ಪಬ್ ಜಿ ಆಟದ ದ್ವೇಷಕ್ಕೆ ಬಾಲಕ ಬಲಿ ! ವಿಕ್ಷಿಪ್ತ ಸತ್ಯ ಬಾಯ್ಬಿಟ್ಟ ಆರೋಪಿ ಪೊಲೀಸ್ ವಶಕ್ಕೆ !

04-04-21 11:51 am       Mangaluru correspondent   ಕ್ರೈಂ

ಪಬ್ ಜಿ ಆನ್ಲೈನ್ ಆಟದಲ್ಲಿ ತನ್ನನ್ನು ನಿರಂತರ ಸೋಲಿಸುತ್ತಿದ್ದ ಎಂಬ ದ್ವೇಷ ಮತ್ತು ಆಟದ ಮೇಲಿನ ಹುಚ್ಚು ಅಹಂಕಾರ ಒಬ್ಬ ಅಮಾಯಕ ಹುಡುಗನ ಬಲಿ ಪಡೆದಿದೆ.

ಉಳ್ಳಾಲ, ಎ.4: ಪಬ್ ಜಿ ಆನ್ಲೈನ್ ಆಟದಲ್ಲಿ ತನ್ನನ್ನು ನಿರಂತರ ಸೋಲಿಸುತ್ತಿದ್ದ ಎಂಬ ದ್ವೇಷ ಮತ್ತು ಆಟದ ಮೇಲಿನ ಹುಚ್ಚು ಅಹಂಕಾರ ಒಬ್ಬ ಅಮಾಯಕ ಹುಡುಗನ ಬಲಿ ಪಡೆದಿದೆ. ಕೆ.ಸಿ ರೋಡ್ ಫಲಾಹ್ ಶಾಲೆಯ ಬಳಿ ಬಾಲಕ ಸಾವಿಗೆ ಪಬ್ ಜಿ ಆಟದಲ್ಲಿ ಇಬ್ಬರ ನಡುವಿನ ದ್ವೇಷ, ಕಲಹವೇ ಕಾರಣ ಎನ್ನುವ ಆಘಾತಕಾರಿ ಅಂಶ ಹೊರಬಿದ್ದಿದೆ. 

ಕೆ.ಸಿ ರೋಡ್ ಕೊಮರಂಗಲ ನಿವಾಸಿ ಬಸ್ ಚಾಲಕ ಹನೀಫ್ ಎಂಬವರ ಎರಡನೇ ಮಗ ಆಕಿಫ್ (12) ಎಂಬ ಬಾಲಕನ ಶವ ಫಲಾಹ್ ಶಾಲೆಯ ಮೈದಾನದಲ್ಲಿ ಪತ್ತೆಯಾಗಿತ್ತು. ಆಕಿಫ್ ಕೆ.ಸಿ. ನಗರದ ಫಲಾಹ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿ. ನಿನ್ನೆ ರಾತ್ರಿ 8.30ರ ವೇಳೆಗೆ ಮನೆಯಿಂದ ತೆರಳಿದ್ದ ಹುಡುಗ ಮತ್ತೆ ಹಿಂತಿರುಗಿ ಬಂದಿರಲಿಲ್ಲ. ಗಲಿಬಿಲಿಗೊಂಡ ಮನೆಯವರು ರಾತ್ರಿಯೇ ಆಕಿಫ್ ಗಾಗಿ ಶೋಧ ನಡೆಸಿದ್ದಾರೆ. 

ಅನುಮಾನದ ಮೇರೆಗೆ ಆಕಿಫ್ ಜೊತೆಗೆ ಪಬ್ ಜಿ ಆಡುತ್ತಿದ್ದ ಸ್ಥಳೀಯ ದೀಪಕ್ ಎಂಬ ಹುಡುಗನ ಮನೆಗೆ ಬಂದು ಆತನಲ್ಲಿ ವಿಚಾರಿಸಿದ್ದು ಆತ ಎಲ್ಲರನ್ನೂ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದ. ಆಕಿಫ್ ಮನೆಮಂದಿ ಬಳಿಕ ರಾತ್ರಿಯೇ ಪೊಲೀಸ್ ದೂರು ನೀಡಿದ್ದು ಸ್ಥಳಕ್ಕೆ ಬಂದಿದ್ದ ಪಿಎಸ್ಐ ಆರೋಪಿ ಹುಡುಗನಲ್ಲಿ ವಿಚಾರಿಸಿದಾಗ ಆಕಿಫನ್ನು ತಾನು ನೇರವಾಗಿ ಪಬ್ ಜಿ ಆಡಲು ಕರೆದಿದ್ದೆ. ಎಂಟು ಗಂಟೆಗೆ ಬಂದಿದ್ದ ಆತ ಆಟದಲ್ಲಿ ಸೋತು 8.15 ಕ್ಕೆ ಮನೆಗೆ ತೆರಳಿದ್ದಾಗಿ ಹೇಳಿದ್ದಾನೆ. ಅನುಮಾನಗೊಂಡ ಸ್ಥಳೀಯರು ಫಲಾಹ್ ಶಾಲೆಯ ಮೈದಾನದಲ್ಲಿ  (ಆರೋಪಿಯ ಮನೆ ಹತ್ತಿರ) ಆಕಿಫನ್ನು ಹುಡುಕಿದ್ದಾರೆ. ಆಗ ಹುಡುಗನ ಚಪ್ಪಲಿ ದೊರಕಿದ್ದು ಪೊಲೀಸರು ಆರೋಪಿ ಪಿಯುಸಿ ಓದುತ್ತಿದ್ದ ಹುಡುಗನನ್ನ ವಶಕ್ಕೆ ತೆಗೆದು ವಿಚಾರಿಸಿದ್ದಾರೆ. 

ಪೊಲೀಸರ ವಿಚಾರಣೆಯಲ್ಲಿ ಆರೋಪಿ ಬಾಲಕ ಸತ್ಯಾಂಶ ಹೇಳಿದ್ದಾನೆ. ಮೂರು ತಿಂಗಳ ಹಿಂದಷ್ಟೆ ಆಕಿಫ್ ಗೆ ಮೊಬೈಲ್ ಅಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಪ್ರಥಮ ಪಿಯು ಕಲಿಯುತ್ತಿದ್ದ ದೀಪಕ್ ಎನ್ನುವ ವಿದ್ಯಾರ್ಥಿಯ ಪರಿಚಯವಾಗಿತ್ತು. ಸ್ಥಳೀಯವಾಗಿ ಮೊಬೈಲ್ ಗೇಮ್, ಕಂಪ್ಯೂಟರ್ ಗೇಮ್ ಗಳಲ್ಲಿ ಚಾಲಾಕಿ ಆಗಿದ್ದ ದೀಪಕ್ ಬಳಿಕ ಆನ್ ಲೈನಲ್ಲಿ ಆಕಿಫ್ ಜೊತೆಗೆ ಪಬ್ಜಿ ಆಟ ಆಡುತ್ತಿದ್ದರು. ಆದರೆ, ಆಟದಲ್ಲಿ ಆಕಿಫ್ ಪಿಯು ವಿದ್ಯಾರ್ಥಿಯನ್ನ ನಿರಂತರವಾಗಿ ಸೋಲಿಸುತ್ತಿದ್ದ. ಈ ವಿಚಾರದಲ್ಲಿ ಇಬ್ಬರ ಮಧ್ಯೆ ದ್ವೇಷ ಬೆಳೆದಿದ್ದು ನೀನು ಬೇರೆ ಯಾರದೋ ಕೈಯಲ್ಲಿ ಮೊಬೈಲ್ ನೀಡಿ ನನ್ನನ್ನು ಸೋಲಿಸುತ್ತಿದ್ದೀಯ.. ಹಾಗಾಗಿ ನೀನು ನನ್ನ ಜೊತೆ ನೇರವಾಗಿ ಆಟಕ್ಕೆ ಬಾ ಎಂದು ನಿನ್ನೆ ರಾತ್ರಿ 9 ಗಂಟೆಗೆ ಆಕಿಫ್ ನನ್ನು ಕರೆದಿದ್ದ. ಸವಾಲು ಸ್ವೀಕರಿಸಿ ಆಕಿಫ್, ಆರೋಪಿ ಬಾಲಕನ ಜೊತೆ ಫಲಾಹ್ ಶಾಲೆಯ ಬಳಿಗೆ ತೆರಳಿದ್ದ. ಅಲ್ಲಿ ಇಬ್ಬರೂ ಆಟವಾಡಿದ್ದು ಎದುರೆದುರು ನಿಂತು ಆಟವಾಡಿದಾಗ ಆಕಿಫ್ ಸೋತಿದ್ದಾನೆ. 

ಬಾಲಕ ಆಕಿಫ್ ಆಟದಲ್ಲಿ ಸೋತಿದ್ದನ್ನು ನೋಡಿ, ದೀಪಕ್ ಹೀಯಾಳಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು ತಳ್ಳಾಟ ನಡೆದಿದೆ. ಆರೋಪಿ ಹುಡುಗನನ್ನ ಆಕಿಫ್ ತಳ್ಳಿ ಕಲ್ಲು ಎಸೆದಿದ್ದಾನೆ. ಇದರಿಂದ ಸಿಟ್ಟಾದ ಆರೋಪಿ ಹುಡುಗ ತಿರುಗಿ ಕಲ್ಲು ಎಸೆದಿದ್ದು ಆಕಿಫ್ ತಲೆ, ಮುಖಕ್ಕೆ ಬಿದ್ದು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದನ್ನು ಗಮನಿಸಿ, ಕಾಂಪೌಂಡ್ ಗೋಡೆಯ ಬದಿಗೆ ಒಯ್ದು ಮಲಗಿಸಿ ಏನೂ ಆಗಿಲ್ಲವೆಂಬಂತೆ ಮನೆಗೆ ಹಿಂತಿರುಗಿದ್ದ. ಹೀಗೆಂದು ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ವತಃ ಪೊಲೀಸ್ ಕಮಿಷನರ್ ಸ್ಥಳಕ್ಕೆ ತೆರಳಿ, ವಿಚಾರಣೆ ನಡೆಸಿದ್ದು ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. 
 
ಆರೋಪಿ ಹುಡುಗ ಉತ್ತರ ಪ್ರದೇಶ ಮೂಲದವ. ಆತನ ತಂದೆ ಸಂತೋಷ್ ಇಪ್ಪತ್ತು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದು ಎಂಟು ವರ್ಷಗಳಿಂದ ಕೆ.ಸಿ ನಗರದ ಲತೀಫ್ ಎಂಬವರ ಬಾಡಿಗೆ ಮನೆಯಲ್ಲಿ ನೆಲೆಸಿದೆ. ಇಬ್ಬರು ಮಕ್ಕಳಿದ್ದು ಒಬ್ಬಾತ ಪಿಯು ಓದುತ್ತಾ ತುಂಬ ಚುರುಕಾಗಿದ್ದ. ಆದರೆ, ಆತನ ಚುರುಕುತನವೇ ಮುಳ್ಳಾಗಿದ್ದು ಒಂದು ಕ್ಷಣದ ಸಿಟ್ಟು ಯಾರೋ ಅಮಾಯಕ ಹುಡುಗನ ಪ್ರಾಣ ತೆಗೆದಿದಿದೆ. 

ಪಬ್ ಜಿ ಬ್ಯಾನ್ ಆಗಿದ್ದರೂ ಆಟ ಹೇಗೆ ? 

ಪಬ್ ಜಿ ಆನ್ ಲೈನ್ ವಿಡಿಯೋ ಗೇಮ್ ಚೀನಾದ್ದು. ಚೀನಾ ಮೂಲದ ವಿಡಿಯೋ ಗೇಮ್ ಗಳನ್ನು ಪಬ್ ಜಿ ಸಹಿತ ಭಾರತದಲ್ಲಿ ಅತಿರೇಕಕ್ಕೆ ದಾರಿ ಮಾಡುತ್ತಿದೆ ಎಂಬ ಕಾರಣಕ್ಕೆ ಕಳೆದ ವರ್ಷ ಬ್ಯಾನ್ ಮಾಡಲಾಗಿತ್ತು. ಆದರೆ, ಈಗ ಹುಡುಗನೊಬ್ಬ ಪಬ್ ಜಿ ಆಟದ ದ್ವೇಷದಲ್ಲಿ ಬಲಿಯಾದ ಹಿನ್ನೆಲೆಯಲ್ಲಿ ಪಬ್ ಜಿ ಆಟ ಮತ್ತೆ ಚಾಲ್ತಿಗೆ ಬಂದಿದೆಯೇ ಎನ್ನುವ ಅನುಮಾನ ಮೂಡಿದೆ. ಈ ಬಗ್ಗೆ ಕಮಿಷನರ್ ಬಳಿ ಪ್ರಶ್ನಿಸಿದರೆ, ಅದು ಬೇರೆ ರೂಪದಲ್ಲಿ ಬಂದಿರುವ ಸಾಧ್ಯತೆಯಿದೆ. ‌ಅದರ ಬಗ್ಗೆ ತನಿಖೆ ನಡೆಸಲಾಗುವುದು. ಜೊತೆಗೆ, ಮಕ್ಕಳು ಪಬ್ ಜಿ ಇನ್ನಿತರ ವಿಡಿಯೋ ಗೇಮ್ ಆಡುತ್ತಿದ್ದರೆ ಹೆತ್ತವರು ಗಮನ ಹರಿಸಬೇಕು. ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡುವುದಲ್ಲ. ಯಾರ ಜೊತೆ ಆಡುತ್ತಿದ್ದಾರೆ, ಏನ್ಮಾಡ್ತಿದ್ದಾರೆ ನೋಡಬೇಕು. ಕಳೆದ ಬಾರಿ ಬ್ಲೂವೇಲ್ ಸುಸೈಡ್ ಗೇಮಲ್ಲಿ ಹಲವು ಮಕ್ಕಳು ಬಲಿಯಾಗಿದ್ದು ನಡೆದಿತ್ತು. ಈ ಬಗ್ಗೆ ಹೆತ್ತವರ ಪಾತ್ರವೂ ಮುಖ್ಯವಾಗುತ್ತದೆ ಎಂದು ಹೇಳಿದರು.

ಕೆ.ಸಿ.ರೋಡ್ ; 12 ರ ಬಾಲಕ ನಿಗೂಢ ಸಾವು ! ಕೊಲೆ ಶಂಕೆ ! ಪಬ್ ಜಿ ದ್ವೇಷದಲ್ಲಿ ಬಲಿಯಾದ್ನಾ ಬಾಲಕ ?

Video: 

In a shocking incident in  Mangalore kc road a 12 year old Boy was murdered for Revenge over pubg game by another young boy.