ಆನ್ಲೈನಲ್ಲಿ ಕೇರಳ ಲಾಟರಿ ಗೆದ್ದ ಮಂಗಳೂರಿನ ವ್ಯಕ್ತಿಗೆ ಚೊಂಬು ; ಲಾಟರಿ ಹಣ ಪಡೆಯಲು ಶುಲ್ಕದ ನೆಪ, ಏಳು ಲಕ್ಷ ಪೀಕಿಸಿಕೊಂಡ ಖದೀಮರು

30-10-26 05:16 pm       HK News Staffer   ಕ್ರೈಂ

ಆನ್ಲೈನ್ ಮೂಲಕ ಕೇರಳ ರಾಜ್ಯದ ಲಾಟರಿ ವಿಜೇತರಾಗಿದ್ದೀರಿ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ, ಆ ಮೊತ್ತ ಪಡೆಯುವುದಕ್ಕಾಗಿ ತೆರಿಗೆ ಇನ್ನಿತರ ಶುಲ್ಕಗಳನ್ನು ಪಾವತಿಸಬೇಕೆಂದು ಹೇಳಿ ಬರೋಬ್ಬರಿ 7 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪೀಕಿಸಿ ವಂಚಿಸಿದ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಅ.30: ಆನ್ಲೈನ್ ಮೂಲಕ ಕೇರಳ ರಾಜ್ಯದ ಲಾಟರಿ ವಿಜೇತರಾಗಿದ್ದೀರಿ ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ, ಆ ಮೊತ್ತ ಪಡೆಯುವುದಕ್ಕಾಗಿ ತೆರಿಗೆ ಇನ್ನಿತರ ಶುಲ್ಕಗಳನ್ನು ಪಾವತಿಸಬೇಕೆಂದು ಹೇಳಿ ಬರೋಬ್ಬರಿ 7 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಪೀಕಿಸಿ ವಂಚಿಸಿದ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪೌಡರ್ ಕೋಟಿಂಗ್ ಶಾಪ್  ನಡೆಸಿಕೊಂಡಿರುವ ಸಂತ್ರಸ್ತ ವ್ಯಕ್ತಿ ಕಳೆದ ಸೆ.25ರಂದು ರಾತ್ರಿ 8.30 ಗಂಟೆಗೆ ಮನೆಯಲ್ಲಿ ತನ್ನ ಮೊಬೈಲ್ ಫೋನಿನಲ್ಲಿ ಫೇಸ್ ಬುಕ್ ನೋಡುತ್ತಿದ್ದಾಗ ಕೇರಳ ರಾಜ್ಯದ ಲಾಟರಿಯನ್ನು ಆನ್ ಲೈನ್ ಮೂಲಕ ಮಾರಾಟದ ಬಗ್ಗೆ ವೀಡಿಯೋ ನೋಡಿದ್ದರು. ಇದರಂತೆ, ಸೆ.27ರಂದು ಆನ್ ಲೈನ್ ಮೂಲಕ ಲಾಟರಿ ಖರೀದಿಸಲೆಂದು ಫೇಸ್ ಬುಕ್ ನಲ್ಲಿ ನೀಡಿದ್ದ ಮೊಬೈಲ್ ನಂಬರಿಗೆ ಕರೆ ಮಾಡಿದ್ದರು.‌

ಕರೆ ಮಾಡಿ ಲಾಟರಿ ಟಿಕೇಟ್ ಖರೀದಿಸುವ ಬಗ್ಗೆ ಮಾತನಾಡಿದ್ದು ನಂತರ ಅವರು ವಾಟ್ಸಪ್ ಮೂಲಕ ಮೊತ್ತ ಪಾವತಿಗೆ ಸ್ಕ್ಯಾನರ್ ಕಳುಹಿಸಿದ್ದರು. ಸ್ಕ್ಯಾನರ್ ಮೂಲಕ ರೂ. 200/-ವರ್ಗಾವಣೆ ಮಾಡಿದ್ದು ಟಿಕೆಟ್ ಪಡೆದಿದ್ದಾಗಿ ತಿಳಿಸಿದ್ದರು. ಅದೇ ದಿನ ಸಂಜೆ ಸುಮಾರು 4 ಗಂಟೆಗೆ ವಾಟ್ಸಪ್ ನಲ್ಲಿ ಆನ್ ಲೈನ್ ಲಾಟರಿಯಲ್ಲಿ ರೂ. 12,00,000/- ಮತ್ತು ರೂ. 5,00,000/- ಹಣ ಬಂದ ಬಗ್ಗೆ ಮೆಸೇಜ್ ಮಾಡಿದ್ದರು. ಆದರೆ ಲಾಟರಿಯಲ್ಲಿ ಬಂದ ಹಣ ಡ್ರಾ ಮಾಡಲು ಟ್ಯಾಕ್ಸ್ ಹಾಗೂ ಇತರ ಚಾರ್ಜ್ ಪಾವತಿಸಬೇಕೆಂದು ಹೇಳಿಕೊಂಡಿದ್ದು ಹಣ ಪಾವತಿಗೆ ಸೂಚಿಸಿದ್ದರು. 

ಆಮೂಲಕ ಸೆ.27 ರಿಂದ ತೊಡಗಿ ಅ.27ರ ವರೆಗೆ ಬೇರೆ ಬೇರೆ ದಿನಗಳಂದು ಸಂತ್ರಸ್ತ ವ್ಯಕ್ತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೆನರಾ ಬ್ಯಾಂಕ್ ಖಾತೆಗಳಿಂದ ಒಟ್ಟು ರೂ. 7,22,804 ರೂಪಾಯಿ ಮೊತ್ತವನ್ನು ವರ್ಗಾವಣೆ ಮಾಡಿದ್ದಾರೆ. ಆಬಳಿಕ ತಾನು ವಿವಿಧ ಶುಲ್ಕದ ರೂಪದಲ್ಲಿ ವರ್ಗಾವಣೆ ಮಾಡಿರುವ ಹಣವನ್ನು ವಾಪಾಸು ನೀಡುವಂತೆ ಕೇಳಿಕೊಂಡಿದ್ದು, ವರ್ಗಾವಣೆ ಮಾಡಿದ ಹಣವಾಗಲೀ, ಲಾಟರಿಯ ಹಣವಾಗಲೀ ನೀಡಿರುವುದಿಲ್ಲ. 

ಈ ರೀತಿ ಯಾರೋ ಅಪರಿಚಿತ ವ್ಯಕ್ತಿಗಳು ಕೇರಳ ರಾಜ್ಯದ ಆನ್ ಲೈನ್ ಲಾಟರಿ ಹೆಸರಿನಲ್ಲಿ ಆನ್ ಲೈನ್ ಮೂಲಕ ಮೋಸದಿಂದ ಒಟ್ಟು ರೂ.7,22,804-ಹಣವನ್ನು ವರ್ಗಾಯಿಸಿಕೊಂಡಿದ್ದು ಆರೋಪಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.