ಉದ್ಯಮಿಗಳಿಗೆ ಕೊಲೆ ಬೆದರಿಕೆ ಪ್ರಕರಣ ; ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಲ್ಲಿ ಬೆದರಿಕೆ ಕರೆ ಮಾಡುತ್ತಿದ್ದ ಆರೋಪಿ ಬಂಧನ

24-10-26 05:00 pm       HK News Staffer   ಕ್ರೈಂ

ಜಿಲ್ಲೆಯ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ಕೋಟ್ಯಂತರ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುರೇಶ್ ಅಮೀನ್ (38) ಎಂಬಾತನನ್ನು ಬಂಧಿಸಿದ್ದಾರೆ. ಕಾಪು ತಾಲೂಕಿನ ಎರ್ಮಾಳು ಬಡಾ ಗ್ರಾಮದ ಬಟ್ರತೋಟ ಹೌಸ್ ನಿವಾಸಿಯಾಗಿರುವ ಈತ, ಭೂಗತ ಪಾತಕಿ ಹೇಮಂತ್ ಪೂಜಾರಿಗೆ ಬೆದರಿಕೆಗೆ ಒಳಗಾದ ಉದ್ಯಮಿಗಳು ಹಾಗೂ ಗಣ್ಯರ ಮೊಬೈಲ್ ಸಂಖ್ಯೆಗಳು ಮತ್ತು ಇತರ ಮಾಹಿತಿಗಳನ್ನು ಒದಗಿಸುತ್ತಿದ್ದ ಎನ್ನಲಾಗಿದೆ.

ಉಡುಪಿ, ಅ.24: ಜಿಲ್ಲೆಯ ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ಕೋಟ್ಯಂತರ ರೂಪಾಯಿ ಹಣ ನೀಡುವಂತೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುರೇಶ್ ಅಮೀನ್ (38) ಎಂಬಾತನನ್ನು ಬಂಧಿಸಿದ್ದಾರೆ. ಕಾಪು ತಾಲೂಕಿನ ಎರ್ಮಾಳು ಬಡಾ ಗ್ರಾಮದ ಬಟ್ರತೋಟ ಹೌಸ್ ನಿವಾಸಿಯಾಗಿರುವ ಈತ, ಭೂಗತ ಪಾತಕಿ ಹೇಮಂತ್ ಪೂಜಾರಿಗೆ ಬೆದರಿಕೆಗೆ ಒಳಗಾದ ಉದ್ಯಮಿಗಳು ಹಾಗೂ ಗಣ್ಯರ ಮೊಬೈಲ್ ಸಂಖ್ಯೆಗಳು ಮತ್ತು ಇತರ ಮಾಹಿತಿಗಳನ್ನು ಒದಗಿಸುತ್ತಿದ್ದ ಎನ್ನಲಾಗಿದೆ.

ಹೇಮಂತ ಪೂಜಾರಿ ಬೆದರಿಕೆ ಹಾಕಿದ ಆರೋಪದಲ್ಲಿ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಐದು, ಶಿರ್ವ ಠಾಣೆಯಲ್ಲಿ ಒಂದು, ಕಾಪು ಠಾಣೆಯಲ್ಲಿ ಒಂದು ಹಾಗೂ ಮಣಿಪಾಲ ಠಾಣೆಯಲ್ಲಿ ಒಂದು ಪ್ರಕರಣ ಸೇರಿದಂತೆ ಒಟ್ಟು ಎಂಟು ಪ್ರಕರಣಗಳು ದಾಖಲಾಗಿವೆ. ಉದ್ಯಮಿಗಳಿಗೆ ಹಣ ನೀಡುವಂತೆ ಒತ್ತಡ ಹೇರುವುದು ಮತ್ತು ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ ಈ ಬೆದರಿಕೆಯನ್ನು ವಾಸ್ತವವಾಗಿ ಯಾರು ಮಾಡಿದ್ದಾರೆ, ನಿಜಕ್ಕೂ ಹೇಮಂತ ಪೂಜಾರಿ ಎಂಬ ಭೂಗತ ಪಾತಕಿ ಇದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ. ಈ ಹಿಂದೆ ಹೇಮಂತ ಪೂಜಾರಿ ಮುಂಬೈನಲ್ಲಿ ಅಪರಾಧ ಲೋಕದಲ್ಲಿದ್ದು ಆನಂತರ ವಿದೇಶಕ್ಕೆ ತೆರಳಿ ಸಾವನ್ನಪ್ಪಿದ್ದಾನೆಂದು ಹೇಳಲಾಗಿತ್ತು. 

ಇದೀಗ, ಹೇಮಂತ ಪೂಜಾರಿ ಪರವಾಗಿ ಕರೆ ಮಾಡುತ್ತಿದ್ದ ಸುರೇಶ್ ಅಮೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು ಆತನನ್ನು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ದಾಖಲಾಗಿರುವ ಪ್ರಕರಣವೊಂದರಲ್ಲಿ ಉದ್ಯಮಿಯೊಬ್ಬರು ಬೇಡಿಕೆಯಿಟ್ಟ ಹಣ ನೀಡದೆ, ದೂರವಾಣಿ ಕರೆಗಳಿಗೂ ಪ್ರತಿಕ್ರಿಯಿಸಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆ ಉದ್ಯಮಿಯನ್ನು ಕೊಲೆ ಮಾಡಲು ಹೇಮಂತ್ ಪೂಜಾರಿ ಮತ್ತು ಸುರೇಶ್ ಅಮೀನ್ ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಹೇಮಂತ್ ಪೂಜಾರಿ, ಸುರೇಶ್ ಅಮೀನ್‌ಗೆ ₹5 ಲಕ್ಷ ಕಳುಹಿಸಿದ್ದ ಎನ್ನಲಾಗಿದೆ. ಈ ಮೊತ್ತದಲ್ಲಿ ಖರ್ಚಾದ ಹಣವನ್ನು ಹೊರತುಪಡಿಸಿ ಉಳಿದ ₹4.13 ಲಕ್ಷವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬಳಿಕ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ ತನಿಖೆ ಮುಂದುವರಿದಿದೆ.