದರ್‌.. ಮಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ದರೋಡೆ ಪ್ರಕರಣ ನಡೆದ ಬೆನ್ನಲ್ಲೇ ಇದೀಗ ಮೈಸೂರಿನಲ್ಲೂ ಹಾಡಹಗಲೇ ರಾಬರಿ ನಡೆದಿದೆ. ಕೇರಳದ ಉದ್ಯಮಿಯೊಬ್ಬರ ಕಾರ್ ಅಡ್ಡಗಟ್ಟಿ ಭಾರೀ ಪ್ರಮಾಣದಲ್ಲಿ ಹಣ ಕಿತ್ತುಕೊಂಡು ಇನ್ನೋವಾ ಕಾರು ಸಮೇತ ಪರಾರಿಯಾಗಿರುವ ಘಟನೆ ನಡೆದಿದೆ.

ಮೈಸೂರು, ಜ 20: ಬೀದರ್‌.. ಮಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ದರೋಡೆ ಪ್ರಕರಣ ನಡೆದ ಬೆನ್ನಲ್ಲೇ ಇದೀಗ ಮೈಸೂರಿನಲ್ಲೂ ಹಾಡಹಗಲೇ ರಾಬರಿ ನಡೆದಿದೆ. ಕೇರಳದ ಉದ್ಯಮಿಯೊಬ್ಬರ ಕಾರ್ ಅಡ್ಡಗಟ್ಟಿ ಭಾರೀ ಪ್ರಮಾಣದಲ್ಲಿ ಹಣ ಕಿತ್ತುಕೊಂಡು ಇನ್ನೋವಾ ಕಾರು ಸಮೇತ ಪರಾರಿಯಾಗಿರುವ ಘಟನೆ ನಡೆದಿದೆ.

ಸೋಮವಾರ ಹಾಡಹಗಲೇ ಕೃತ್ಯ ನಡೆದಿರುವುದು ಆತಂಕ ಹೆಚ್ಚಿಸಿದೆ. ಮೈಸೂರು ತಾಲೂಕು ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು ಎರಡು ಕಾರಿನಲ್ಲಿ ಬಂದಿದ್ದ ನಾಲ್ವರು ಮುಸುಕುಧಾರಿಗಳು ಇನ್ನೋವಾ ಕಾರು ಅಡ್ಡಗಟ್ಟಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಹಣದ ಜೊತೆಗೆ ವ್ಯಕ್ತಿಯ ಕಾರನ್ನೂ ತೆಗೆದುಕೊಂಡು ಎಸ್ಕೇಪ್ ಆಗಿರುವ ದರೋಡೆಕೋರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮೈಸೂರು ತಾಲ್ಲೂಕಿನ ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈಗಾಗಲೇ ತಂಡಗಳನ್ನೂ ರಚಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಬೆಂಗಳೂರು ಇಲ್ಲವೇ ಮೈಸೂರಿನಿಂದ ಹಣ ಸಾಗಣೆ, ವಹಿವಾಟಿಗೆಂದು ಕೇರಳದಿಂದ ಬಂದು ಹೋಗುವವರು ಎರಡು ಮಾರ್ಗ ಬಳಸುತ್ತಾರೆ. ಅದರಲ್ಲಿ ಮಡಿಕೇರಿ ರಸ್ತೆ ಹಾಗೂ ಮಾನಂದವಾಡಿ ರಸ್ತೆ. ಕೇರಳದ ಉದ್ಯಮಿ ಸೂಫಿ ಎಂಬುವವರು ಬೆಂಗಳೂರಿನಲ್ಲಿ ವಹಿವಾಟು ನಡೆಸಿಕೊಂಡು ಹಣದೊಂದಿಗೆ ಕೇರಳ ಕಡೆಗೆ ಹೊರಟಿದ್ದರು. ಈ ವೇಳೆ ಮೈಸೂರು- ಮಾನಂದವಾಡಿ ಹೆದ್ದಾರಿಯ ಜಯಪುರ ಬಳಿ ಅಪರಿಚತರು ಎರಡು ವಾಹನ ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ವಾಹನವನ್ನು ಅಡ್ಡಗಟ್ಟಿದ್ದು, ಸೂಫಿ ಅವರನ್ನು ಕೆಳಕ್ಕೆ ಇಳಿಸಿ ಹಣದೊಂದಿಗೆ ಕಾರನ್ನು ಚಲಾಯಿಸಿಕೊಂಡು ದರೋಡೆಕೋರರು ಪರಾರಿಯಾಗಿದ್ಧಾರೆ

ಶಸ್ತ್ರ ಸಜ್ಜಿತವಾಗಿದ್ದವರು ಸೂಫಿಯನ್ನ ಬೆದರಿಸಿದ್ದು, ರಸ್ತೆಯಲ್ಲಿ ಹೋಗುತ್ತಿದ್ದವರು ಇದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಅಲ್ಲದೇ ಜಯಪುರ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ, ಅಷ್ಟು ಹೊತ್ತಿಗೆ ದರೋಡೆಕೋರರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ

ಕಾರಿನಲ್ಲಿ ಹೊರಟಿದ್ದವರನ್ನ ಅಡ್ಡಗಟ್ಟಿ ವ್ಯಕ್ತಿಯನ್ನು ಎಳೆದಾಡಿ ಹಣ ಕಿತ್ತುಕೊಂಡಿರುವುದು ಕ್ಯಾಮರದಲ್ಲಿ ಸರಿಯಾಗಿದೆ. ಎದುರಿಗೆ ಇದ್ದವರು ಕೂಗಿಕೊಂಡರೂ ಮೂರ್ನಾಲ್ಕು ಮಂದಿ ಕಿತ್ತುಕೊಳ್ಳಲು ಯತ್ನಿಸುತ್ತಿರುವುದು ಕಂಡು ಬಂದಿದೆ.

ಕೇರಳದಿಂದ ಹಲವು ಬಾರಿ ಹವಾಲ ಹಣ ಸಾಗಣೆ ನಡೆಯುತ್ತಲೇ ಇರುತ್ತದೆ. ಇಂತಹುದೇ ಹಲವು ಪ್ರಕರಣಗಳು ಈ ಭಾಗದಲ್ಲಿ ಹಿಂದೆಯೂ ವರದಿಯಾಗಿವೆ. ಈ ಬಾರಿಯೂ ಈ ರೀತಿ ಹಣ ಸಾಗಣೆ ಮಾಡುತ್ತಿದ್ದುದು ಗೊತ್ತಿದ್ದವರೇ ಕಾಯ್ದು ದಾಳಿ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಅದರಲ್ಲೂ ಮೈಸೂರಿನಿಂದ ಎಚ್‌ಡಿಕೋಟೆಗೆ ಹೋಗುವ ಮಾರ್ಗದಲ್ಲಿ ಅರಣ್ಯದ ವಾತಾವರಣವಿದೆ. ಮೈಸೂರು ಹೊರ ವಲಯದ ಅರಸಿನಕೆರೆ ಬಳಿ ಅರಣ್ಯ ಪ್ರದೇಶ ಇರುವುದರಿಂದ ಇಲ್ಲಿ ವಾಹನ ಅಡ್ಡಗಟ್ಟಿ ದರೋಡೆ ಮಾಡಲು ಯೋಜಿಸಲಾಗುತ್ತಿದೆ. ಈಗಲೂ ಇದೇ ಭಾಗದಲ್ಲಿ ದರೋಡೆ ನಡೆದಿದೆ.

ಮೈಸೂರು ಹೊರವಲಯದ ಜಯಪುರ ಬಳಿ ದರೋಡೆ ಪ್ರಕರಣ ನಡೆದಿದೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದೇವೆ. ತಂಡಗಳನ್ನು ರಚಿಸಲಾಗಿದ್ದು, ಕಾರು ಸಹಿತ ಪರಾರಿಯಾಗಿರುವ ದರೋಡೆಕೋರರ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಎಸ್‌ಪಿ ವಿಷ್ಣುವರ್ಧನ ಅವರು, ಮಾಹಿತಿ ಕಲೆ ಹಾಕುತ್ತಿದ್ದೇವೆ. ಕೇರಳದ ಮೂಲಕ ಇಬ್ಬರು ಕಾರಿನಲ್ಲಿ ಹೋಗುವಾಗ ಘಟನೆ ಸಂಭವಿಸಿದೆ. ಖದೀಮರನ್ನು ಪೊಲೀಸರ ಪತ್ತೆ ಮಾಡಲಿದ್ದಾರೆ. ಗಡಿ ಭಾಗದಲ್ಲಿ ನಾಕಾ ಬಂಧಿ ಹಾಕಲು ಸಿಬ್ಬಂದಿ ಜೊತೆಗೆ ಮಾತನಾಡಿದ್ದೇನೆ. ದರೋಡೆಕೋರರು ಪರಾರಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಎಲ್ಲಿಯಾದರೂ ಅನುಮಾನಾಸ್ಪದ ಕಾರು, ವ್ಯಕ್ತಿಗಳು, ಒಂಟಿ ಕಾರು ಕಂಡಲ್ಲಿ ಕೂಡಲೇ 112ಗೆ ಕರೆ ಮಾಡುವಂತೆ ಎಸ್‌ಪಿ ಕೋರಿದ್ದಾರೆ.

ಬೀದರ್‌ನಲ್ಲಿ ಎಟಿಎಂ ರಾಬರಿ ಆಗಿ ವ್ಯಕ್ತಿ ಕೊಂದು ಹಣ ದೋಚಲಾಯಿತು. ಮಂಗಳೂರಿನ ಕೋಟೆಕಾರ್ ನಲ್ಲಿ ಹಾಡಹಗಲೇ ಬ್ಯಾಂಕ್‌ಗೆ ನುಗ್ಗಿ ಕೋಟಿಗೇಟಲ್ಲೇ ಚಿನ್ನ ಹಣ್ಣ ದೋಚಲಾಯಿತು. ಇದೀಗ ರಸ್ತೆಯಲ್ಲಿಯೇ ರಾಜಾರೋಷವಾಗಿ ಕೇರಳ ಉದ್ಯಮಿಯನ್ನ ಬೆದರಿಸಿ ಹಣದ ಜತೆಗೆ ಕಾರಿನೊಂದಿಗೆ ಪರಾರಿಯಾಗಿದ್ದಾರೆ ದರೋಡೆಕೋರರು. ಕರ್ನಾಟಕದಲ್ಲಿ ನಿರಂತರ ದರೋಡೆ ಪ್ರಕರಣಗಳು ವರದಿಯಾಗುತ್ತಿದ್ದು, ಪೊಲೀಸ್‌ ವ್ಯವಸ್ಥೆ ಬಗ್ಗೆ ಅನುಮಾನ ಹುಟ್ಟಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

After the Bidar and Mangalore robberies, now broad daylight robbery has been reported in Mysuru. Masked men escaped with huge cash and an Innova car after stopping and attacking Kerala-based businessmen who were carrying money.