ಕಾಪುವಿನ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ದಾಳಿ: ಕಟ್ಟಡ ಧ್ವಂಸ, ₹20 ಲಕ್ಷ ನಷ್ಟ: ಐವರ ವಿರುದ್ಧ ದೂರು!

02-11-26 11:31 am       HK News Staffer   ಕ್ರೈಂ

ಉದ್ಯಮಿಯೊಬ್ಬರಿಗೆ ಸೇರಿದ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿ, ಕಟ್ಟಡವನ್ನೇ ಧ್ವಂಸಗೊಳಿಸಿರುವ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ಎರಡು ಕಾಟೇಜ್‌ಗಳ ಗೋಡೆಗಳನ್ನು ಒಡೆದು ಹಾಕಿ, ಒಳಗಿದ್ದ ವಸ್ತುಗಳನ್ನು ಪುಡಿಪುಡಿ ಮಾಡಲಾಗಿದೆ. ಅಷ್ಟೇ ಅಲ್ಲ, ಸಿಸಿಟಿವಿ ಕ್ಯಾಮೆರಾಗಳನ್ನೂ ಕಳವು ಮಾಡಲಾಗಿದ್ದು, ಘಟನೆಯಿಂದ ಮಾಲೀಕರಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ನಷ್ಟವಾಗಿದೆ.

ಕಾಪು, ನವೆಂಬರ್ 2: ಉದ್ಯಮಿಯೊಬ್ಬರಿಗೆ ಸೇರಿದ ಹೋಂಸ್ಟೇ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿ, ಕಟ್ಟಡವನ್ನೇ ಧ್ವಂಸಗೊಳಿಸಿರುವ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ. ಎರಡು ಕಾಟೇಜ್‌ಗಳ ಗೋಡೆಗಳನ್ನು ಒಡೆದು ಹಾಕಿ, ಒಳಗಿದ್ದ ವಸ್ತುಗಳನ್ನು ಪುಡಿಪುಡಿ ಮಾಡಲಾಗಿದೆ. ಅಷ್ಟೇ ಅಲ್ಲ, ಸಿಸಿಟಿವಿ ಕ್ಯಾಮೆರಾಗಳನ್ನೂ ಕಳವು ಮಾಡಲಾಗಿದ್ದು, ಘಟನೆಯಿಂದ ಮಾಲೀಕರಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ನಷ್ಟವಾಗಿದೆ.

ಕಲ್ಮಾಡಿ ಮೂಲದ ಉದ್ಯಮಿ ಹರ್ಷಿತ್ ಎಸ್. ಕುಂದರ್ ಅವರಿಗೆ ಸೇರಿದ ಕಾಪುವಿನ ಪ್ರಸಿದ್ಧ ತುಲಂ ಕಾಟೇಜಸ್ ಹೋಂಸ್ಟೇಯಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 31ರಂದು ಮಧ್ಯಾಹ್ನ ಸ್ನೇಹಿತರೊಬ್ಬರು ಕರೆ ಮಾಡಿ ಹೋಂಸ್ಟೇಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇಡೀ ಆವರಣ ಧ್ವಂಸಗೊಂಡಿರುವುದು ಬೆಳಕಿಗೆ ಬಂದಿದೆ.

ದುಷ್ಕರ್ಮಿಗಳು ಅಕ್ರಮವಾಗಿ ಹೋಂಸ್ಟೇ ಆವರಣಕ್ಕೆ ಪ್ರವೇಶಿಸಿ ಎರಡು ಕಾಟೇಜ್‌ಗಳ ಗೋಡೆಗಳನ್ನು ಸಂಪೂರ್ಣವಾಗಿ ಒಡೆದು ಹಾಕಿದ್ದಾರೆ. ಕೊಠಡಿಗಳಲ್ಲಿದ್ದ ಎರಡು ಏರ್ ಕಂಡಿಷನರ್‌ಗಳನ್ನು ಕಳವು ಮಾಡಿದ್ದಾರೆ. ಬಾತ್‌ರೂಮ್‌ನ ಟೈಲ್ಸ್, ಕಮೋಡ್, ಶವರ್, ವಾಶ್‌ಬೇಸಿನ್, ಕನ್ನಡಿಗಳು ಹಾಗೂ ಬಾಗಿಲುಗಳನ್ನೂ ಒಡೆದು ಹಾಕಿದ್ದಾರೆ. ಕಟ್ಟಡದ ಅವಶೇಷಗಳು ಆವರಣದಾದ್ಯಂತ ಹರಡಿಕೊಂಡಿದ್ದು, ಒಟ್ಟು ಸುಮಾರು 20 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್ನು ಘಟನೆಯ ಸಾಕ್ಷ್ಯಗಳು ಸೆರೆಯಾಗಬಾರದು ಎಂಬ ಉದ್ದೇಶದಿಂದ ಸಿಸಿಟಿವಿ ಕ್ಯಾಮೆರಾಗಳನ್ನೂ ಕಳವು ಮಾಡಿಕೊಂಡು ಹೋಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆದರಿಕೆ ಕರೆ ಮಾಡಿದ್ದ ಗೌತಮ್ ಸೇರಿದಂತೆ ಐವರು ಶಂಕಿತರ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಾಪು ಪೊಲೀಸರು ಸ್ಥಳ ಮಹಜರು ನಡೆಸಿ ತನಿಖೆ ಕೈಗೊಂಡಿದ್ದಾರೆ. ಶಂಕಿತರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.