ಕಣ್ಣೂರು : ಚುನಾವಣೆ ಬಳಿಕ ಸಿಪಿಎಂ ಗೂಂಡಾಗಿರಿ ; ಯುಡಿಎಫ್ ಕಾರ್ಯಕರ್ತನ ಕೊಲೆ

07-04-21 12:44 pm       Headline Karnataka News Network   ಕ್ರೈಂ

ಕಣ್ಣೂರಿನಲ್ಲಿ ಘರ್ಷಣೆ ನಡೆದಿದ್ದು ಮುಸ್ಲಿಂ ಲೀಗ್ ಕಾರ್ಯಕರ್ತನನ್ನು ಇರಿದು ಕೊಲೆ ಮಾಡಲಾಗಿದೆ. 

ಕಾಸರಗೋಡು, ಏ. 7:  ಚುನಾವಣೆ ಮುಗಿಯುತ್ತಿದ್ದಂತೆ ಕಣ್ಣೂರಿನಲ್ಲಿ ಘರ್ಷಣೆ ನಡೆದಿದ್ದು ಮುಸ್ಲಿಂ ಲೀಗ್ ಕಾರ್ಯಕರ್ತನನ್ನು ಇರಿದು ಕೊಲೆ ಮಾಡಲಾಗಿದೆ. 

ಕೊಲೆಯಾದವನನ್ನು ಕೂತುಪರಂಬ ಪುಳ್ಳಕರೆ ನಿವಾಸಿ ಮನ್ಸೂರ್ ( 22) ಎಂದು ಗುರುತಿಸಲಾಗಿದ್ದು ಈತನ ಸಹೋದರ ಮುಹಸಿನ್ (27) ಗಂಭೀರ ಗಾಯಗೊಂಡಿದ್ದಾನೆ. ಮಂಗಳವಾರ ರಾತ್ರಿ 8.30 ರ ಸುಮಾರಿಗೆ ಮನೆಗೆ ನುಗ್ಗಿದ ತಂಡವೊಂದು ಮನೆಗೆ ಕಚ್ಚಾ ಬಾಂಬ್ ಎಸೆದಿದ್ದು , ಬಳಿಕ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. 

ಗಂಭೀರ ಗಾಯಗೊಂಡ ಸೋದರರಿಬ್ಬರನ್ನು ಕೋಝಿಕ್ಕೋಡ್ ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಮುಂಜಾನೆ ಮನ್ಸೂರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮಂಗಳವಾರ ಮಧ್ಯಾಹ್ನ ಮತಗಟ್ಟೆ ಬಳಿ ಯೂತ್ ಲೀಗ್ ಹಾಗೂ ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ, ಮನ್ಸೂರ್ ಸಹೋದರ ಮುಹಸಿನ್ ಮತಗಟ್ಟೆಯಲ್ಲಿ ಯುಡಿಎಫ್ ಏಜಂಟ್ ಆಗಿದ್ದ. ಮತದಾನ ಮುಗಿದು ಮನೆಗೆ ತೆರಳುತ್ತಿದ್ದಾಗ ಮುಹಸಿನ್ ಗೆ ತಂಡ ಬೆದರಿಕೆ ಒಡ್ಡಿದ್ದು ರಾತ್ರಿ ಮನೆಗೆ ನುಗ್ಗಿದ ತಂಡ ಇಬ್ಬರ ಮೇಲೆ ದಾಳಿ ನಡೆಸಿ ಪರಾರಿಯಾಗಿತ್ತು.‌

ಕೃತ್ಯಕ್ಕೆ ಸಂಬಂಧಪಟ್ಟಂತೆ ಓರ್ವ ಸಿಪಿಎಂ ಕಾರ್ಯಕರ್ತನನ್ನು ಕೂತುಪರಂಬ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ . ಕೃತ್ಯವನ್ನು ಖಂಡಿಸಿ ಕೂತುಪರಂಬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಹರತಾಳಕ್ಕೆ ಯುಡಿಎಫ್ ಕರೆ ನೀಡಿದೆ.

The Youth League activist Paral Mansoor, 22, was killed after assailants attacked him soon after the polling was over at Pullukkara Mukil Peedika in Koothuparamba on Tuesday evening.