ಪ್ರೀತಿಸುತ್ತಿದ್ದ ಯುವತಿಯ ಖಾಸಗಿ ಫೋಟೊ ಜಾಲತಾಣದಲ್ಲಿ ಹಾಕಿ ಬ್ಲಾಕ್ಮೇಲ್ ; ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಕಲೇಶಪುರದಲ್ಲಿ ಆತ್ಮಹತ್ಯೆ, ಮುಸ್ಲಿಂ ಯುವಕನ ವಿರುದ್ಧ ಕೇಸು

01-11-26 04:08 pm       HK News Staffer   ಕ್ರೈಂ

ಪ್ರೀತಿಸುತ್ತಿದ್ದ ಯುವಕ ತನ್ನ ಖಾಸಗಿ ಫೋಟೋಗಳನ್ನು ಜಾಲತಾಣದಲ್ಲಿ ಹಾಕಿ ಬ್ಲಾಕ್ಮೇಲ್ ಮಾಡಿದ್ದರಿಂದ ಮನನೊಂದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರ ತಾಲೂಕು ಬೆಳಗೋಡು ಗ್ರಾಮದಲ್ಲಿ ನಡೆದಿದೆ.

ಸಕಲೇಶಪುರ, ನ.1: ಪ್ರೀತಿಸುತ್ತಿದ್ದ ಯುವಕ ತನ್ನ ಖಾಸಗಿ ಫೋಟೋಗಳನ್ನು ಜಾಲತಾಣದಲ್ಲಿ ಹಾಕಿ ಬ್ಲಾಕ್ಮೇಲ್ ಮಾಡಿದ್ದರಿಂದ ಮನನೊಂದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಕಲೇಶಪುರ ತಾಲೂಕು ಬೆಳಗೋಡು ಗ್ರಾಮದಲ್ಲಿ ನಡೆದಿದೆ.

ಬೆಳಗೋಡು ಗ್ರಾಮದ ಭವಿತಾ ಎಂಬವರ ಮಗಳು ಹಿಮಾ ಮಂಗಳೂರಿನ ಕರಾವಳಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಬಿ.ಇ ವ್ಯಾಸಂಗ ಮಾಡುತ್ತಿದ್ದಳು. ಅರೇಹಳ್ಳಿಯ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅವಳಿಗೆ ನೌಶಾದ್ ಎಂಬಾತನ ಪರಿಚಯವಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಹಿಮಾ ಬಳಿಕ ಮಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಸೇರಿದ ಬಳಿಕವೂ ನೌಶಾದ್ ಅಲ್ಲಿಗೆ ಹೋಗುತ್ತಿದ್ದು ಇಬ್ಬರೂ ಎಲ್ಲ ಕಡೆ ಸುತ್ತಾಡುತ್ತಿದ್ದರು. ಇವರ ಪ್ರೀತಿಯ ವಿಚಾರವು ಮನೆಯವರಿಗೆ ಗೊತ್ತಾಗಿ ನೌಶಾದ್ ನನ್ನು ಪ್ರೀತಿಸಬೇಡ ಬಿಟ್ಟು ಬಿಡು, ಚೆನ್ನಾಗಿ ಓದು ಎಂದು ಬುದ್ಧಿ ಹೇಳಿದ್ದರು. ಇದಾದ ನಂತರ ತಂದೆ- ತಾಯಿಗೆ ತೊಂದರೆ ಕೊಡಬಾರದು ಎಂದುಕೊಂಡು ನಮ್ಮ ಪ್ರೀತಿಯನ್ನು ಇಲ್ಲಿಗೆ ನಿಲ್ಲಿಸಿ ಬಿಡೋಣ ಎಂದು ಹಿಮಾ ನೌಶಾದ್‌ಗೆ ಹೇಳಿದ್ದಳು. ಆದರೆ ಅದಕ್ಕೊಪ್ಪದೆ ಹಿಮಾಳೊಂದಿಗೆ ಆತ ಜಗಳ ಮಾಡಿದ್ದು ಸಾಕಷ್ಟು ಬಾರಿ ಹೇಳಿದರೂ, ಕೇಳದೆ ಇಬ್ಬರು ಕೈ ಹಿಡಿದು ಸುತ್ತಾಡಿದ ಕೆಲವೊಂದು ಫೋಟೋಗಳನ್ನು ತನ್ನ ಇನ್ ಸ್ಟಾ ಗ್ರಾಮ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದ. 

ಆನಂತರ ಫೋಟೋ ಡಿಲೀಟ್ ಮಾಡು ಎಂದು ಹೇಳಿದರೂ, ಕೇಳದೆ ಬ್ಲಾಕ್ಮೇಲ್ ಮಾಡುತ್ತಿದ್ದ. ದಿನವೂ ಸತಾಯಿಸುತ್ತಿದ್ದರಿಂದ ಬೇಸರಗೊಂಡ ಹಿಮಾ ಅ.28ರಂದು ಮಧ್ಯಾಹ್ನ ಸಕಲೇಶಪುರದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೊಂದುಕೊಂಡು ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದರಿಂದ ತೀವ್ರ ಅಸ್ವಸ್ಥಳಾಗಿದ್ದ ಅವಳನ್ನು ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. 

ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ಬಳಿಕ ಮೃತಪಟ್ಟಿದ್ದಳು. ಈ ಬಗ್ಗೆ ಹೆತ್ತವರು ಪೊಲೀಸ್ ದೂರು ಕೊಟ್ಟಿದ್ದು ಹಿಮಾಳ ವೈಯುಕ್ತಿಕ ಪೋಟೋವನ್ನು ನೌಶಾದ್ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಬೆದರಿಸಿ ಬ್ಲಾಕ್ಮೇಲ್ ಮಾಡಿದ್ದರಿಂದ ಮನ ನೊಂದು ವಿಷ ಸೇವನೆ ಮಾಡಿದ್ದಾಳೆ. ಮಗಳ ಸಾವಿಗೆ ಕಾರಣನಾದ ನೌಶಾದ್‌ ವಿರುದ್ಧ ಕ್ರಮ ಜರುಗಿಸಬೇಕೆಂದು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ತಾಯಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.