ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನ, ಇಬ್ಬರಿಗೆ ಗಂಭೀರ ಗಾಯ!

15-09-26 10:31 am       HK News Staffer   ಕ್ರೈಂ

ಗಣೇಶೋತ್ಸವದ ಸಂಭ್ರಮದ ನಡುವೆಯೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿ , ಸೆಪ್ಟೆಂಬರ್ 15: ಗಣೇಶೋತ್ಸವದ ಸಂಭ್ರಮದ ನಡುವೆಯೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿ ನಗರದ ಚವ್ಹಾಟಗಲ್ಲಿಯಲ್ಲಿ ತಡರಾತ್ರಿ ಈ ದುರಂತ ಸಂಭವಿಸಿದೆ. ಮನೆಯಲ್ಲಿ ಫ್ರಿಡ್ಜ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡು, ಕ್ಷಣಾರ್ಧದಲ್ಲೇ ಇಡೀ ಮನೆಗೆ ಬೆಂಕಿ ಆವರಿಸಿದೆ. ಮನೆಯಲ್ಲಿದ್ದವರು ಬೆಂಕಿಯಿಂದ ಹೊರಬರಲಾಗದೆ ಒಳಗೆ ಸಿಲುಕಿಕೊಂಡ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ವರು ಸಜೀವ ದಹನ

ಮೃತರನ್ನು ಶಾರದಾ ದಮೋನೆ (45), ಭಾರತಿ ರಾಜಾರಾಮ ದಮೋನೆ (50), ಪ್ರಿಯಾ ಗಜಾನನ ದಮೋನೆ (28) ಹಾಗೂ ಗಂಗಾ ಗಜಾನನ ದಮೋನೆ (25) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಜಾನನ ದಮೋನೆ (65) ಹಾಗೂ ರೋಷನ್ ದಮೋನೆ (21) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಗಣೇಶ ಚತುರ್ಥಿಯಂದೇ ಕುಟುಂಬಕ್ಕೆ ಆಘಾತ

ಮೃತರ ಕುಟುಂಬ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಹಿಂದಿನ ದಿನವಷ್ಟೇ ಕುಟುಂಬದವರು ಸಂಭ್ರಮದಿಂದ ಗಣೇಶನನ್ನು ಮನೆಗೆ ತಂದಿದ್ದರು. ಆದರೆ ಮರುದಿನವೇ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. “ನಿನ್ನೆ ಎಲ್ಲರೂ ಸಂಭ್ರಮದಿಂದ ಗಣೇಶನನ್ನು ಮನೆಗೆ ತಂದಿದ್ದರು. ಈಗ ನೋಡಿದರೆ ಇಡೀ ಕುಟುಂಬವೇ ನಾಶವಾಗಿದೆ” ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.

ಅಗ್ನಿ ಅವಘಡದ ಪರಿಣಾಮ ಇಡೀ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಘಟನೆ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ಹಾಗೂ ಘಟನೆಯ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.