Bitcoin scandal, IPS officer Sandeep Patils: ಬಿಟ್ ಕಾಯಿನ್ ಹಗರಣ ; ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ವಿಚಾರಣೆ, ರಾಜಕಾರಣಿಗಳಿಗೂ ಕೊರಳು ಸುತ್ತಿಕೊಳ್ಳುತ್ತಾ ಹಗರಣದ ಉರುಳು ! 

21-02-24 09:43 pm       Bangalore Correspondent   ಕರ್ನಾಟಕ

ಬಿಟ್​ ಕಾಯಿನ್ ಹಗರಣವನ್ನು ಲೋಕಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ಸರ್ಕಾರ ಕೆದಕಲು ಆರಂಭಿಸಿದೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಹಿರಿಯ ಐಪಿಎಸ್​​ ಅಧಿಕಾರಿ ಸಂದೀಪ್ ಪಾಟೀಲ್  ಅವರನ್ನು ವಿಚಾರಣೆ ನಡೆಸಿದ್ದಾರೆ. 

ಬೆಂಗಳೂರು, ಫೆ.21: ಬಿಟ್​ ಕಾಯಿನ್ ಹಗರಣವನ್ನು ಲೋಕಸಭೆ ಚುನಾವಣೆ ವೇಳೆಗೆ ಕಾಂಗ್ರೆಸ್ ಸರ್ಕಾರ ಕೆದಕಲು ಆರಂಭಿಸಿದೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು, ಹಿರಿಯ ಐಪಿಎಸ್​​ ಅಧಿಕಾರಿ ಸಂದೀಪ್ ಪಾಟೀಲ್  ಅವರನ್ನು ವಿಚಾರಣೆ ನಡೆಸಿದ್ದಾರೆ. 

ಪ್ರಕರಣ ಸಂಬಂಧ ಬುಧವಾರ ಮಧ್ಯಾಹ್ನ ವಿಚಾರಣೆಗೆ ಬರುವಂತೆ ಸಂದೀಪ್ ಪಾಟೀಲ್ ಅವರಿಗೆ ನೋಟಿಸ್ ನೀಡಲಾಗಿತ್ತು. ಮಧ್ಯಾಹ್ನ 3.30ರ ಸುಮಾರಿಗೆ ಸಿಐಡಿ ಕಚೇರಿಗೆ ಹಾಜರಾದ ಸಂದೀಪ್ ಪಾಟೀಲ್​, ಪ್ರಕರಣ ಸಂಬಂಧ ಕೆಲವು ಮಾಹಿತಿಗಳನ್ನು ಒದಗಿಸಿ ವಾಪಸಾಗಿದ್ದಾರೆ. ಸಂದೀಪ್ ಪಾಟೀಲ್ 2019- 20 ರಲ್ಲಿ ಬೆಂಗಳೂರು ಸಿಸಿಬಿ ವಿಭಾಗದ ಜಂಟಿ ಆಯುಕ್ತರಾಗಿದ್ದಾಗಲೇ ಬಿಟ್ ಕಾಯಿನ್ ಕೇಸ್ ಹೊರಬಂದಿತ್ತು. ಬಳಿಕ ಒಟ್ಟು ಪ್ರಕರಣವನ್ನು ಅಂದಿನ ಸಿಸಿಬಿ ಪೊಲೀಸರು ಮುಚ್ಚಿ ಹಾಕಿದ್ದಾರೆಂದು ಆರೋಪ ಕೇಳಿಬಂದಿತ್ತು. ಬಿಜೆಪಿ ಸರ್ಕಾರದ ಪ್ರಭಾವಿ ರಾಜಕಾರಣಿಗಳು ಹಗರಣದಲ್ಲಿ ಶಾಮೀಲಾಗಿದ್ದರಲ್ಲದೆ, ಪ್ರಮುಖ ಆರೋಪಿ ಶ್ರೀಕಿಯನ್ನು ಬಳಸಿ ಸರ್ಕಾರದ ಬೊಕ್ಕಸಕ್ಕೇ ಕೈಹಾಕಿದ್ದರು. ಹಲವು ವೆಬ್ ಸೈಟ್, ಅಮೆರಿಕದ ಬಿಟ್ ಕಾಯಿನ್ ಸಂಸ್ಥೆಗಳನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ಗಳನ್ನು ಕಳವು ಮಾಡಲಾಗಿತ್ತು. 

ಕಾಂಗ್ರೆಸ್ ಪ್ರಕರಣದ ಹೆಚ್ಚಿನ ತನಿಖೆಗಾಗಿ ಎಸ್​​ಐಟಿ ತಂಡವನ್ನು ನೇಮಕ ಮಾಡಿತ್ತು. ಇತ್ತೀಚೆಗೆ ಆಗಿನ ಸಿಸಿಬಿ ತಂಡದ ಇಬ್ಬರು ಇನ್ಸ್ ಪೆಕ್ಟರ್ ಗಳನ್ನು ಬಂಧಿಸಿದ್ದ ತಂಡ ಇದೀಗ ಸಂದೀಪ್ ಪಾಟೀಲ್ ಅವರನ್ನು ವಿಚಾರಣೆ ನಡೆಸಿದೆ. ಅಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಸಂದೀಪ್ ಪಾಟೀಲ್​ ಬಿಟ್ ಕಾಯಿನ್ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದರು. ಅಲ್ಲದೆ, ಸಿಸಿವಿ ತಂಡದ ಪ್ರಮುಖ ಅಧಿಕಾರಿಗಳೇ ಸಾಕ್ಷ್ಯ ನಾಶಪಡಿಸಿದ ಆರೋಪ ಎದುರಿಸುತ್ತಿದ್ದಾರೆ. 

ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತರಾಗಿದ್ದ ಸಂದೀಪ್ ಪಾಟೀಲ್ ಅವರನ್ನು ವಿಚಾರಣೆಗೆ ಕರೆಸಿದ್ದರಿಂದ ಮುಂದಿನ ಹಂತದಲ್ಲಿ ರಾಜಕಾರಣಿಗಳನ್ನೂ ತನಿಖೆಗೆ ಕರೆಯುವ ಸಾಧ್ಯತೆಯಿದೆ. ಕರಾವಳಿ ಭಾಗದ ಪ್ರಭಾವಿ ರಾಜಕಾರಣಿಯೊಬ್ಬರ ಹೆಸರೂ ಬಿಟ್ ಕಾಯಿನ್ ಹಗರಣದಲ್ಲಿ ಕೇಳಿಬಂದಿತ್ತು.

The Congress government has started raking up the bitcoin scam ahead of the Lok Sabha elections. Senior IPS officer Sandeep Patil has been questioned by the SIT probing the case.