Kotekar Bank Robbery, Police Shoot: ಬ್ಯಾಂಕ್ ದರೋಡೆ ಪ್ರಕರಣ ; ಸ್ಥಳ ಮಹಜರು ವೇಳೆ ಎಸ್ಕೇಪ್ ಯತ್ನ, ಕೆಸಿ ರೋಡ್ ಬಳಿ ಆರೋಪಿಗೆ ಗುಂಡಿನ ರುಚಿ ತೋರಿಸಿದ ಮಂಗಳೂರು ಪೊಲೀಸರು

21-01-25 06:00 pm       Mangaluru Correspondent   ಕ್ರೈಂ

ಕೋಟೆಕಾರು ಸಹಕಾರಿ ಬ್ಯಾಂಕು ದರೋಡೆ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಮಂಗಳೂರು ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.

ಮಂಗಳೂರು, ಜ.2: ಕೋಟೆಕಾರು ಸಹಕಾರಿ ಬ್ಯಾಂಕು ದರೋಡೆ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಮಂಗಳೂರು ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ತಮಿಳುನಾಡಿನಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಮಂಗಳೂರಿಗೆ ಕರೆತಂದು ಸ್ಥಳ ಮಹಜರು ನಡೆಸುವುದಕ್ಕಾಗಿ ಉಳ್ಳಾಲಕ್ಕೆ ಕರೆದೊಯ್ದಿದ್ದರು. ಈ ವೇಳೆ, ಎಸ್ಕೇಪ್ ಆಗಲು ಯತ್ನಿಸಿದ ಕಣ್ಣನ್ ಮಣಿ (35) ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. 

ಕಣ್ಣನ್ ಮಣಿ ಮೂಲತಃ ತಮಿಳುನಾಡು ನಿವಾಸಿಯಾಗಿದ್ದರೂ, ಸದ್ಯಕ್ಕೆ ಮುಂಬೈ ನಗರದ ಚೆಂಬೂರಿನಲ್ಲಿ ನೆಲೆಸಿದ್ದ. ಧಾರಾವಿ ಗ್ಯಾಂಗ್ ನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಮಣಿಯನ್ನು ಮಂಗಳೂರು ಸಿಸಿಬಿ ಮತ್ತು ಉಳ್ಳಾಲ ಪೊಲೀಸರು ಸ್ಥಳ ಮಹಜರು ನಡೆಸುವ ಸಲುವಾಗಿ ತಲಪಾಡಿ ಬಳಿಯ ಕೆಸಿ ರೋಡ್ ಅಲಂಕಾರ ಗುಡ್ಡೆಗೆ ಕರೆದೊಯ್ದಿದ್ದರು. ಅಲ್ಲಿ ಜೀಪಿನಿಂದ ಇಳಿಯುತ್ತಲೇ ಪೊಲೀಸರಿಗೆ ಹಲ್ಲೆಗೈದು ಪರಾರಿಗೆ ಯತ್ನಿಸಿದ್ದಾನೆ‌. ಸ್ಥಳದಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯ ಚೂರಿನಿಂದ ಹಲ್ಲೆಗೆ ಯತ್ನಿಸಿದ್ದು ಸಿಸಿಬಿ ಇನ್ಸ್ ಪೆಕ್ಟರ್ ಆರೋಪಿ ಕಾಲಿಗೆ ಫೈರ್ ಮಾಡಿದ್ದಾರೆ. 





ಘಟನೆಯಲ್ಲಿ ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ, ಪೇದೆಗಳಾದ ಆಂಜಿನಪ್ಪ, ನಿತಿನ್ ಎಂಬವರಿಗೆ ಗಾಯವಾಗಿದ್ದು ಅವರನ್ನು ಮತ್ತು ಗುಂಡೇಟು ಪಡೆದ ಆರೋಪಿ ಕಣ್ಣನ್ ಮಣಿಯನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಫೈರಿಂಗ್ ಘಟನೆ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸ್ಥಳದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ಭದ್ರತಾ ಕಾರ್ಯ ನಡೆಸಿದ್ದಾರೆ. ದರೋಡೆ ಪ್ರಕರಣ ಸಂಬಂಧಿಸಿ ಮುರುಗನ್ ಡಿ ದೇವರ್, ಕಣ್ಣನ್ ಮಣಿ ಮತ್ತು ಯೋಶುವಾ ರಾಜೇಂದ್ರನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯಕ್ಕೆ ಒಬ್ಬನನ್ನು ಮಾತ್ರ ಸ್ಥಳ ಮಹಜರಿಗಾಗಿ ಕರೆದೊಯ್ಯಲಾಗಿತ್ತು. ಇವರನ್ನು ತಮಿಳುನಾಡಿನ ಸ್ಥಳೀಯ ಕೋರ್ಟಿನಲ್ಲಿ ಹಾಜರುಪಡಿಸಿ ಮಂಗಳೂರಿಗೆ ಕರೆತರಲಾಗಿದೆ.

Kotekar robbery mangalore, accused kanan mani was shot in the leg by police while trying to assault on the police and flee during the spot Mahajar at kotekar bank.