Bantwal Crime: ದಾಂಪತ್ಯ ಕಲಹ ; ಹೆರಿಗೆ ತೆರಳಿದ್ದ ಬೆಳಗಾವಿ ಮೂಲದ ಪತ್ನಿಯನ್ನು ಮನೆಗೆ ಕರೆತಂದು ಹೊಡೆದು ಸಾಯಿಸಿದ ದುರುಳ ಪತಿ, ಬಂಟ್ವಾಳ ಪೊಲೀಸರಿಂದ ಆರೋಪಿ ಬಂಧನ

24-10-26 12:51 pm       HK News Staffer   ಕ್ರೈಂ

ಗಂಡನೇ ತನ್ನ ಪತ್ನಿಯನ್ನು ಹೊಡೆದು ಕೊಲೆಗೈದು ಮುಚ್ಚಿಟ್ಟ ಆರೋಪ ಕೇಳಿಬಂದಿದ್ದು ಬಂಟ್ವಾಳ ಪೊಲೀಸರು ಬೆಳಗಾವಿ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ‌ಈ ಬಗ್ಗೆ ಬೆಳಗಾವಿ ಅಥಣಿ ನಿವಾಸಿ ಅರುಣ್‌ ಮಹಾದೇವ್‌ ದೇಸಂಗಿ (26) ಎಂಬವರ ದೂರಿನಂತೆ, ಆರೋಪಿ ಜಮಖಂಡಿ ನಿವಾಸಿ, ಬಂಟ್ವಾಳದ ವಗ್ಗದಲ್ಲಿ ವಾಸವಿದ್ದ ಸಂಜೀವ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

ಮಂಗಳೂರು, ಅ.24: ಗಂಡನೇ ತನ್ನ ಪತ್ನಿಯನ್ನು ಹೊಡೆದು ಕೊಲೆಗೈದು ಮುಚ್ಚಿಟ್ಟ ಆರೋಪ ಕೇಳಿಬಂದಿದ್ದು ಬಂಟ್ವಾಳ ಪೊಲೀಸರು ಬೆಳಗಾವಿ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ. ‌ಈ ಬಗ್ಗೆ ಬೆಳಗಾವಿ ಅಥಣಿ ನಿವಾಸಿ ಅರುಣ್‌ ಮಹಾದೇವ್‌ ದೇಸಂಗಿ (26) ಎಂಬವರ ದೂರಿನಂತೆ, ಆರೋಪಿ ಜಮಖಂಡಿ ನಿವಾಸಿ, ಬಂಟ್ವಾಳದ ವಗ್ಗದಲ್ಲಿ ವಾಸವಿದ್ದ ಸಂಜೀವ ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. 

ಅರುಣ್ ಅವರ ತಂಗಿ ಸುನೀತಾ ದೇಸಂಗಿ (34) ಎಂಬವರನ್ನು   ಬಾಗಲಕೋಟೆ, ಜಮಖಂಡಿ ನಿವಾಸಿ ಆರೋಪಿತ ಸಂಜೀವಕುಮಾರ್‌ (36) ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು, ದಂಪತಿ ಬಂಟ್ವಾಳ ವಗ್ಗ ಎಂಬಲ್ಲಿ ವಾಸವಿದ್ದರು. ದಂಪತಿ ನಡುವೆ ಈ ಹಿಂದೆ ಹಲವು ಬಾರಿ ವೈವಾಹಿಕ ಕಲಹ ನಡೆಯುತ್ತಿದ್ದು, ಸಂಬಂಧಿಕರು ಸೇರಿ ರಾಜಿ ಸಂಧಾನ ಮಾಡಿದ್ದರು. ಈ ನಡುವೆ, ಸುನೀತಾ ಹೆರಿಗೆಯಾಗಿ ತವರು ಮನೆಯಲ್ಲಿದ್ದು ಆರೋಪಿ ಸಂಜೀವ ಅ.4 ರಂದು ಬಂಟ್ವಾಳದ ತನ್ನ ಮನೆಗೆ ಕರೆತಂದಿದ್ದ. 

ಮೊನ್ನೆ ಅ.22 ರಂದು ಸುನೀತಾರವರು ಅಣ್ಣ ಅರುಣ್ ಗೆ  ಕರೆ ಮಾಡಿ, ಗಂಡ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿರುವ ಬಗ್ಗೆ ತಿಳಿಸಿದ್ದ. ಮರುದಿ‌ನ 23ರಂದು ಮುಂಜಾನೆ ಆರೋಪಿ ಸಂಜೀವ, ಭಾವ ಅರುಣ್ ಗೆ ಕರೆ ಮಾಡಿ ಸುನೀತಾ ಅರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದ.‌ ಆದರೆ ಅರುಣ್ ಬಂದು ನೋಡಿದಾಗ, ಸುನಿತಾ ಮೃತಪಟ್ಟಿದ್ದು, ಶರೀರವನ್ನು ನೋಡಿದಾಗ ಹಲ್ಲೆ ನಡೆಸಿದ ಗಾಯಗಳು ಹಾಗೂ ರಕ್ತ ಕಂಡುಬಂದಿತ್ತು. 

ಆರೋಪಿ ಸಂಜೀವಕುಮಾರ್ ಪತ್ನಿ ಸುನಿತಾಗೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುತ್ತಾನೆ ಎಂಬುದಾಗಿ ಅರುಣ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2026, ಕಲಂ:103 BNS 2023 ರಂತೆ ಪ್ರಕರಣ ದಾಖಲಿಸಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.