ಡಯಟ್ ದಾಂಧಲೆ ; ಬಿಎಡ್ ಕಲೀತಿದ್ದಾಗ ಶಿಕ್ಷಕಿ ಕೀಟಲೆ ಮಾಡುತ್ತಿದ್ದರಂತೆ ! ಮಹಿಳಾ ಸಿಬಂದಿ ಮೇಲೆ ಕತ್ತಿ ಬೀಸಿದ್ದ ಆತನಿಗಿತ್ತು ಸ್ಕಿಜೋಫ್ರೀನಿಯಾ !

20-09-21 10:45 pm       Headline Karnataka News Network   ಕ್ರೈಂ

ನಾನು ಬೋ.. ಮಗ. ನನ್ನನ್ನು ಬೋ.. ಮಗ ಅಂತಲೇ ಕರೆಯುತ್ತಾರೆ. ನನ್ನನ್ನು ಅವರೆಲ್ಲ ಗೇಲಿ ಮಾಡುತ್ತಿದ್ದರು. ನನ್ನ ಫೋಟೋಗಳನ್ನು ಇಂಟರ್ನೆಟ್ಟಿಗೆ ಹಾಕಿದ್ದರು.

ಮಂಗಳೂರು, ಸೆ.20 : ನಾನು ಬೋ.. ಮಗ. ನನ್ನನ್ನು ಬೋ.. ಮಗ ಅಂತಲೇ ಕರೆಯುತ್ತಾರೆ. ನನ್ನನ್ನು ಅವರೆಲ್ಲ ಗೇಲಿ ಮಾಡುತ್ತಿದ್ದರು. ನನಗೆ ಕೀಟಲೆ ಮಾಡುತ್ತಿದ್ದರು. ನನ್ನ ಫೋಟೋಗಳನ್ನು ಇಂಟರ್ನೆಟ್ಟಿಗೆ ಹಾಕಿದ್ದರು. ನಾನು ಎಲ್ಲಿ ಹೋದರೂ ಅವರು ಗಮನಿಸುತ್ತಿದ್ದರು. ಹೀಗೆ ಆತ ಹೇಳುತ್ತಿದ್ದರೆ, ಪೊಲೀಸರಿಗೆ ಏನೊಂದೂ ಅರ್ಥವಾಗಲಿಲ್ಲ.

ಇಂದು ಮಧ್ಯಾಹ್ನ ನಗರದ ಸಬ್ ಜೈಲಿನ ಪಕ್ಕದಲ್ಲಿರುವ ಡಯಟ್ ಶಿಕ್ಷಣ ಕೇಂದ್ರಕ್ಕೆ ನುಗ್ಗಿದ್ದ ಯುವಕನೊಬ್ಬ ತನ್ನ ಕೈಯಲ್ಲಿದ್ದ ಕತ್ತಿಯನ್ನು ಬೀಸಿ ಮೂವರು ಮಹಿಳಾ ಸಿಬಂದಿಯ ಮೇಲೆ ಗಾಯ ಮಾಡಿದ್ದ. ಆನಂತರ ಪೊಲೀಸರು ಯುವಕನನ್ನು ಬಂಧಿಸಿ, ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆದರೆ, ಪೊಲೀಸರ ಪ್ರಶ್ನೆಗಳಿಗೆ ಆತ ಆರಂಭದಲ್ಲಿ ಸರಿಯಾದ ಉತ್ತರ ನೀಡಲೇ ಇಲ್ಲ. ನೀನು ಯಾರೆಂದು ಕೇಳಿದ್ದಕ್ಕೆ ನಾನು ಬೋ.. ಮಗ ಅಂತಲೇ ಉತ್ತರಿಸುತ್ತಿದ್ದ.

ಆನಂತರ, ಸಿಸಿಬಿ ಪೊಲೀಸರು ಆತನನ್ನು ಕೊಂಡೊಯ್ದು ವಿಚಾರಣೆ ನಡೆಸಿದ್ದಾರೆ. ಆಗ ಆತನ ಹೆಸರು ನವೀನ್ ಕುಮಾರ್ ಶೆಟ್ಟಿ ಎನ್ನುವುದು ಗೊತ್ತಾಗಿದೆ. ಅಲ್ಲದೆ, ಕುಂದಾಪುರದ ಕೋರ್ಟಿನಲ್ಲಿ 2018ರಿಂದ ಅಟೆಂಡರ್ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದ. ಕತ್ತಿ ಹಿಡ್ಕೊಂಡು ಕೊಲ್ಲಲು ಬಂದಿದ್ದೀಯಲ್ಲಾ ಎಂದು ಕೇಳಿದ್ದಕ್ಕೆ, ತನ್ನ ಹಳೆಯ ವಿಚಾರವನ್ನು ಹೇಳಿದ್ದಾನೆ.

ಕುಂದಾಪುರ ಮೂಲದ ನವೀನ್ ಕುಮಾರ್ 2012-13ರಲ್ಲಿ ಮಂಗಳೂರಿನ ಡಯಟ್ ಶಿಕ್ಷಣ ಕೇಂದ್ರದಲ್ಲಿ ಬಿಎಡ್ ಕಲಿಯುವುದಕ್ಕೆಂದು ಬಂದಿದ್ದ. ಆದರೆ, ಶಿಕ್ಷಣ ಕೇಂದ್ರದಲ್ಲಿ ಇತರ ವಿದ್ಯಾರ್ಥಿಗಳ ಜೊತೆಗೆ ಬೆರೆಯುತ್ತಿರಲಿಲ್ಲ. ಏನೋ ಅಸಹನೆ, ಏನೆಲ್ಲ ಪ್ರಶ್ನೆಗಳನ್ನು ಕೇಳಿ ಅಲ್ಲಿನ ಸಿಬಂದಿ ಜೊತೆಗೆ ಜಗಳವಾಡುತ್ತಿದ್ದ. ತನ್ನ ಜೊತೆಗಿದ್ದವರನ್ನು ಪಾಸ್ ಮಾಡಿದ್ದಾರೆ, ನನ್ನನ್ನು ಫೈಲ್ ಮಾಡಿದ್ದಾರೆಂದು ಅಲ್ಲಿ ಶಿಕ್ಷಕಿಯಾಗಿದ್ದ ಒಬ್ಬರಲ್ಲಿ ಮುನಿಸಿಕೊಂಡು ದ್ವೇಷ ಬೆಳೆಸಿದ್ದ. ಶಿಕ್ಷಣ ಪಡೆಯುತ್ತಿದ್ದಾಗಲೇ ಉಡುಪಿಯ ಎವಿ ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಾನಸಿಕ ಸಮಸ್ಯೆಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದ.

2012ರಿಂದ 15ರ ನಡುವೆ ಹಲವು ಬಾರಿ ಬಾಳಿಗಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ. ಪ್ಯಾರನಾಯ್ಡ್ ಸ್ಕಿಜೋಫ್ರೀನಿಯಾ ಎನ್ನುವ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಆತನಿಗೆ ವೈದ್ಯರು ಚಿಕಿತ್ಸೆ ನೀಡಿದ್ದರು. ಮಂಗಳೂರು ಪೊಲೀಸರು ಉಡುಪಿಯಲ್ಲಿ ಚಿಕಿತ್ಸೆ ಪಡೆದ ವೈದ್ಯರಲ್ಲಿ ಮಾಹಿತಿ ಪಡೆದಿದ್ದು, ಕಳೆದ ಜನವರಿಯಲ್ಲಿ ಕೊನೆಯ ಬಾರಿಗೆ ಚಿಕಿತ್ಸೆಗೆ ಬಂದಿದ್ದ ಅನ್ನುವುದನ್ನು ವೈದ್ಯರು ತಿಳಿಸಿದ್ದಾರೆ. ಈ ನಡುವೆ, ಮಂಗಳೂರಿನ ಡಯಟ್ ಶಿಕ್ಷಣ ಕೇಂದ್ರದಲ್ಲಿ ಬಿಎಡ್ ಮುಗಿಸಿ ತೆರಳಿದ್ದ ನವೀನ್ ಕುಮಾರ್ ಗೆ ಕುಂದಾಪುರದ ಕೋರ್ಟಿನಲ್ಲಿ ಅಟೆಂಡರ್ ಕೆಲಸ ಸಿಕ್ಕಿತ್ತು.

ಆದರೆ, ಮಾನಸಿಕ ಸಮಸ್ಯೆಯಿಂದಾಗಿ ಆತ ಹಳೆಯ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೆಲವರನ್ನು ಟಾರ್ಗೆಟ್ ಮಾಡಿದ್ದ. ತನಗೆ ಕಿರುಕುಳ ನೀಡಿದ್ದವರು, ನೀಡುತ್ತಿದ್ದವರ ಬಗ್ಗೆ ದ್ವೇಷ ಬೆಳೆಸಿಕೊಂಡಿದ್ದ. ತನ್ನನ್ನು ಡಯಟ್ ಶಿಕ್ಷಣ ಕೇಂದ್ರದಲ್ಲಿದ್ದಾಗ ಶಿಕ್ಷಕಿಯೊಬ್ಬರು ಉದ್ದೇಶಪೂರ್ವಕ ಕೀಟಲೆ ಮಾಡುತ್ತಿದ್ದರು ಅನ್ನುವುದನ್ನು ಮನಸ್ಸಿನಲ್ಲಿ ಹಚ್ಚಿಕೊಂಡಿದ್ದ ನವೀನ್ ಕುಮಾರ್, ಆನಂತರ ಆಕೆಯನ್ನು ಭೇಟಿಯಾಗುವ ಉದ್ದೇಶದಿಂದ ಮಂಗಳೂರಿಗೆ ಬಂದಿದ್ದ. ಆದರೆ, ಪ್ರತೀ ಬಾರಿ ಬಂದಾಗಲೂ ಆ ಶಿಕ್ಷಕಿ ಸಿಕ್ಕಿರಲಿಲ್ಲ. ಇತರ ಸಿಬಂದಿ, ಅವರು ಹೊರಗೆ ಹೋಗಿದ್ದಾರೆಂದು ಕಳಿಸಿಕೊಡುತ್ತಿದ್ದರು. ಈತನ ಉದ್ದೇಶ ಮತ್ತು ಈತ ಯಾರೆಂದು ಸಿಬಂದಿಗೆ ತಿಳಿದಿರಲಿಲ್ಲ. ಆದರೆ, ಹಳೆಯದ್ದನ್ನೇ ದ್ವೇಷವಾಗಿ ಬೆಳೆಸಿಕೊಂಡಿದ್ದ ನವೀನ್ ಕುಮಾರ್, ಇಲ್ಲಿನ ಸಿಬಂದಿ ಬೇಕಂತಲೇ ನನಗೆ ಹೀಗೆ ಹೇಳುತ್ತಿದ್ದಾರೆ, ನನ್ನನ್ನು ಕೀಟಲೆ ಮಾಡುತ್ತಿದ್ದಾರೆ ಎಂದು ಊಹಿಸಿಕೊಂಡಿದ್ದ. ಇದರಿಂದ ಸಿಬಂದಿ ಮೇಲೂ ದ್ವೇಷ ಬೆಳೆಸಿಕೊಂಡಿದ್ದ.

ಇಂದು, ಏನಾದ್ರೂ ಮಾಡಲೇಬೇಕು ಎಂಬ ಮನಸ್ಸಿನಲ್ಲಿ ಹಚ್ಚಿಕೊಂಡು ಬಂದಿದ್ದ ನವೀನ್ ಕುಮಾರ್, ಅದಕ್ಕಾಗಿ ಹೊಸ ಕತ್ತಿಯೊಂದನ್ನು ಖರೀದಿಸಿ ತಂದಿದ್ದ. ಡಯಟ್ ಕಚೇರಿಗೆ ಬಂದು ಕೇಳಿದಾಗ, ಆ ಶಿಕ್ಷಕಿ ಮಾತ್ರ ಇರಲಿಲ್ಲ. ಈ ಬಗ್ಗೆ ಅಲ್ಲಿನ ಸಿಬಂದಿ ಬಳಿ ಕೇಳಿದಾಗ, ಎಂದಿನ ಉತ್ತರ ನೀಡಿದ್ದಾರೆ. ಒಮ್ಮೆಲೇ ಕೋಪಕ್ಕೀಡಾದ ನವೀನ್, ನೀವು ಸುಳ್ಳು ಹೇಳುತ್ತಿದ್ದೀರಿ.. ಅವರಿಗೊಂದು ನಾನು ಗಿಫ್ಟ್ ತಂದಿದ್ದೇನೆ ಎನ್ನುತ್ತಲೇ ಕತ್ತಿ ಹೊರ ತೆಗೆದಿದ್ದಾನೆ. ಮೇಡಮ್ ಬಗ್ಗೆ ಸುಳ್ಳು ಹೇಳ್ತೀರಾ ಎನ್ನುತ್ತಲೇ ಕತ್ತಿ ಬೀಸಿದ್ದಾನೆ. ಅಲ್ಲಿದ್ದ ಮೂರು ಸಿಬಂದಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಕೊಲ್ಲಬೇಕೆಂದು ಉದ್ದೇಶ ಇಲ್ಲದಿದ್ದರೂ, ಮಾನಸಿಕ ಸ್ಥಿಮಿತ ಕಳಕೊಂಡು ಏನೋ ದ್ವೇಷ ಇಟ್ಟುಕೊಂಡು ಕತ್ತಿ ಬೀಸಿದ್ದಾನೆ. ಪೊಲೀಸರು ಬಂದಾಗ, ಚೇರ್ ನಲ್ಲಿ ಕತ್ತಿ ಹಿಡ್ಕೊಂಡೇ ಕುಳಿತಿದ್ದ. ನನ್ನ ಕೆಲಸ ಮುಗೀತು ಎನ್ನುತ್ತಿದ್ದ.

ಮಂಗಳೂರಿನ ಬರ್ಕೆ ಠಾಣೆಯಲ್ಲಿ ನವೀನ್ ಕುಮಾರ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಪ್ರವರ ಕೇಳಿದ ಪೊಲೀಸರಿಗೂ ಅಚ್ಚರಿ ಉಂಟು ಮಾಡಿದೆ. ವಿಚಾರಣೆ ವೇಳೆ, ಪೊಲೀಸರ ಬಳಿಯೂ ಏನೇನೋ ಮಾತನಾಡುತ್ತಿದ್ದ. ನಿಮ್ಮನ್ನು ಬಿಡುವುದಿಲ್ಲ. ನನ್ನ ಪವರ್ ನಿಮಗೆ ಗೊತ್ತಿಲ್ಲ ಎನ್ನುತ್ತಿದ್ದ. ಕಲಿಕೆಯ ಅವಧಿಯಲ್ಲಿ ವಿದ್ಯಾರ್ಥಿಗಳಲ್ಲಿ ಯಾರನ್ನೂ ನಿರ್ಲಕ್ಷ್ಯ ಮಾಡಬಾರದು ಅನ್ನುವುದು ಇದಕ್ಕೇ ಇರಬೇಕು. ವಿದ್ಯಾರ್ಥಿಯಾಗಿದ್ದ ವೇಳೆ ಮಾನಸಿಕವಾಗಿ ಬೆಳೆಸಿಕೊಂಡಿದ್ದ ದ್ವೇಷದ ಕಿಡಿ, ಈಗ ಆತನನ್ನು ಜೈಲಿಗಟ್ಟುವಂತೆ ಮಾಡಿದೆ.

ಡಯಟ್ ಶಿಕ್ಷಣ ಸಂಸ್ಥೆ ಕಚೇರಿಗೆ ನುಗ್ಗಿದ ಆಗಂತುಕನಿಂದ ದಾಂಧಲೆ ; ಮೂವರು ಸಿಬಂದಿಗೆ ಕತ್ತಿಯಿಂದ ಕಡಿದು ಕಿರಾತಕ ಕೃತ್ಯ !!

Mangalore Man attacks on Three Women staff of DIET institute due to revenge on teacher says Mangalore Police Commissioner Shashi Kumar. The arrested has been identified as Naveen from Kundapura who is said to be working as Peon in Court. Three staffs of DIET institute were attacked in broad daylight inside the office.