BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲೋಕಾಯುಕ್ತ ದಾಳಿ ; ಅಧಿಕಾರಿಗಳ ಅಕ್ರಮ ಕಂಡು ನ್ಯಾ. ಬಿ. ವೀರಪ್ಪ ಶಾಕ್, ತಾಯಿ ಬದಲು ಮಗನೇ ಕೇಸ್ ವರ್ಕರ್, ಕಚೇರಿ ಮುಖ್ಯಸ್ಥೆಗೆ ಅನಧಿಕೃತ ಸಹಾಯಕಿ ! 

11-01-25 09:14 pm       Bangalore Correspondent   ಕರ್ನಾಟಕ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿ ಮೇಲೆ ಲೋಕಾಯುಕ್ತ ದಾಳಿ ವೇಳೆ ಹಲವು ಅಕ್ರಮ ಪತ್ತೆಯಾಗಿದ್ದು ತಾಯಿ ಬದಲು ಮಗನೇ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. 

ಬೆಂಗಳೂರು, ಜ.11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿ ಮೇಲೆ ಲೋಕಾಯುಕ್ತ ದಾಳಿ ವೇಳೆ ಹಲವು ಅಕ್ರಮ ಪತ್ತೆಯಾಗಿದ್ದು ತಾಯಿ ಬದಲು ಮಗನೇ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. 

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದಲ್ಲಿ ಬಿಬಿಎಂಪಿ ಕಚೇರಿ ಮೇಲೆ ಶುಕ್ರವಾರ ದಾಳಿ ನಡೆಸಲಾಗಿತ್ತು. ಸೌತ್ ಎಂಡ್ ಸರ್ಕಲ್‌ನಲ್ಲಿರುವ ಸಹಾಯಕ ಕಂದಾಯ ಅಧಿಕಾರಿ(ಎಆರ್‌ಒ) ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ ಆಗಿರುವ ಕವಿತಾ ಅವರ ಮಗ ನವೀನ್ ಅವರನ್ನು ನ್ಯಾಯಮೂರ್ತಿ ವೀರಪ್ಪ ಅವರು ವಿಚಾರಿಸಿದಾಗ, ಸಾರ್ವಜನಿಕರಿಗೆ ಆಗುವ ಅನಾನುಕೂಲತೆಯನ್ನು ತಪ್ಪಿಸಲು ನನ್ನ ತಾಯಿ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿದ್ದಾನೆ. ನವೀನ್ ತನ್ನ ತಾಯಿ ಬದಲು ತಾನು ಗಜೇಟೆಡ್ ಅಧಿಕಾರಿಯಂತೆ ಕೆಲಸ ಮಾಡುತ್ತಿರುವುದನ್ನು ಸಮರ್ಥಿಸಿಕೊಂಡಿದ್ದಾನೆ ಎಂದು ನ್ಯಾಯಮೂರ್ತಿ ವೀರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಬಿಬಿಎಂಪಿ ಕಚೇರಿಗಳಲ್ಲಿ ಇಂತಹ ಅಕ್ರಮ ನಡೆಯುತ್ತಿರುವುದು ವಿಷಾದಕರ ಎಂದು ಅವರು, ಮಗ ತನ್ನ ತಾಯಿಯ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ ಪಡೆದುಕೊಂಡಿದ್ದು, ತಾಯಿ ಬದಲು ಆತನೇ ಸಹಿ ಮಾಡುತ್ತಿರುವುದು ದುರದೃಷ್ಟಕರ. ಇದಲ್ಲದೆ, ಎಆರ್‌ಒ ಸುಜಾತಾ ಅವರು, 10,000 ರೂ. ಪಾವತಿಸಿ ಗೀತಾ ಎಂಬವರನ್ನ ಸಹಾಯಕಿಯಾಗಿ ಅನಧಿಕೃತವಾಗಿ ನೇಮಕ ಮಾಡಿಕೊಂಡಿದ್ದರು. "ಇದು ಬಿಬಿಎಂಪಿ ಒಳಗಿನ ಅರಾಜಕತೆಯನ್ನು ತೋರಿಸುತ್ತದೆ. ನಾವು ಬಿಬಿಎಂಪಿ ಮುಖ್ಯಸ್ಥ ತುಷಾರ್ ಗಿರಿನಾಥ್ ಅವರನ್ನು ವಿಚಾರಣೆಗೆ ಒಳಪಡಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಕರ್ತವ್ಯ ದುರುಪಯೋಗ ಕಾರಣಕ್ಕೆ ಸಿದ್ದಾಪುರ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಚೇರಿ ಮುಖ್ಯಸ್ಥರಾದ ಸುಜಾತ, ಕೇಸ್ ವರ್ಕರ್ ಕವಿತಾ, ಮಗ ನವೀನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ನವೀನ್​ನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡ ಬಿಬಿಎಂಪಿಯ ಎಂಟು ವಲಯಗಳ 54 ಕಚೇರಿಗಳ ಮೇಲೆ ಏಕಕಾಲದಲ್ಲಿ ಅನಿರೀಕ್ಷಿತ ದಾಳಿ ನಡೆಸಿದೆ. ಇ-ಖಾತಾಗಳಿಗೆ ಸಂಬಂಧಿಸಿ ಕಂದಾಯ ಅಧಿಕಾರಿಗಳು ಮತ್ತು ಸಹಾಯಕ ಕಂದಾಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಹಾಗೂ ಅನಧಿಕೃತ ನಿರ್ಮಾಣಗಳ ವಿರುದ್ಧ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮತ್ತು ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ಗಳ ನಿಷ್ಕ್ರಿಯತೆ ಬಗ್ಗೆ ಲೋಕಾಯುಕ್ತಕ್ಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

A Bruhat Bengaluru Mahanagara Palike (BBMP) employee’s son was found working on her behalf with her login credentials on the office system at South End Circle BBMP office when Upa Lokayukta B. Veerappa landed at the office for a surprise inspection on Friday afternoon.