ಉಜಿರೆ ; ಬಾಲಕನ ಅಪಹರಿಸಿ 17 ಕೋಟಿ ಬೇಡಿಕೆ !! ಬಿಟ್ ಕಾಯಿನ್ ದಂಧೆ ಶಂಕೆ 

18-12-20 09:26 am       Mangaluru Correspondent   ಕ್ರೈಂ

ಆಘಾತಕಾರಿ ಬೆಳವಣಿಗೆಯಲ್ಲಿ ಬಾಲಕನೊಬ್ಬನನ್ನು ಕಾರಿನಲ್ಲಿ ಅಪಹರಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದ್ದು ಅಪಹರಣಕಾರರು ಚಾರ್ಮಾಡಿ ಮೂಲಕ ಪರಾರಿಯಾಗಿದ್ದಾರೆ. 

ಬೆಳ್ತಂಗಡಿ, ಡಿ.18: ಆಘಾತಕಾರಿ ಬೆಳವಣಿಗೆಯಲ್ಲಿ ಬಾಲಕನೊಬ್ಬನನ್ನು ಕಾರಿನಲ್ಲಿ ಅಪಹರಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದ್ದು ಅಪಹರಣಕಾರರು ಚಾರ್ಮಾಡಿ ಮೂಲಕ ಪರಾರಿಯಾಗಿದ್ದಾರೆ. 

ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯ ನಿವಾಸಿ ಉದ್ಯಮಿ ಬಿಜೋಯ್ ಇವರ ಪುತ್ರ ಅನುಭವ್ (8) ನನ್ನು‌ ಗುರುವಾರ ಸಂಜೆ ಬಿಳಿ ಇಂಡಿಕಾ ಕಾರಿನಲ್ಲಿ ಮನೆಯ ಗೇಟ್ ಬಳಿಯಿಂದಲೇ ಅಪಹರಿಸಲಾಗಿದೆ. 3 ರಿಂದ 4 ಮಂದಿಯ ತಂಡ ಸೇರಿ ಅಪಹರಿಸಿದ್ದಾರೆ ಎನ್ನಲಾಗಿದ್ದು 17 ಕೋಟಿ‌ ರೂ. ನೀಡುವಂತೆ ಬೇಡಿಕೆಯನ್ನು ಇರಿಸಿದ್ದಾರೆ. ಈ ಬಗ್ಗೆ ಬಾಲಕನ ಅಜ್ಜ ಎ.ಕೆ. ಶಿವನ್ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಶಿವನ್ ಅವರು ಸಂಜೆ ಹೊತ್ತಿಗೆ ಮನೆ ಬಳಿಯಲ್ಲಿ ವಾಕಿಂಗ್ ಹೋಗಿದ್ದರು. ಈ ವೇಳೆ, ಮೊಮ್ಮಗ ಹೊರಗೆ ಆಟವಾಡಿ ಅಜ್ಜನ ಎದುರಿನಿಂದ ಮನೆ ಕಡೆಗೆ ಹೋಗುತ್ತಿದ್ದ. ಮನೆಯ ಗೇಟು ಬಳಿ ತಲುಪುತ್ತಿದ್ದಂತೆ ಅಲ್ಲಿಯೆ ನಿಂತಿದ್ದ ಬಿಳಿ ಬಣ್ಣದ ಇಂಡಿಕಾ ಕಾರಿನಿಂದ ಇಬ್ಬರು ಅಪರಿಚಿತರು ಹತ್ತಿರ ಬಂದು ಬಾಲಕನನ್ನು ಬಲವಂತದಿಂದ ಕಾರಿನಲ್ಲಿ ಕುಳ್ಳಿರಿಸಿದ್ದಾರೆ. ಶಿವನ್ ಕಾರಿನ ಬಾಗಿಲು ತೆಗೆಯಲು ಪ್ರಯತ್ನಿಸುತ್ತಾ ಬೊಬ್ಬೆ ಹಾಕುತ್ತಿದ್ದಾಗಲೇ ಕಾರನ್ನು ಚಲಾಯಿಸಿಕೊಂಡು ರಥಬೀದಿ ಕಡೆಗೆ ತೆರಳಿದ್ದಾರೆ. ಬಳಿಕ ಶಿವನ್ ಅವರ ಸೊಸೆಗೆ ಅಪಹರಣಕಾರರು ಫೋನ್ ಮಾಡಿ ಮಗನನ್ನು ಬಿಡಿಸಲು 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ಬೇಡಿಕೆ ಇಟ್ಟಿರುವುದಾಗಿ ಶಿವನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಬೆಳ್ತಂಗಡಿ ಠಾಣೆಗೆ ಬಾಲಕನ ಅಜ್ಜ ಶಿವನ್  ಅವರು ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾರಿನಲ್ಲಿದ್ದವರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಅಪಹರಣದ ಬಳಿಕ ನೇರವಾಗಿ ಕಾರು ಚಾರ್ಮಾಡಿ ಮೂಲಕ ಪರಾರಿಯಾಗಿದೆ. ಹೀಗಾಗಿ ನಿನ್ನೆ ರಾತ್ರಿಯೇ ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಮೂಡಿಗೆರೆ, ಹಾಸನ ಭಾಗದಲ್ಲಿ ಪೊಲೀಸರು ಶೋಧ ಆರಂಭಿಸಿದ್ದಾರೆ. ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. 

ಅಜ್ಜ ಶಿವನ್ ನೇವಿಯಲ್ಲಿ ಅಧಿಕಾರಿಯಾಗಿದ್ದು ನಿವೃತ್ತರಾಗಿದ್ದಾರೆ. ಹುಡುಗನ ತಂದೆ ಬಿಜೋಯ್ ಹಾರ್ಡ್ ವೇರ್ ಅಂಗಡಿ ಹೊಂದಿದ್ದು ಸ್ಥಳೀಯವಾಗಿ ವ್ಯವಹಾರ ಹೊಂದಿದ್ದಾರೆ. ಬಿಟ್ ಕಾಯಿನ್ ವಿಚಾರ ಬಂದಿರುವ ಕಾರಣ ತಂದೆ ಅಥವಾ ಬಿಟ್ ಕಾಯಿನ್ ವ್ಯವಹಾರದಲ್ಲಿ ಇರುವ ಶಂಕೆ ಮೂಡಿದೆ.

In a shocking incident, an eight-year-old child was kidnapped by a gang from a playground near Ujire. After kidnapping the child the kidnappers have demanded 100 bitcoins as ransom which is 17 crore rupees. The police have formed a special team to nab the culprits.