Mumbai police, gold chain: ಚಿನ್ನದ ಸರ ನುಂಗಿದ ಕಳ್ಳ ; 50ಕ್ಕೂ ಹೆಚ್ಚು ಬಾಳೆಹಣ್ಣು ತಿನ್ನಿಸಿ ಸರ ವಶಕ್ಕೆ ಪಡೆದ ಮುಂಬೈ ಪೊಲೀಸರು!

02-10-26 10:19 pm       HK News Staffer   ಕ್ರೈಂ

ಕಳವು ಮಾಡಿದ್ದ ಚಿನ್ನದ ಸರವನ್ನು ನುಂಗಿಬಿಟ್ಟಿದ್ದ ಕಳ್ಳನಿಗೆ ಮುಂಬೈ ಪೊಲೀಸರು 50ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ತಿನ್ನಿಸಿ, ಮಲದ ಮೂಲಕ ಹೊರಬರುವಂತೆ ಮಾಡಿದ್ದಲ್ಲದೆ, ಅದನ್ನು ಸ್ವಚ್ಛಗೊಳಿಸಿ ಮಹಿಳೆಗೆ ವಾಪಸ್‌ ಮಾಡಿದ್ದಾರೆ.

ಮುಂಬೈ, ಅ.2 : ಕಳವು ಮಾಡಿದ್ದ ಚಿನ್ನದ ಸರವನ್ನು ನುಂಗಿಬಿಟ್ಟಿದ್ದ ಕಳ್ಳನಿಗೆ ಮುಂಬೈ ಪೊಲೀಸರು 50ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ತಿನ್ನಿಸಿ, ಮಲದ ಮೂಲಕ ಹೊರಬರುವಂತೆ ಮಾಡಿದ್ದಲ್ಲದೆ, ಅದನ್ನು ಸ್ವಚ್ಛಗೊಳಿಸಿ ಮಹಿಳೆಗೆ ವಾಪಸ್‌ ಮಾಡಿದ್ದಾರೆ. 

ಮುಂಬೈನ ಬೀದಿಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಸಿದುಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ವಿಚಾರಣೆ ವೇಳೆ ಸರ ಕದ್ದಿದ್ದನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದ. ಪೊಲೀಸರು ಬಂಧಿಸಿದಾಗ ತನ್ನ ಬಳಿ ಇದ್ದ ಚಿನ್ನದ ಸರವನ್ನು ಅವರ ಕೈಯಿಂದ ತಪ್ಪಿಸಲು ಆತ ನುಂಗಿ ಬಿಟ್ಟಿದ್ದಾನೆ. ನಂತರ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಚಿನ್ನದ ಸರ ಆತನ ಹೊಟ್ಟೆಯಲ್ಲಿರುವುದು ಎಕ್ಸ್‌ರೇ ಮೂಲಕ ಪತ್ತೆಯಾಗಿತ್ತು. ಸರವನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದರು.

ಶಸ್ತ್ರಚಿಕಿತ್ಸೆ ಬದಲು ಬಾಳೆಹಣ್ಣಿನ ತಂತ್ರ

ಶಸ್ತ್ರಚಿಕಿತ್ಸೆ ಅಪಾಯಕಾರಿಯಾಗಿರುವುದರ ಜತೆಗೆ ದುಬಾರಿಯೂ ಆಗಬಹುದೆಂದು ಪರಿಗಣಿಸಿದ ಪೊಲೀಸರು ಪರ್ಯಾಯ ಮಾರ್ಗ ಹುಡುಕಿದ್ದರು. ಎನಿಮಾ ಮೂಲಕ ಚಿನ್ನದ ಸರವನ್ನು ಹೊರತೆಗೆಯುವ ಪ್ರಯತ್ನವೂ ಫಲ ನೀಡಲಿಲ್ಲ. ಕೊನೆಗೆ ಪೊಲೀಸರು ಬಾಳೆಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಿಸುವ ವಿಧಾನವನ್ನು ಅನುಸರಿಸಿದರು. ಆರೋಪಿಗೆ ದಿನವಿಡೀ 40ಕ್ಕೂ ಹೆಚ್ಚು ಬಾಳೆಹಣ್ಣುಗಳನ್ನು ತಿನ್ನಿಸಲಾಯಿತು. ಬಳಿಕವೂ ಚಿನ್ನದ ಸರ ಹೊರಬರದ ಹಿನ್ನೆಲೆಯಲ್ಲಿ ಮತ್ತಷ್ಟು ಬಾಳೆಹಣ್ಣುಗಳನ್ನು ತಿನ್ನಿಸಿದ್ದಾರೆ.

ಅಂತಿಮವಾಗಿ ಚಿನ್ನದ ಸರ ಆರೋಪಿಯ ಮಲದೊಂದಿಗೆ ಹೊರಬಂದಿದೆ. ನಂತರ ಪೊಲೀಸರು ಅದನ್ನು ಸ್ವಚ್ಛಗೊಳಿಸಿ ಸೋಂಕು ರಹಿತಗೊಳಿಸಿದ ಬಳಿಕ ಸಂತ್ರಸ್ತ ಮಹಿಳೆಗೆ ಹಿಂತಿರುಗಿಸಿದ್ದಾರೆ. ಕದ್ದ ಚಿನ್ನಾಭರಣಗಳನ್ನು ಆರೋಪಿಗಳು ನುಂಗಿದ ಬಳಿಕ ಅವುಗಳನ್ನು ಮರಳಿ ಪಡೆಯಲು ಮುಂಬೈ ಪೊಲೀಸರು ಇಂತಹ ವಿಧಾನ ಬಳಸಿರುವ ಘಟನೆಗಳು ಈ ಹಿಂದೆ ಕೂಡ ವರದಿಯಾಗಿವೆ. ಕಳೆದ ವರ್ಷ ಜುಲೈನಲ್ಲಿ ಮತ್ತೊಬ್ಬ ಆರೋಪಿಗೆ ಎರಡು ಡಜನ್‌ಗೂ ಹೆಚ್ಚು ಬಾಳೆಹಣ್ಣುಗಳನ್ನು ತಿನ್ನಿಸಿ, ವಿರೇಚಕಗಳನ್ನು ಬೆರೆಸಿದ ಹಾಲನ್ನೂ ಕುಡಿಸಲಾಗಿತ್ತು. ಈ ಮೂಲಕ ನುಂಗಿದ್ದ ಚಿನ್ನದ ಸರವನ್ನು ಹೊರತೆಗೆಯಲಾಗಿತ್ತು.

ಇದಕ್ಕೂ ಮೊದಲು ದೊಡ್ಡ ಪೆಂಡೆಂಟ್ ಹೊಂದಿದ್ದ ಚಿನ್ನದ ಸರವನ್ನು ನುಂಗಿದ್ದ ಆರೋಪಿಗೆ ಐದು ಡಜನ್‌ ಬಾಳೆಹಣ್ಣುಗಳನ್ನು ತಿನ್ನಿಸಲಾಗಿತ್ತು. ಬಳಿಕ ಆಭರಣ ಹೊರಬಂದಿತ್ತು. ಆದರೆ ಅದನ್ನು ಮರಳಿ ಪಡೆದ ಸಂತ್ರಸ್ತ ಅಸಹ್ಯಗೊಂಡು ನೇರವಾಗಿ ಕೈಯಿಂದ ಮುಟ್ಟಲು ನಿರಾಕರಿಸಿದ್ದ. ಪ್ಲಾಸ್ಟಿಕ್ ಚೀಲದಲ್ಲಿ ಆಭರಣವನ್ನು ಹಾಕಿಕೊಂಡು ಆಭರಣ ವ್ಯಾಪಾರಿಯ ಬಳಿಗೆ ಕೊಂಡೊಯ್ದಿದ್ದ ಎಂದು ವರದಿಯಾಗಿದೆ.

In an unusual recovery operation, Mumbai Police reportedly made a theft suspect consume more than 50 bananas to help retrieve a stolen gold chain that he had allegedly swallowed after his arrest. The chain was eventually recovered from his stool, cleaned and disinfected before being returned to the woman who reported the theft.