Mangalore Crime, Mangalore Police, Delhi Thieves: ದೆಹಲಿ ಮೂಲದ ಇಬ್ಬರು ಕುಖ್ಯಾತ ಮನೆಗಳ್ಳರ ಬಂಧನ ; ಬರ್ಕೆ, ಅಳಕೆಯಲ್ಲಿ ಮನೆ ಕಳ್ಳತನ, 18 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿ ಸೊತ್ತು ವಶಕ್ಕೆ, ರೈಲಿನಲ್ಲಿ ತೆರಳುತ್ತಿದ್ದಾಗಲೇ ವಡೋದರಾದಲ್ಲಿ ಬಂಧನ

03-10-26 06:39 pm       HK News Staffer   ಕ್ರೈಂ

ಮಂಗಳೂರು ನಗರದ ಬರ್ಕೆ ಮತ್ತು ಬಂದರು ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆ ಕಳ್ಳತನ ನಡೆಸಿದ ಪ್ರಕರಣ ಸಂಬಂಧಿಸಿ ಪೊಲೀಸರು ದೆಹಲಿ ಮೂಲದ ಕುಖ್ಯಾತ ಮನೆ ಕಳ್ಳರನ್ನು ಬಂಧಿಸಿದ್ದು 18 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಅ.3: ಮಂಗಳೂರು ನಗರದ ಬರ್ಕೆ ಮತ್ತು ಬಂದರು ಠಾಣೆ ವ್ಯಾಪ್ತಿಯಲ್ಲಿ ಎರಡು ಮನೆ ಕಳ್ಳತನ ನಡೆಸಿದ ಪ್ರಕರಣ ಸಂಬಂಧಿಸಿ ಪೊಲೀಸರು ದೆಹಲಿ ಮೂಲದ ಕುಖ್ಯಾತ ಮನೆ ಕಳ್ಳರನ್ನು ಬಂಧಿಸಿದ್ದು 18 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 

ಬಂಧಿತರನ್ನು ಈಶಾನ್ಯ ದೆಹಲಿಯ ಗೋಕುಲ್ ಪುರಿ ನಿವಾಸಿ ಅರ್ಮಾನ್ ಖಾನ್ @ ಅಮನ್ ಸೋನಿ (34) ಮತ್ತು ನವದೆಹಲಿಯ ಸುಲ್ತಾನ್ ಪುರಿ ನಿವಾಸಿ ಸಂಜೀವ್ ಕುಮಾರ್ @ ಜಾನಿ (34) ಎಂದು ಗುರುತಿಸಲಾಗಿದೆ. ಅಳಕೆ ಕಂಬ್ಲ ಕ್ರಾಸ್ ರಸ್ತೆಯಲ್ಲಿರುವ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್ ಮನೆಯೊಂದರಲ್ಲಿ ಸರ.28ರಂದು ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಮನೆಗೆ ಲಾಕ್ ಹಾಕಿ ಮಾರುಕಟ್ಟೆಗೆ ತೆರಳಿದ್ದು, ಸಂಜೆ ಸುಮಾರು 5 ಗಂಟೆಗೆ ಮನೆಗೆ ಹಿಂದಿರುಗಿದಾಗ ಮನೆ ಮುಂಭಾಗದ ಬಾಗಿಲಿನ ಕೊಂಡಿಯನ್ನು ಮುರಿದು ಒಳನುಗ್ಗಿದ ಕಳ್ಳರು ಸುಮಾರು ₹14 ಲಕ್ಷ ಮೌಲ್ಯದ ಚಿನ್ನಾಭರಣಗಳು, ನಗದು ಹಣ, ವಾಚ್ ಹಾಗೂ ಒಂದು ಟ್ರಾಲಿ ಬ್ಯಾಗ್ ಸೇರಿದಂತೆ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 121/2026, ಕಲಂ 331(3), 305 BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಅದೇ ರೀತಿ ಸೆ.27ರಂದು ಹಗಲು ವೇಳೆಯಲ್ಲಿ ಬರ್ಕೆ ಪೊಲೀಸ್ ಠಾಣಾ ಸರಹದ್ದಿನ ಬೊಕ್ಕಪಟ್ನ ರಸ್ತೆಯ ಮನೆಯೊಂದರಲ್ಲಿ ಲಾಕರ್ ಒಡೆದು ಕಳವು ಮಾಡಲು ಯಾವುದೇ ಬೆಲೆಬಾಳುವ ಸೊತ್ತು ದೊರೆಯದೇ, ಚೆಕ್ ಪುಸ್ತಕಗಳನ್ನು ಕಳವು ಮಾಡಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆ ಅ.ಕ್ರ 86/2026 ಕಲಂ 331(3), 305 ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು. 

ಪ್ರಕರಣಗಳ ತನಿಖೆಯನ್ನು ಕೈಗೊಂಡು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡದ ಮೂಲಕ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಆರೋಪಿಗಳು ಮನೆ ಕಳ್ಳತನ ನಡೆಸಿದ ಬಳಿಕ ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿರುವುದು ಪತ್ತೆಯಾಗಿದೆ‌. ತಕ್ಷಣ ಗುಜರಾತ್ ರಾಜ್ಯದ ವಡೋದರಾ ಪೊಲೀಸರ ಸಹಾಯ ಪಡೆದಿದ್ದು ರೈಲಿನಲ್ಲಿ ಸಾಗುತ್ತಿದ್ದಾಗಲೇ ವಶಕ್ಕೆ ಪಡೆಯಲು ಸೂಚಿಸಲಾಗಿತ್ತು. 

ಪೊಲೀಸರ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾದ 24 ಗಂಟೆಗಳ ಒಳಗಾಗಿ ಸೆ.29ರಂದು ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ ಕಳವು ಮಾಡಲಾಗಿದ್ದ ಎಲ್ಲಾ ಸೊತ್ತುಗಳನ್ನು ವಶಪಡಿಸಿದ್ದು, ಸೊತ್ತಿನ ಒಟ್ಟು ಮೌಲ್ಯ ಸುಮಾರು ₹18 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. 

ಬಂಧಿತ ಆರೋಪಿಗಳ ಪೈಕಿ ಅರ್ಮಾನ್ ಖಾನ್ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದು ಮತ್ತು ಈತನ ವಿರುದ್ದ ವಾರಂಟು ಹಾಗೂ ಪ್ರೊಕ್ಲಮೇಶನ್ ಬಾಕಿ ಇದ್ದು, ಸಂಬಂಧಪಟ್ಟ ಠಾಣೆಗಳಿಗೆ ಮುಂದಿನ ಕ್ರಮಕ್ಕಾಗಿ ಮಾಹಿತಿಯನ್ನು ನೀಡಲಾಗಿದೆ.