Karwar Court, Rape, Crime: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ; ಆರೋಪಿಗೆ 20 ವರ್ಷ ಜೈಲು, ಕಾರವಾರ ನ್ಯಾಯಾಲಯ ತೀರ್ಪು

26-01-25 05:07 pm       HK News Desk   ಕ್ರೈಂ

ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಕಾರವಾರ, ಜ 26: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹವಾಸ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

2022ರಲ್ಲಿ ಅಂಕೋಲಾ ತಾಲೂಕಿನ 29 ವರ್ಷದ ವಿವಾಹಿತ ವ್ಯಕ್ತಿ 17 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ತನ್ನ ತಾಯಿ ಕರೆದಿರುವುದಾಗಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದ ಎಂದು ಆರೋಪಿಸಿ ಬಾಲಕಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಂದಿನ ಪೊಲೀಸ್ ನಿರೀಕ್ಷಕ ಸಂತೋಷ್​ ಶೆಟ್ಟಿ ಅವರು ಆರೋಪಿಯನ್ನು ಬಂಧಿಸಿ, ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಬಳಿಕ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠದ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಅವರು ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 1 ವರ್ಷ ಜೈಲು ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದಿಸಿದ್ದರು.

ಅಂದಿನ ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಸಂತೋಷ್​ ಶೆಟ್ಟಿ, ಪ್ರಕರಣದ ಮೇಲುಸ್ತುವಾರಿ ಅಧಿಕಾರಿ ಈಗಿನ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ್​ ಮಠಪತಿ, ಎಎಸ್​​ಐ ಮಹಾಬಲೇಶ್ವರ ಗಡೇರ, ಸಹಾಯಕ ಗುರುರಾಜ ನಾಯ್ಕ ಪ್ರಕರಣದ ಸಾಕ್ಷಿಯಾಗಿ ಸಹಕರಿಸಿದ್ದರು.

Accused gets 20 years imprisonment for rape and cheating of marriage by Karwar court.