Mangalore Kotekar Robbery, Murugan D Devar: ಮುಂಬೈನಲ್ಲಿ 20 ಕೇಜಿ ಚಿನ್ನ ದರೋಡೆ ಮಾಡಿದ್ದ ಧಾರಾವಿ ಗ್ಯಾಂಗಿನ ಮುರುಗನ್ ದೇವರ್ ತಂಡ ; ಕೃತ್ಯಕ್ಕೆ ಫಿಯೇಟ್ ಕಾರನ್ನೇ ಬಳಸಿದ್ದ ಆಸಾಮಿ ! 

22-01-25 01:18 pm       Mangalore Correspondent   ಕ್ರೈಂ

ಕೋಟೆಕಾರು ಬ್ಯಾಂಕ್ ದರೋಡೆ ಕೃತ್ಯ ಎಸಗಿದ್ದ ಆರೋಪಿಗಳ ಪೈಕಿ ಮುರುಗನ್ ಡಿ ದೇವರ್ ಈ ಹಿಂದೆಯೂ ಮುಂಬೈನಲ್ಲಿ ಇದೇ ರೀತಿ ಹಣಕಾಸು ಸಂಸ್ಥೆಯೊಂದನ್ನು ದರೋಡೆ ನಡೆಸಿದ್ದ ಕೃತ್ಯದಲ್ಲಿ ಭಾಗಿಯಾಗಿದ್ದ.

ಮಂಗಳೂರು, ಜ.22: ಕೋಟೆಕಾರು ಬ್ಯಾಂಕ್ ದರೋಡೆ ಕೃತ್ಯ ಎಸಗಿದ್ದ ಆರೋಪಿಗಳ ಪೈಕಿ ಮುರುಗನ್ ಡಿ ದೇವರ್ ಈ ಹಿಂದೆಯೂ ಮುಂಬೈನಲ್ಲಿ ಇದೇ ರೀತಿ ಹಣಕಾಸು ಸಂಸ್ಥೆಯೊಂದನ್ನು ದರೋಡೆ ನಡೆಸಿದ್ದ ಕೃತ್ಯದಲ್ಲಿ ಭಾಗಿಯಾಗಿದ್ದ. 2016ರ ಆಗಸ್ಟ್ 6ರಂದು ನವಿ ಮುಂಬೈನ ಪ್ರಮುಖ ಹಣಕಾಸು ಸಂಸ್ಥೆಯನ್ನು ದೋಚಿ 20 ಕೇಜಿ ಚಿನ್ನಾಭರಣ ಹೊತ್ತೊಯ್ದಿದ್ದರು. ಅಂದು ಕೂಡ ಮುರುಗನ್ ಡಿ ದೇವರ್ ತನ್ನ ಫಿಯೇಟ್ ಕಾರನ್ನು ಕೃತ್ಯಕ್ಕೆ ಬಳಸಿದ್ದು ಚಾಲಕನಾಗಿ ಸಹಕರಿಸಿದ್ದ ಎನ್ನುವ ಮಾಹಿತಿ ದೊರೆತಿದೆ.

ದರೋಡೆಗೆ ಸಂಬಂಧಿಸಿ ಮುರುಗನ್ ಡಿ ದೇವರ್ ಸೇರಿ ಒಟ್ಟು ಏಳು ಮಂದಿಯನ್ನು 2018ರಲ್ಲಿ ಬಂಧಿಸಲಾಗಿತ್ತು. 20 ಕೇಜಿ ಚಿನ್ನಾಭರಣ (ಆಗ 6 ಕೋಟಿ ಮೌಲ್ಯ) ಮತ್ತು 9.50 ಲಕ್ಷ ನಗದು ದರೋಡೆ ಆಗಿತ್ತು. ಗ್ಯಾಂಗ್ ಲೀಡರ್ ಅರ್ಪಿತ್ ರಾಜ್ ನಾಡಾರ್, ಮುರುಗನ್ ಸೇರಿದಂತೆ ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಕೋಕಾ ಏಕ್ಟ್ ಅಡಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪ್ರಕರಣದಲ್ಲಿ ನಾಡಾರ್ ಮತ್ತು ಸುಬ್ರಹ್ಮಣ್ಯನ್ ದೇವರ್ ಪ್ರಮುಖ ಆರೋಪಿಗಳಾಗಿದ್ದರು. ಮುರುಗನ್ ದೇವರ್, ಆಗಷ್ಟೇ ಫೀಲ್ಡಿಗೆ ಬಂದಿದ್ದು ಸುಬ್ರಹ್ಮಣ್ಯನ್ ಸಹಚರನಾಗಿ ಧಾರಾವಿ ಗ್ಯಾಂಗ್ ಸೇರಿಕೊಂಡಿದ್ದ. ಇದಕ್ಕೂ ಮೊದಲು 2012ರಲ್ಲಿ ಮುರುಗನ್ ಮುಂಬೈನಲ್ಲಿ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.  

ಮುಂಬೈ ದರೋಡೆ ಪ್ರಕರಣದಲ್ಲಿ 2021ರ ಸೆಪ್ಟಂಬರ್ 2ರಂದು ಮುರುಗನ್ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಇವರು ಜೈಲಿನಲ್ಲಿದ್ದಾಗಲೇ ಮಂಗಳೂರಿನ ವ್ಯಕ್ತಿಯೊಬ್ಬ ಅದೇ ಜೈಲಿನಲ್ಲಿದ್ದು, ಸ್ನೇಹಿತರಾಗಿದ್ದರು. ಆನಂತರ, ಧಾರಾವಿ ತಂಡದಲ್ಲಿ ಸಕ್ರಿಯವಾಗಿದ್ದರು ಎನ್ನಲಾಗಿದೆ. ಸದ್ಯಕ್ಕೆ ಪೊಲೀಸರು ಗುರುತಿಸಿರುವ ಪ್ರಕಾರ, ಮುರುಗನ್ ತಂಡದಲ್ಲಿ ಇಬ್ಬರು ಉತ್ತರ ಪ್ರದೇಶ, ಇಬ್ಬರು ರಾಜಸ್ಥಾನಿ, ಮತ್ತೊಬ್ಬ ಮಂಗಳೂರಿನ ವ್ಯಕ್ತಿ ಇದ್ದಾನೆ. ಇವರೆಲ್ಲ ಮಂಗಳೂರಿನ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಎನ್ನುವುದು ಗೊತ್ತಾಗಿಲ್ಲ. ಮಂಗಳೂರು ಪೊಲೀಸರು ಮುರುಗನ್ ದೇವರ್, ಜೋಶುವಾ ರಾಜೇಂದ್ರನ್ ಮತ್ತು ಕಣ್ಣನ್ ಮಣಿ ಎಂಬ ಮೂವರನ್ನು ಬಂಧಿಸಿದ್ದು, ಇತರ ಆರು ಮಂದಿಯ ಪತ್ತೆಗೆ ಬಲೆ ಬೀಸಿದ್ದಾರೆ.

Kotekar Bank Robbery, prime accused Murugan D Devar with daravi gang had looted 20 kilo gold from finance company in Mumbai using the same fiat car that was used for Kotekar bank robbery in Mangalore.