ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ಎಸ್ಐಟಿ ತನಿಖೆ ಪೂರ್ಣ, ಆ ಎರಡು ಕಾರಣಕ್ಕೆ ಸಾವಿಗೆ ಶರಣಾದ್ರಾ ರಿಯಲ್ ಎಸ್ಟೇಟ್ ಉದ್ಯಮಿ ?!

27-08-26 05:24 pm       HK News Staffer   ಕ್ರೈಂ

ಕಾನ್ಫಿಡೆಂಟ್ ಗ್ರೂಪ್ ಮಾಲೀಕ, ರಿಯಲ್ ಎಸ್ಟೇಟ್ ಜಯಂಟ್ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ಪೂರ್ತಿಗೊಳಿಸಿರುವ ಎಸ್ಐಟಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದೆ. ವರದಿಯಲ್ಲಿ ಮಾನಸಿಕ ಖಿನ್ನತೆ, ಆಪ್ತನಿಂದ ವಿಶ್ವಾಸದ್ರೋಹ, ಐಟಿ ದಾಳಿಯಿಂದಾದ ಮಾನಸಿಕ ಒತ್ತಡವೇ ಸಾವಿಗೆ ಕಾರಣ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಬೆಂಗಳೂರು, ಆ.27: ಕಾನ್ಫಿಡೆಂಟ್ ಗ್ರೂಪ್ ಮಾಲೀಕ, ರಿಯಲ್ ಎಸ್ಟೇಟ್ ಜಯಂಟ್ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ಪೂರ್ತಿಗೊಳಿಸಿರುವ ಎಸ್ಐಟಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದೆ. ವರದಿಯಲ್ಲಿ ಮಾನಸಿಕ ಖಿನ್ನತೆ, ಆಪ್ತನಿಂದ ವಿಶ್ವಾಸದ್ರೋಹ, ಐಟಿ ದಾಳಿಯಿಂದಾದ ಮಾನಸಿಕ ಒತ್ತಡವೇ ಸಾವಿಗೆ ಕಾರಣ ಎಂಬ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ. 

ಬನ್ನೇರುಘಟ್ಟ ರಸ್ತೆಯಲ್ಲಿರುವ ತಮ್ಮ ಒಡೆತನದ ರೆಸಾರ್ಟ್ ನೋಡಿಕೊಳ್ಳುತ್ತಿದ್ದ ನಂಬಿಕಸ್ಥನೇ ಕೈಕೊಟ್ಟಿದ್ದರಿಂದ ಕೊಟ್ಯಂತರ ರು. ನಷ್ಟವಾಗಿತ್ತು. ಅಲ್ಲದೆ, ಐಟಿ ದಾಳಿಯಾದ ಸಂದರ್ಭದಲ್ಲೇ ಲೆಕ್ಕ ಪರಿಶೋಧನೆ ಮಾಡುತ್ತಿದ್ದ ಸಿಬಂದಿಯೊಬ್ಬರು ಕಂಪನಿ ಬಿಟ್ಟು ಹೋಗಿದ್ದರಿಂದ ದಾಖಲೆಗಳ ಸಲ್ಲಿಕೆ ಮಾಡಲಾಗದೆ ಜೋಸೆಫ್ ರಾಯ್ ಸಂಕಷ್ಟಕ್ಕೆ ತುತ್ತಾಗಿದ್ದರು. ಇದೇ ಮಾನಸಿಕ ಒತ್ತಡ ಆತ್ಮಹತ್ಯೆಗೆ ಕಾರಣವಾಗಿದೆ ಎನ್ನುವ ಬಗ್ಗೆ ತನಿಖಾ ತಂಡ ವರದಿ ರೆಡಿ ಮಾಡಿದೆ ಎನ್ನಲಾಗಿದೆ. 

ವೈಯಕ್ತಿಕ ಬದುಕು, ಉದ್ಯಮ ಹಾಗೂ ಆರೋಗ್ಯ, ಹೀಗೆ ಎಲ್ಲ ಆಯಾಮದಿಂದಲೂ ಎಸ್‌ಐಟಿ ತನಿಖೆ ನಡೆಸಿದೆ. ಮೃತರ ಕುಟುಂಬ ಸದಸ್ಯರು ಸೇರಿ ಹಲವರನ್ನು ತನಿಖಾ ತಂಡ ವಿಚಾರಣೆ ನಡೆಸಿದೆ. ಅತ್ಮಹತ್ಯೆಗೂ ಮುನ್ನ ರಾಯ್ ಅವರ ಮಾನಸಿಕ ಸ್ಥಿತಿಗತಿ ಕುರಿತು ನಿಮ್ಹಾನ್ಸ್ ಸಂಸ್ಥೆಯಿಂದ ವರದಿಗಳನ್ನು ಪಡೆದು ವಿಶ್ಲೇಷಿಸಲಾಗಿದೆ. ಸಣ್ಣ ಸಮಸ್ಯೆಯನ್ನು ಬೃಹತ್ತಾಗಿ ಪರಿಗಣಿಸಿ ರಾಯ್ ಅವರು ಗೊಂದಲಕ್ಕೆ ಈಡಾಗುತ್ತಿದ್ದರು. ಮಾನಸಿಕ ಒತ್ತಡಕ್ಕೆ ಮನಃಶಾಸ್ತ್ರಜ್ಞರ ಬಳಿ ಅವರು ಚಿಕಿತ್ಸೆಯನ್ನೂ ಪಡೆದಿದ್ದರು. ಆದರೆ ವ್ಯವಹಾರದಲ್ಲಿ ಉದ್ಭವಿಸಿದ ಮಾನಸಿಕ ಒತ್ತಡದಿಂದ ನಿರಾಳತೆ ಸಿಗದೆ ಅವರು ನೊಂದಿದ್ದರು. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಪ್ರಸಿದರಾಗಿದ್ದ ಕೇರಳ ಮೂಲದ ಸಿ.ಜೆ.ರಾಯ್, ಕಾನ್ಫಿಡೆಂಟ್ ಗ್ರೂಪ್ ಮೂಲಕ ಉದ್ಯಮ ಸಾಮ್ರಾಜ್ಯವನ್ನೇ ಕಟ್ಟಿದ್ದರು. ರಿಯಲ್ ಎಸ್ಟೇಟ್ ಮಾತ್ರವಲ್ಲದೆ ಚಲನಚಿತ್ರ ನಿರ್ಮಾಣ ಕ್ಷೇತ್ರದಲ್ಲು ತೊಡಗಿಸಿ ಬಂಡವಾಳ ಹೂಡಿಕೆ ಮಾಡಿದ್ದರು. ಆದರೆ ಇದೇ ವರ್ಷದ ಜನವರಿ 30ರಂದು ಜೋಸೆಫ್ ರಾಯ್ ದಿಢೀರ್ ಆಗಿ ಬೆಂಗಳೂರಿನ ತನ್ನ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಐಟಿ ಕಿರುಕುಳದಿಂದಲೇ ಸಾವಿಗೆ ಶರಣಾಗಿದ್ದಾರೆಂಬ ಮಾತು ಕೇಳಿಬಂದಿತ್ತು. 

ರಾಯ್ ಅವರ ಆತ್ಮಹತ್ಯೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅಥವಾ ಇನ್ಯಾರ ಮೇಲೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ಎಸ್‌ಐಟಿ ಹೊರಿಸಿಲ್ಲ ಎನ್ನಲಾಗಿದೆ. ಬದಲಿಗೆ, ರಾಯ್ ಆತ್ಮಹತ್ಯೆಗೆ ಮಾನಸಿಕ ಒತ್ತಡವೇ ಪ್ರಧಾನ ಕಾರಣ. ತೆರಿಗೆ ವಂಚನೆ ಮಾಡಿರುವ ಕುರಿತು ಐಟಿ ಅಧಿಕಾರಿಗಳು ಕಾನೂನು ಅನುಸಾರ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಿದ್ದಾರೆ.‌ 

ಬನ್ನೇರುಘಟ್ಟ ಬಳಿ ಜೋಸೆಫ್ ರಾಯ್ 12 ಎಕರೆ ವಿಸ್ತೀರ್ಣದಲ್ಲಿ ನೇಚರ್ಸ್ ಲಕ್ಸುರಿ ಹೆಸರಿನಲ್ಲಿ ಬೃಹತ್ ರೆಸಾರ್ಟ್ ಹೊಂದಿದ್ದರು. ದುಬೈನಲ್ಲಿ ನೆಲೆಸಿದ್ದರಿಂದ ಹಲವು ವರ್ಷಗಳಿಂದ ರೆಸಾರ್ಟ್ ನಿರ್ವಹಣೆಯ ಹೊಣೆಯನ್ನು ನಂಬಿಕಸ್ಥ ಗೆಳೆಯನಿಗೆ ವಹಿಸಿದ್ದ. ಆದರೆ ಆತ ಕೋಟ್ಯಂತರ ರೂಪಾಯಿ ವಂಚಿಸಿದ್ದರಿಂದ ಆತನನ್ನು ರಾಯ್ ದೂರವಿಟ್ಟಿದ್ದರು. ಈ ವಿಚಾರದಲ್ಲಿ ಬನ್ನೇರುಘಟ್ಟ ಠಾಣೆಯಲ್ಲಿ ಎಫ್ಐಆರ್ ಕೂಡ ಆಗಿತ್ತು.‌ ಇದರಿಂದ ರಾಯ್ ತೀವ್ರ ಮಾನಸಿಕವಾಗಿ ಕುಗ್ಗಿದ್ದರು. 

2025ರಲ್ಲಿ ರಾಯ್ ಅವರ ಉದ್ಯಮದ ಮೇಲೆ ಐಟಿ ದಾಳಿಯಾಗಿದ್ದು ಇದಕ್ಕೂ ಮೊದಲೇ ಕಂಪನಿಯ ಆರ್ಥಿಕ ನಿರ್ವಹಣೆ ಹೊತ್ತಿದ್ದ ಲೆಕ್ಕ ಪರಿಶೋಧಕ ಕೆಲಸ ತೊರೆದಿದ್ದ. ಹೀಗಾಗಿ ತಮ್ಮ ಆದಾಯದ ಮೂಲಗಳ ಕುರಿತು ನಿಖರವಾದ ದಾಖಲೆ ಒದಗಿಸಲು ರಾಯ್ ಅವರಿಗೆ ಸಾಧ್ಯವಾಗಿರಲಿಲ್ಲ.