ಮೈಸೂರು ದಸರಾ ನೋಡಿ ವಾಪಸಾಗುತ್ತಿದ್ದ ವೇಳೆ ಬೆಳ್ತಂಗಡಿ ಯುವಕ ಸಾವು ; ಸ್ಕೂಟಿ ಡಿಕ್ಕಿಗೆ ಬೈಕ್ ಸವಾರ ಬಲಿ

20-10-26 10:56 am       HK News Staffer   ಕ್ರೈಂ

ಮೈಸೂರು ದಸರಾದಲ್ಲಿ ಕಂಬಳ ವೀಕ್ಷಿಸಿ ಬೈಕ್‌ನಲ್ಲಿ ಬೆಂಗಳೂರಿಗೆ ಮರಳುತ್ತಿದ್ದ ಬೆಳ್ತಂಗಡಿ ತಾಲೂಕಿನ ಯುವಕನೊಬ್ಬ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಸಿದ್ಧಾರ್ಥನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬೆಳ್ತಂಗಡಿ, ಅ.20 : ಮೈಸೂರು ದಸರಾದಲ್ಲಿ ಕಂಬಳ ವೀಕ್ಷಿಸಿ ಬೈಕ್‌ನಲ್ಲಿ ಬೆಂಗಳೂರಿಗೆ ಮರಳುತ್ತಿದ್ದ ಬೆಳ್ತಂಗಡಿ ತಾಲೂಕಿನ ಯುವಕನೊಬ್ಬ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೈಸೂರಿನ ಸಿದ್ಧಾರ್ಥನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈ ದುರ್ಘಟನೆ ಸಂಭವಿಸಿದೆ. 

ಕಳೆಂಜ ಗ್ರಾಮದ ಕೊಳಂಬೆ ನಿವಾಸಿ ಮನೋಹರ (23) ಮೃತಪಟ್ಟ ದುರ್ದೈವಿ. ಕೊಳಂಬೆ ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಮನೋಹರ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 18ರಂದು ಸ್ನೇಹಿತ ದೀಕ್ಷಿತ್ ಅವರೊಂದಿಗೆ ಬೈಕ್‌ನಲ್ಲಿ ಮೈಸೂರಿಗೆ ತೆರಳಿ ದಸರಾ ಉತ್ಸವ ವೀಕ್ಷಿಸಿದ್ದರು. ಬಳಿಕ ಅದೇ ರಾತ್ರಿ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಮೈಸೂರಿನ ಸಿದ್ಧಾರ್ಥ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275ರ ಟ್ರಾಫಿಕ್ ಸಿಗ್ನಲ್ ಬಳಿ ಬೈಕ್ ಸಾಗುತ್ತಿದ್ದಾಗ ಸ್ಕೂಟಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟ ಮನೋಹರ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನ ಹಿಂಬದಿ ಸವಾರನಾಗಿದ್ದ ಕೊಯ್ಯೂರಿನ ಬಿರ್ಕೆ ನಿವಾಸಿ ದೀಕ್ಷಿತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.