Hassan Accident, Mangalore: ಕ್ಯಾಂಟಿನ್‌ಗೆ ನುಗ್ಗಿದ VRL ಲಾರಿ ; ಮಂಗಳೂರಿಗೆ ಹೋಗುವ ವೇಳೆ ಹಾಸನದಲ್ಲಿ ಗಾಡಿ ಪಲ್ಟಿ , ಇಬ್ಬರ ಬಲಿ

14-01-25 03:36 pm       HK News Desk   ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ಹತ್ತು ಚಕ್ರದ ಲಾರಿಯೊಂದು ರಸ್ತೆ ಬದಿಯ ಕ್ಯಾಂಟಿನ್‌ಗೆ ನುಗ್ಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಗುಳಗಳಲೆ ಸಮೀಪ ನಡೆದಿದೆ.

ಹಾಸನ, ಜ 14: ಚಾಲಕನ ನಿಯಂತ್ರಣ ತಪ್ಪಿ ಹತ್ತು ಚಕ್ರದ ಲಾರಿಯೊಂದು ರಸ್ತೆ ಬದಿಯ ಕ್ಯಾಂಟಿನ್‌ಗೆ ನುಗ್ಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ಗುಳಗಳಲೆ ಸಮೀಪ ನಡೆದಿದೆ.

ಬಾಳ್ಳುಪೇಟೆಯ ತೌಫಿಕ್ (27) ಹಾಗೂ ಚಿತ್ರದುರ್ಗ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಬಗ್ನಾರೆಡ್ಡಿ ಗ್ರಾಮದ ಈರೇಶ್ (60) ಮೃತ ದುರ್ದೈವಿಗಳು. ಹಾಸನದಿಂದ ಮಂಗಳೂರಿಗೆ ಗೂಡ್ಸ್ ತುಂಬಿಕೊಂಡು ತೆರಳುತ್ತಿದ್ದ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಾರಿ ಅತಿ ವೇಗವಾಗಿ ಚಲಿಸುತ್ತಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮಹಮದ್ ಖಾದರ್ ಎಂಬವರ ಕ್ಯಾಂಟಿನ್‌ಗೆ ನುಗ್ಗಿದೆ.

ಕ್ಯಾಂಟಿನ್ ಬಳಿ ಹತ್ತಾರು ಮಂದಿ ಟೀ ಕುಡಿಯುತ್ತಿದ್ದು, ಇವರಲ್ಲಿ ಜೆಜೆಎಂ ಕೆಲಸ ಮಾಡಲು ಬಂದಿದ್ದ ವೀರೇಶ್ ಹಾಗೂ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ತೌಫಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರವಾದ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟೀ ಅಂಗಡಿ ಮುಂದೆ ನಿಲ್ಲಿಸಿದ್ದ 2 ಬೈಕ್‌ಗಳು ಸಂಪೂರ್ಣ ಜಖಂಗೊಂಡಿವೆ. ಡಿಕ್ಕಿ ರಭಸಕ್ಕೆ ಕ್ಯಾಂಟಿನ್ ಸಂಪೂರ್ಣ ನೆಲಸಮವಾಗಿದೆ.

ಇಂದು ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದು ಮಕ್ಕಳು ಅಪಘಾತ ನಡೆದ ಸಮೀಪವೇ ಆಟವಾಡುತ್ತಿದ್ದರು. ಅಲ್ಲದೇ ಕ್ಯಾಂಟಿನ್ ಅಕ್ಕಪಕ್ಕದಲ್ಲೇ ವಾಸದ ಮನೆಗಳಿದ್ದು, ಕ್ಯಾಂಟಿನ್ ಡಿಕ್ಕಿ ಹೊಡೆದು ಲಾರಿ ಮಗುಚಿ ಬಿದ್ದಿದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Vrl truck accident at Hassan, two killed after truck rams into canteen. The deceased have been identified as Toufiq (27) and Eshwar (60).