Minister Zameer Ahmed, Bangalore; ಹಸು ಕೆಚ್ಚಲು ಕೊಯ್ದ ಪ್ರಕರಣ ; ಮಾಲಿಕನಿಗೆ  ಮೂರು ಹಸು ಗಿಫ್ಟ್‌ ಕೊಟ್ಟ ಸಚಿವ ಜಮೀರ್‌, ಬಳ್ಳಾರಿಯಲ್ಲಿ ಫೋಟೋಗೆ ಸಗಣಿ 

15-01-25 06:21 pm       HK News Desk   ಕರ್ನಾಟಕ

ಸಚಿವ ಜಮೀರ್ ಅಹಮದ್ ಖಾನ್ ಅವರು ಕೊಟ್ಟ ಮಾತಿನಂತೆ ಕಾಟನ್ ಪೇಟೆ ವ್ಯಾಪ್ತಿಯ ಹಸುಗಳ ಮಾಲೀಕರ ಕುಟುಂಬಕ್ಕೆ ಮೂರು ಲಕ್ಷ ರೂ. ವೆಚ್ಚದಲ್ಲಿ ಮೂರು ಹಸುಗಳನ್ನು ಕೊಡಿಸಿದ್ದಾರೆ.

ಬೆಂಗಳೂರು, ಜ 15: ಸಚಿವ ಜಮೀರ್ ಅಹಮದ್ ಖಾನ್ ಅವರು ಕೊಟ್ಟ ಮಾತಿನಂತೆ ಕಾಟನ್ ಪೇಟೆ ವ್ಯಾಪ್ತಿಯ ಹಸುಗಳ ಮಾಲೀಕರ ಕುಟುಂಬಕ್ಕೆ ಮೂರು ಲಕ್ಷ ರೂ. ವೆಚ್ಚದಲ್ಲಿ ಮೂರು ಹಸುಗಳನ್ನು ಕೊಡಿಸಿದ್ದಾರೆ.

ಕಾಟನ್ ಪೇಟೆ ವ್ಯಾಪ್ತಿಯ ವಿನಾಯಕ ನಗರದಲ್ಲಿ ಮೂರು ಹಸುಗಳ ಕೆಚ್ಚಲು‌ ಕೊಯ್ದ ಅಮಾನವೀಯ ಘಟನೆ ನಡೆದ ಬಳಿಕ ಸ್ಥಳಕ್ಕೆ ಸಚಿವ ಜಮೀರ್ ಅಹಮದ್ ಭೇಟಿ ನೀಡಿ, ಮೂರು ಹಸುಗಳನ್ನು ಕೊಡಿಸುವುದಾಗಿ ಮಾಲೀಕರಿಗೆ ಮಾತು ಕೊಟ್ಟಿದ್ದರು. ಅದರಂತೆ ಇಂದು ಹಸುಗಳ ಮಾಲೀಕ ಕರ್ಣ ಅವರ ತಾಯಿ ಸವರಿ ಅಮ್ಮಳ್, ಸಹೋದರಿ ಅಮುದಾ ಅವರಿಗೆ ಇಂದು ಹಸುಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮುದಾ, ಹಸು ನಿರಾಕರಿಸಿದ ನನ್ನ ಸಹೋದರನ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಜಮೀರಣ್ಣ ಅವರು ಒಳ್ಳೆ ಮನಸ್ಸಿನಿಂದ ಹಸು ಕೊಡಿಸಿದ್ದಾರೆ. ಕೆಲವರು ಇದರಲ್ಲಿಯೂ ರಾಜಕಾರಣ ಮಾಡುತ್ತಿದ್ದು, ನಾವು ಶಾಸಕರ ಜೊತೆಗಿದ್ದೇವೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಮುಖಂಡರಾದ ಅತುಶ್, ಗೌಸಿ, ವಿನಾಯಕ್, ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಟನ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ ಒಂದು ಅನಾಗರಿಕ ಕೃತ್ಯವಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಊಹಾಪೋಹಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಕೃತ್ಯವನ್ನ ಮನುಷ್ಯನೇ ಎಸಗಿರುವುದರಿಂದ ಮೃಗೀಯ ಎನ್ನಲು ಸಹ ಸಾಧ್ಯವಿಲ್ಲ, ಈಗಾಗಲೇ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನ ಬಂಧಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ತನಿಖೆಯನ್ನ ಮುಂದುವರೆಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ರಸ್ತೆ ಬದಿ ಶೆಡ್‌ನಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಘಟನೆ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿತ್ತು. ಹಸುಗಳ ಮಾಲೀಕ ಕರ್ಣ ನೀಡಿದ ದೂರಿನ ಅನ್ವಯ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 325 (ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಠಾಣೆ ಪೊಲೀಸರು, ಬಿಹಾರ ಮೂಲದ ಶೇಕ್ ನಸ್ರು (30) ಎಂಬಾತನನ್ನ ಬಂಧಿಸಿದ್ದರು.

ಜಮೀರ್‌ ಅಹಮದ್‌ ಭಾವಚಿತ್ರಕ್ಕೆ ಸಗಣಿ ;

ನಗರದ ಗಡಿಗಿ ಚೆನ್ನಪ್ಪ (ರಾಯಲ್‌) ವೃತ್ತದ ಬಳಿ ಸೇರಿದ ರೈತ ಮೋರ್ಚಾದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳ್ಳಾರಿಯಲ್ಲಿ ಜಮೀರ್‌ ಅಹಮದ್‌ ಭಾವಚಿತ್ರಕ್ಕೆ ಸಗಣಿ ಬಳಿದ ಕಾರ್ಯಕರ್ತರು, ಗೋಮೂತ್ರ ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಗಣಪಾಲ ಐನಾಥ ರೆಡ್ಡಿ, ‘ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೂರು ಆಕಳ ಕೆಚ್ಚಲು ಕೊಯ್ದು, ಕಾಲು ಕತ್ತರಿಸಲಾಗಿದೆ. ಘಟನೆಗೆ ಸಚಿವ ಜಮೀರ್ ಅವರ ಮೃದು ಧೋರಣೆಯೇ ಪರೋಕ್ಷವಾಗಿ ಕಾರಣವಾಗಿದೆ. ಭಾರತದಲ್ಲಿ ಆಕಳನ್ನು ಕಾಮದೇನು ಎನ್ನಲಾಗುತ್ತದೆ. ಅವುಗಳ ಮೇಲಿನ ದಾಳಿ ಅಮಾನವೀಯ ಮತ್ತು ಖಂಡನೀಯ’ ಎಂದರು. 

‘ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಆದರೆ, ಯಾವ ಪಾಪಕ್ಕಾಗಿ ಮೂಕ ಪ್ರಾಣಿಗಳ ಮೇಲೆ ಸೇಡು. ಇದು ಒಬ್ಬಿಬ್ಬರು ಮಾಡಿರುವ ಕೆಲಸವಲ್ಲ. ಘಟನೆಯ ಹಿಂದಿರುವವರನ್ನು ಶಿಕ್ಷೆಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು. 

‘ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಮೀರ್‌ ಅಹಮದ್‌ ಖಾನ್‌ ವಿಫಲರಾಗಿದ್ದಾರೆ’ ಎಂದೂ ಅವರು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು.

Minorities Welfare and Housing Minister Zameer Ahmed Khan on Wednesday presented three cows to a family in Bengaluru’s Chamarajpet area, whose cows had their udder mutilated by a miscreant. Khan also gave Rs 3 lakh to the family. Chief Minister’s Political Secretary Naseer Ahmed, KMDC president Altaf Khan, leaders Atush, Gausi, Vinayak and Prasad were present on the occasion.