ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ ಬೆಳ್ತಂಗಡಿಯ ಹುಡುಗರು ; ಒಬ್ಬ ಸಮುದ್ರ ಪಾಲಾದರೂ ಮನೆಯವರಿಗೆ ತಿಳಿಸದೆ ಮೌನ!

06-10-26 01:23 pm       HK News Staffer   ಕ್ರೈಂ

ಸ್ನೇಹಿತರೊಂದಿಗೆ ಹುಲಿವೇಷದ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಮೂಲದ 9ನೇ ತರಗತಿ ವಿದ್ಯಾರ್ಥಿ ಪಣಂಬೂರು ಬೀಚ್ ನಲ್ಲಿ ಆಟವಾಡಲು ಹೋಗಿ ನೀರುಪಾಲಾದ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

ಮಂಗಳೂರು, ಅ.6: ಸ್ನೇಹಿತರೊಂದಿಗೆ ಹುಲಿವೇಷದ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಬೆಳ್ತಂಗಡಿ ಮೂಲದ 9ನೇ ತರಗತಿ ವಿದ್ಯಾರ್ಥಿ ಪಣಂಬೂರು ಬೀಚ್ ನಲ್ಲಿ ಆಟವಾಡಲು ಹೋಗಿ ನೀರುಪಾಲಾದ ಘಟನೆ ಭಾನುವಾರ ಸಂಜೆ ಸಂಭವಿಸಿದೆ. 

ಬೆಳ್ತಂಗಡಿ ಕಸಬಾ ಗ್ರಾಮದ ರೆಂಕೆದಗುತ್ತು ನಿವಾಸಿ ಸೇಸಪ್ಪ ಅವರ ಪುತ್ರ ಶ್ರೇಯಸ್ ಎಸ್. ಕಂಬಾರ (15) ನೀರುಪಾಲಾದ ಬಾಲಕ. ಶ್ರೇಯಸ್ ಭಾನುವಾರ ಸಂಜೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಪಣಂಬೂರು ಸಮುದ್ರ ತೀರದಲ್ಲಿ ಆಟವಾಡಲು ಬಂದಿದ್ದು ಈ ವೇಳೆ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋಗಿ ನೀರುಪಾಲಾಗಿದ್ದ. 

ನವರಾತ್ರಿ ಹಬ್ಬದ ಪ್ರಯುಕ್ತ ಮಂಗಳೂರಿನಲ್ಲಿ ಹುಲಿ ವೇಷ ಹಾಕಲು ಶ್ರೇಯಸ್ ಸಿದ್ಧತೆ ಮಾಡಿದ್ದು ಇದರ ತರಬೇತಿಗಾಗಿ ಭಾನುವಾರ ಬೆಳಗ್ಗೆ ಮಂಗಳೂರಿಗೆ ಬಂದಿದ್ದ. ತರಬೇತಿ ಮುಗಿದ ನಂತರ ಸಂಜೆ ವೇಳೆಗೆ ಶ್ರೇಯಸ್ ಹಾಗೂ ಆತನ ನಾಲ್ಕು ಮಂದಿ ಸ್ನೇಹಿತರು ಸ್ಟೇಟ್ ಬ್ಯಾಂಕ್‌ನಿಂದ ಪಣಂಬೂರು ಬೀಚ್‌ಗೆ ತೆರಳಿದ್ದರು. ಸಮುದ್ರದಲ್ಲಿ ಮುಳುಗಿ ಶ್ರೇಯಸ್ ಕಾಣೆಯಾಗಿದ್ದು ಇದರಿಂದ ಹೆದರಿದ ಆತನ ಅಪ್ರಾಪ್ತ ಸ್ನೇಹಿತರು ನಡೆದ ಘಟನೆಯನ್ನು ಶ್ರೇಯಸ್‌ ಮನೆಯವರಿಗೂ ತಿಳಿಸದೆ ಮನೆಗೆ ತೆರಳಿದ್ದರು. ಅಲ್ಲದೆ, ತಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿದ್ದರು. ಗೆಳೆಯರು ಕೂಡ ಶ್ರೇಯಸ್ ಊರಿನ ಆಸುಪಾಸಿನವರೇ ಆಗಿದ್ದರು.‌

ಬಾಲಕ ಮನೆಗೆ ಬಂದಿಲ್ಲವೆಂದು ಸೋಮವಾರ ಬೆಳಗ್ಗೆ ತಂದೆ ಸೇಸಪ್ಪ ಅವರು ಸೋಮವಾರ ಬೆಳಗ್ಗೆ, ಶ್ರೇಯಸ್ ಜೊತೆಗೆ ತೆರಳಿದ್ದವರ ಮನೆಗೆ ಹೋಗಿದ್ದಾರೆ. ಈ ವೇಳೆ, ಹುಡುಗರು ಶ್ರೇಯಸ್ ಸಮುದ್ರದಲ್ಲಿ ಬಿದ್ದು ಕಾಣೆಯಾಗಿದ್ದನ್ಬು ಬಾಯಿ ಬಿಟ್ಟಿದ್ದಾರೆ. ಶೇಷಪ್ಪ ಬಳಿಕ ಪಣಂಬೂರು ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರನ್ನು ದಾಖಲಿಸಿದ್ದಾರೆ. 

ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಠಾಣೆಯವರು ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶವ ಪತ್ತೆಯಾಗದ ಹಿನ್ನೆಲೆಯಲ್ಲಿ ಜೊತೆಗಿದ್ದ ಸ್ನೇಹಿತರನ್ನು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ.