ಕೋವಿಡ್ ಲಸಿಕೆ ಪಡೆದ ಸರ್ಟಿಫಿಕೇಟ್ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಲೇಬೇಡಿ?

26-05-21 10:48 am       GIZBOT Mantesh   ಡಿಜಿಟಲ್ ಟೆಕ್

ಲಸಿಕೆ ಪಡೆದಿರುವ ಸರ್ಟಿಫಿಕೇಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್/ಶೇರ್ ಮಾಡಿದರೇ ಅಪಾಯ ಎದುರಾಗುವ ಸಾಧ್ಯತೆಗಳಿವೆ.

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ವ್ಯಾಕ್ಸಿನೇಷನ್ ಕಾರ್ಯಕ್ರಮ ಹಂತ ಹಂತವಾಗಿ ಮುಂದುವರೆದಿದೆ. ಪ್ರಸ್ತುತ 18 ರಿಂದ 44 ವರ್ಷದವರಿಗೂ ಲಸಿಕೆ ಅಭಿಯಾನ ಶುರುವಾಗಿದೆ. ಮೊದಲ ಡೋಸ್ ಹಾಗೂ ಎರಡನೇ ಡೋಸ್ ಎಂದು ಎರಡು ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಪಡೆದ ನಂತರ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಲಸಿಕೆ ಪಡೆದಿರುವ ಸರ್ಟಿಫಿಕೇಟ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್/ಶೇರ್ ಮಾಡಿದರೇ ಅಪಾಯ ಎದುರಾಗುವ ಸಾಧ್ಯತೆಗಳಿವೆ.

ಹೌದು, ಬಹುತೇಕ ಜನರು ಕೋವಿಡ್ ಲಸಿಕೆ ಪಡೆದ ನಂತರ ಲಸಿಕೆ ಪಡೆದ ಫೋಟೊ ಮತ್ತು ಲಸಿಕೆಯ ಪ್ರಮಾಣ ಪತ್ರವನ್ನು ಫೇಸ್‌ಬುಕ್, ವಾಟ್ಸಾಪ್‌ ಸ್ಟೇಟಸ್‌, ಟ್ವಿಟರ್, ಇನ್‌ಸ್ಟಾಗ್ರಾಂ ಹೀಗೆ ಇತರೆ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್ ಗಳಲ್ಲಿ ಅಪ್‌ಲೋಡ್ ಮಾಡುತ್ತಾರೆ. ಆದರೆ ಲಸಿಕೆ ಪಡೆದ ಸರ್ಟಿಫಿಕೇಟ್ ಅನ್ನು ಶೇರ್ ಮಾಡುವುದರಿಂದ ಅಪಾಯ ಸಾಧ್ಯತೆಗಳು ಇವೆ ಎಂದು ಸೈಬರ್ ಸೆಕ್ಯುರಿಟಿ ಎಚ್ಚರಿಕೆ ನೀಡಿದೆ.



ಕೋವಿಡ್ ಲಸಿಕೆ ಪಡೆಯುತ್ತಿರುವ ಜನರು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಲಸಿಕೆ ಪಡೆದ ನಂತರ ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡುವ ಎಲ್ಲರಿಗೂ ಸೈಬರ್ ಸೆಕ್ಯುರಿಟಿ ಎಚ್ಚರಿಕೆ ನೀಡಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಯ ನಂತರ ಜನರಿಗೆ ಹಾರ್ಡ್ ಹಾಗೂ ಸಾಫ್ಟ್ ಕಾಪಿ ಎರಡೂ ರೂಪದಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ವ್ಯಾಕ್ಸಿನೇಷನ್ ಮುಗಿದ ತಕ್ಷಣ, ಅದನ್ನು ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಸೈಬರ್ ಸುರಕ್ಷತೆಯ ಮಾರ್ಗಸೂಚಿಗಳ ಹಿನ್ನೆಲೆ ಜನರು ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಬಾರದು ಎಂದು ಹೇಳಲಾಗಿದೆ.



ಲಸಿಕೆ ಪ್ರಮಾಣಪತ್ರವನ್ನು ಯಾರೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಾರದು ಎಂದು ಗೃಹ ಸಚಿವಾಲಯ ಹೊರಡಿಸಿರುವ ನಿರ್ದೇಶನದಲ್ಲಿ ತಿಳಿಸಲಾಗಿದೆ. ಈ ಮಾಹಿತಿಯನ್ನು ಗೃಹ ಸಚಿವಾಲಯದ ಸೈಬರ್ ಜಾಗೃತಿ ಟ್ವಿಟರ್ ಹ್ಯಾಂಡಲ್‌ನಲ್ಲಿ ನೀಡಲಾಗಿದೆ. ಗೃಹ ಸಚಿವಾಲಯವು ಸೈಬರ್ ದೋಸ್ತ್ (Cyber Dost) ಹೆಸರಿನಲ್ಲಿ ಈ ಜಾಗೃತಿ ಟ್ವಿಟರ್ ಹ್ಯಾಂಡಲ್ ಅನ್ನು ನಡೆಸುತ್ತಿದೆ. ಕೋವಿಡ್ -19 ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ, ಲಸಿಕೆ ತೆಗೆದುಕೊಳ್ಳುವ ವ್ಯಕ್ತಿಯ ಹೆಸರು ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಬರೆಯಲಾಗಿದೆ ಎಂದು ಸೈಬರ್ ದೋಸ್ತ್ ಹೇಳಿದೆ. ಈ ಹಿನ್ನೆಲೆಯಲ್ಲಿ ಯಾರು ತಮ್ಮ ಸರ್ಟಿಫಿಕೆಟ್ ಚಿತ್ರವನ್ನು ಸಾಮಾಹಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬಾರದು ಎಂದು ಅದು ಎಚ್ಚರಕೆ ನೀಡಿದೆ.



ನೀವು ಪ್ರಮಾಣಪತ್ರದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದರೆ, ನಿಮ್ಮ ವೈಯಕ್ತಿಕ ಮಾಹಿತಿ ದೋಚುವ ಅಪಾಯವಿದೆ. ಇದರಿಂದಾಗಿ ನಿಮಗೆ ವೈಯಕ್ತಿಕವಾಗಿ ಹಾನಿಯಾಗುವ ಸಾಧ್ಯತೆಗಳ ಇವೆ. ಇದನ್ನು ತಪ್ಪಿಸುವ ಸಲುವಾಗಿ ಲಸಿಕೆ ಪ್ರಮಾಣಪತ್ರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡದಿರುವುದು ಎಂದು ಸೈಬರ್ ದೋಸ್ತ್ ಹೇಳಿದೆ.



ನಿಮ್ಮ ವೈಯಕ್ತಿಕ ಮಾಹಿತಿಯನ್ನು ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿ ನಮೂದಿಸಲಾಗಿರುತ್ತದೆ. ಅದನ್ನು ಸೋಶಿಯಲ್ ತಾಣಗಳಲ್ಲಿ ಶೇರ್ ಮಾಡುವ ಮೂಲಕ ಸೈಬರ್ ವಂಚಕರಿಗೆ ಹಸ್ತಾಂತರಿಸಬೇಡಿ, ಇಲ್ಲದಿದ್ದರೆ ಆ ಮಾಹಿತಿಯ ಆಧಾರದ ಮೇಲೆ ಯಾರಾದರೂ ನಿಮಗೆ ವಂಚನೆ ಎಸಗುವ ಸಾಧ್ಯತೆ ಇದೆ. ಹೀಗಾಗಿ ಈ ರೀತಿಯ ಶೇರ್ ಮಾಡುವಿಕೆಯನ್ನು ತಪ್ಪಿಸಲು ಸಲಹೆ ನೀಡಲಾಗುತ್ತಿದೆ. ಲಸಿಕೆ ಹೆಸರಿನಲ್ಲಿ ಅನೇಕ ಜನರು ಮೋಸ ಹೋಗುತ್ತಿದ್ದಾರೆ. ಆ ಮಾಹಿತಿಯ ಆಧಾರದ ಮೇಲೆ ಬ್ಯಾಂಕ್ ಖಾತೆಗಳನ್ನು ಸಹ ಖಾಲಿ ಮಾಡಲಾಗುತ್ತಿದೆ ಎಂದು ಸೈಬರ್ ದೋಸ್ತ್ ಎಚ್ಚರಿಕೆ ನೀಡಿದೆ.

(Kannada Copy of  Gizbot Kannada)