Vijayapura News: ಕೌಟುಂಬಿಕ ಕಲಹ ; ಮಕ್ಕಳನ್ನ ಕಾಲುವೆಗೆ ಎಸೆದ ತಾಯಿ, ಒಂದು ವರ್ಷದ ಮಗು ಸೇರಿ ನಲ್ವಾರು ಜಲಸಮಾಧಿ, ಸಿಕ್ಕಿಬಿದ್ದ ಡ್ಯಾಡಿ ! 

13-01-25 10:30 pm       HK News Desk   ಕರ್ನಾಟಕ

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ನಾಲ್ವರು ಮಕ್ಕಳೊಂದಿಗೆ ನೀರಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಇಂದು ನಡೆದಿದೆ. ಸ್ಥಳೀಯ ಮೀನುಗಾರರು ಮಹಿಳೆಯನ್ನು ರಕ್ಷಿಸಿದರೆ, ನಾಲ್ವರು ಮಕ್ಕಳು ಜಲಸಮಾಧಿ ಆಗಿದ್ದಾರೆ.

ವಿಜಯಪುರ, ಜ 13: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳು ತನ್ನ ನಾಲ್ವರು ಮಕ್ಕಳೊಂದಿಗೆ ನೀರಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ ಘಟನೆ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿ ಇಂದು ನಡೆದಿದೆ. ಸ್ಥಳೀಯ ಮೀನುಗಾರರು ಮಹಿಳೆಯನ್ನು ರಕ್ಷಿಸಿದರೆ, ನಾಲ್ವರು ಮಕ್ಕಳು ಜಲಸಮಾಧಿ ಆಗಿದ್ದಾರೆ.

ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ‌ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸೇನ್ ನಿಂಗರಾಜ ಭಜಂತ್ರಿ ಹಾಗೂ ಹುಸೇನ್ ನಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳೆಂದು ತಿಳಿದು ಬಂದಿದೆ. ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದ ಭಾಗ್ಯಶ್ರೀ ನಿಂಗರಾಜ ಭಜಂತ್ರಿ ಎಂಬ ಮಹಿಳೆಯನ್ನು ಮೀನುಗಾರರು ಕಾಲುವೆ ನೀರಿನಿಂದ ಎತ್ತಿ ಬದುಕಿಸಿದ್ದಾರೆ.

ಮೃತರಲ್ಲಿ ಅವಳಿ ಗಂಡು ಮಕ್ಕಳಿದ್ದರೆ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತನು ಹಾಗೂ ರಕ್ಷಾ ಎಂಬ ಇಬ್ಬರು ಬಾಲಕಿಯರ ಶವ ಪತ್ತೆಯಾಗಿದ್ದು, ಹಸೇನ್ ಹಾಗೂ ಹುಸೇನ್ ಎಂಬ ಅವಳಿ ಗಂಡು ಮಕ್ಕಳ ಶವಕ್ಕಾಗಿ ನಿಡಗುಂದಿ ಪೊಲೀಸರು ಅಗ್ನಿಶಾಮಕ ದಳ ಹಾಗೂ ಮೀನುಗಾರರಿಂದ ಶೋಧಕಾರ್ಯ ನಡೆಸುತ್ತಿದ್ದಾರೆ.

ಮೃತ ಮಕ್ಕಳ ತಂದೆ ನಿಂಗರಾಜ‌ ಭಜಂತ್ರಿ ಪತ್ನಿ ಸಹಿತ ಇಂದು ಬನದ ಹುಣ್ಣಿಮೆ ಇದ್ದುದರಿಂದ ನಿಡಗುಂದಿ ತಾಲೂಕಿನ ಎಲ್ಲಮ್ಮನ ಬೂದಿಹಾಳ ಗ್ರಾಮಕ್ಕೆ ದೇವರ ದರ್ಶನಕ್ಕೆ ಕುಟುಂಬ ಸಮೇತವಾಗಿ ಆಗಮಿಸಿದ್ದರು. ಆಲಮಟ್ಟಿ ಎಡದಂಡೆ ಕಾಲುವೆ ಬಳಿ ಬೈಕ್ನಲ್ಲಿನ ಪೆಟ್ರೋಲ್ ಖಾಲಿಯಾಗಿದ್ದರಿಂದ ಮಕ್ಕಳು ಹಾಗೂ ಪತ್ನಿಯನ್ನ ಕಾಲುವೆ ಬಳಿ ನಿಲ್ಲಿಸಿ ಪೆಟ್ರೋಲ್ ತರಲು ತೆರಳಿದ್ದ. ವಾಪಸ್ ಬರುವಷ್ಟರಲ್ಲಿ ನಾಲ್ಕು ಮಕ್ಕಳನ್ನ ಕಾಲುವೆಗೆ ಎಸೆದು ಭಾಗ್ಯಶ್ರೀ ಕೂಡ ಕಾಲುವೆಗೆ ಧುಮುಕಿದ್ದಳು. ಈ ದೃಶ್ಯ ಕಂಡ ಸ್ಥಳೀಯ ಮೀನುಗಾರರು, ಭಾಗ್ಯಶ್ರೀಯನ್ನು ರಕ್ಷಿಸಿದರೆ, ನಾಲ್ವರು ಮಕ್ಕಳು ಜಲಸಮಾಧಿ ಆಗಿದ್ದಾರೆ.

ತೀವ್ರ ಅಸ್ವಸ್ಥಳಾಗಿದ್ದ ಭಾಗ್ಯಶ್ರೀಯನ್ನು ಮೊದಲು ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ತನಿಖೆ ಮುಂದುವರೆದಿದೆ.

ಆಸ್ತಿ ಗಲಾಟೆ ಮಕ್ಕಳ ಸಾವಲ್ಲಿ ಅಂತ್ಯ! 

ಲಿಂರಾಜನ ತಂದೆ ಆಸ್ತಿ ವಿಷಯಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು. ಲಿಂಗರಾಜ್​ ಕುಟುಂಬದವರು ಆಸ್ತಿ ಕೊಡಲ್ಲ ಮನೆ ಬಿಟ್ಟು ಹೊರಗೆ ಹಾಕ್ತೀವಿ ಎಂದಿದ್ದರಂತೆ. ಇದರಿಂದ ಲಿಂಗರಾಜ್ ಮತ್ತು ಭಾಗ್ಯ ದಂಪತಿ ನೊಂದಿದ್ದರು. ವಿಜಯಪುರದ ತೆಲಗಿ ಗ್ರಾಮದಲ್ಲಿ ಗಲಾಟೆ ಆಗಿತ್ತು. 50 ಲಕ್ಷ ಸಾಲ ಮಾಡಿಕೊಂಡಿದ್ದ ಲಿಂಗರಾಜು ಮಕ್ಕಳು, ಪತ್ನಿ ಜೊತೆ ವಿಷ ಕುಡಿದು ಕಾಲುವೆಗೆ ಹಾರಿ ಪ್ರಾಣ ಬಿಡಲು ನಿರ್ಧಾರ ಮಾಡಿದ್ದನಂತೆ.

4 ಮಕ್ಕಳ ತಾಯಿ ಹೇಳಿದ್ದೇನು?

ಸ್ಥಳೀಯರಿಂದ ರಕ್ಷಣೆಯಾದ ತಾಯಿಯನ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಭಾಗ್ಯಶ್ರೀ ಹೇಳಿಕೆ ನೀಡಿದ್ದು, ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದಿದ್ದು ನಾನಲ್ಲ. ನನ್ನ ಗಂಡ ಎಂದು ಘಟನೆಯ ಅಸಲಿ ವಿಷಯ‌ ಹೊರಹಾಕಿದ್ದಾರೆ.

ನನ್ನ ಪತಿ ಸುಮಾರು 30 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಪರದಾಡಿದ್ದು ಅದಕ್ಕಾಗಿ ಆಸ್ತಿ ಕೇಳಿದ. ಆಸ್ತಿ ಕೊಡದ ವಿಚಾರವಾಗಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆವು.

ಲಿಂಗರಾಜು ತಂದೆ ಆಸ್ತಿ ಕೊಟ್ಟಿದ್ದರೆ ಜಮೀನು ಮಾರಾಟ ಮಾಡಿ ಸಾಲ ಪಾವತಿ ಮಾಡಲು ನಿರ್ಧಾರ ಮಾಡಿದ್ದೆವು. ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ವಿಷದ ಬಾಟಲಿಯನ್ನು ನನ್ನ ಪತಿ ತಂದಿಟ್ಟಿದ್ದ. ಇಂದು ನಾಲ್ಕು ಮಕ್ಕಳನ್ನ ಕರೆದುಕೊಂಡು ಯಲ್ಲಮ್ಮನ ಬೂದಿಹಾಳಕ್ಕೆ ಹೋಗೋದಾಗಿ ಮನೆಯಿಂದ ಹೊರ ಬಂದಿದ್ದೆವು.

ಮನೆಯಿಂದ ಹೊರಗಡೆ ಬಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ನನ್ನ ಪತಿ ಮಾಡಿದ್ದ. ಇಬ್ಬರು ಮಕ್ಕಳಿಗೆ ಸ್ವಲ್ಪ, ಸ್ವಲ್ಪ ವಿಷ ಕುಡಿಸಿದ್ದ. ನಂತರ ನಾಲ್ಕು ಮಕ್ಕಳನ್ನ ಕಾಲುವೆಗೆ ಎಸೆದು ನನ್ನನ್ನು ಕಾಲುವೆಯಲ್ಲಿ ದೂಡಿ ಅಲ್ಲಿಂದ ಹೋಗಿಬಿಟ್ಟ ಎಂದು ಸಂಬಂಧಿಕರ ಎದುರು ಭಾಗ್ಯಶ್ರೀ ಭಯಾನಕ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಭಾಗ್ಯಶ್ರೀ ಈ ಹೇಳಿಕೆಯನ್ನ ಸಂಬಂಧಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.

Vijayapura, mother jumps into canal along with four children, mother rescued.