C T Ravi, Mallikarjun Kharge: ಪ್ರಿಯಾಂಕಾ ಗಾಂಧಿ ನಮ್ಮ ರಾಣಿ ಚೆನ್ನಮ್ಮ ಎಂದ ಖರ್ಗೆಗೆ ಸಿ.ಟಿ ರವಿ ಕಿಡಿ ; ಹೊಗಳುವ ಭರದಲ್ಲಿ ಮಾನಸಿಕ ಗುಲಾಮಗಿರಿ ತೋರಿಸುತ್ತೆ , ಇದು ಭಟ್ಟಂಗಿತನದ ಹೇಳಿಕೆ ಎಂದ ಸಿ.ಟಿ ! 

22-01-25 10:38 pm       Bangalore Correspondent   ಕರ್ನಾಟಕ

ಪ್ರಿಯಾಂಕಾ ಗಾಂಧಿಯನ್ನ ರಾಣಿ ಚೆನ್ನಮ್ಮಗೆ ಹೋಲಿಸುವ ಮೂಲಕ ಚೆನ್ನಮ್ಮಗೆ ಅಪಮಾನ ಮಾಡಲಾಗಿದೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರು, ಜ 22: ಪ್ರಿಯಾಂಕಾ ಗಾಂಧಿಯನ್ನ ರಾಣಿ ಚೆನ್ನಮ್ಮಗೆ ಹೋಲಿಸುವ ಮೂಲಕ ಚೆನ್ನಮ್ಮಗೆ ಅಪಮಾನ ಮಾಡಲಾಗಿದೆ ಎಂದು ಪರಿಷತ್ ಸದಸ್ಯ ಸಿ.ಟಿ ರವಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ.

ಪ್ರಿಯಾಂಕಾ ಗಾಂಧಿಯನ್ನು ರಾಣಿ ಚೆನ್ನಮ್ಮಗೆ ಹೋಲಿಸಿದ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಹೊಗಳುವ ಭರದಲ್ಲಿ ಮಾನಸಿಕ ಗುಲಾಮಗಿರಿ ತೋರಿಸಿದ್ದಾರೆ. ಇದು ಭಟ್ಟಂಗಿತನದ ಹೇಳಿಕೆ. ರಾಷ್ಟ್ರೀಯ ವ್ಯಕ್ತಿತ್ವಕ್ಕೂ ಈ ಮೂಲಕ ಅವಮಾನ ಮಾಡಲಾಗಿದೆ. ನಾಡಿನ ಜನತೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು

ಡಿಕೆಶಿ ಸಿಎಂ ಆಗುವ ಕುರಿತು ಜೈನಗುರು ಭವಿಷ್ಯವಾಣಿ ನುಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯೋಗ ಇದ್ದರೆ ಯಾರು ಬೇಕಾದರೂ ಸಿಎಂ ಆಗಬಹುದು. ಆದರೆ ಯೋಗ್ಯತೆ ಇದ್ದವರು ಮಾತ್ರ ಒಳ್ಳೆಯ ಮುಖ್ಯಮಂತ್ರಿ ಆಗುತ್ತಾರೆ. ಸಿಎಂ ಆಗಲು ಯೋಗ್ಯತೆ ಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಟಾಂಗ್ ಕೊಟ್ಟರು.

ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಸ್ಮರಣೆ ಮಾಡಿದ್ದಾರೆ. ಕಾಂಗ್ರೆಸ್ ವಿಸರ್ಜಿಸಿ ಎಂಬ ಗಾಂಧಿ ಮಾತನ್ನು ಅವರೆಲ್ಲ ನೆನಪಿಸಿಕೊಳ್ಳಬೇಕಿತ್ತು. ಸ್ವಾತಂತ್ರ‍್ಯಾ ನಂತರ ಕಾಂಗ್ರೆಸ್‌ನವರು ಭ್ರಷ್ಟಾಚಾರ ಮಾಡಿ ಎಂದು ಗಾಂಧಿ ಹೇಳಲಿಲ್ಲ. ಭ್ರಷ್ಟಾಚಾರಕ್ಕೆ ಸಮಾವೇಶದಲ್ಲಿ ಕಾಂಗ್ರೆಸ್‌ನವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿತ್ತು. ಅಂಬೇಡ್ಕರ್‌ರನ್ನ ಚುನಾವಣೆಯಲ್ಲಿ ಸೋಲಿಸಿ ಸಮಾವೇಶದಲ್ಲಿ ಜಪ ಮಾಡಿದ್ದಾರೆ. ಅಂಬೇಡ್ಕರ್‌ಗೆ ಕಾಂಗ್ರೆಸ್ ಮಾಡಿದ ಎಲ್ಲಾ ಮೋಸಕ್ಕೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿತ್ತು. ಅಂಬೇಡ್ಕರ್ ಮನೆಯನ್ನು ಸ್ಮಾರಕ ಮಾಡಿದ್ದು ಬಿಜೆಪಿ. ಅವರ ಅಂತ್ಯಸಂಸ್ಕಾರ ಜಾಗದಲ್ಲಿ ಬಿಜೆಪಿ ಪ್ರತಿಮೆ ನಿರ್ಮಿಸುತ್ತಿದೆ. ಅಂಬೇಡ್ಕರ್ ಕರ್ಮಭೂಮಿ ಅಭಿವೃದ್ಧಿ ಪಡಿಸುತ್ತಿರುವುದು ಬಿಜೆಪಿ. ತುರ್ತು ಪರಿಸ್ಥಿತಿ ಹೇರಿದ ಇಂದಿರಾಗಾಂಧಿ, ಪ್ರಜಾಪ್ರಭುತ್ವವನ್ನು ಆಗ ಅಪಾಯಕ್ಕೆ ದೂಡಲಾಯಿತು ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಎದುರೇ ಡಿಕೆಶಿ ಸಿಎಂ ಆಗಲಿ ಎಂಬ ಘೋಷಣೆ ಮೊಳಗಿಸುತ್ತಾರೆ. ಸಿದ್ದರಾಮಯ್ಯಗೆ ಇದು ದೊಡ್ಡ ಅಪಮಾನ. ಇದಕ್ಕಿಂತ ದೊಡ್ಡ ಅಪಮಾನ ಇಲ್ಲ. ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ಸಂಪುಟ ನಿರ್ಣಯದ ಪ್ರತಿ ಹರಿದು ಹಾಕಿದ್ದರು. ಕರ್ನಾಟಕದಲ್ಲಿ ಏನು ಕತೆ ಇದು? ಸಿದ್ದರಾಮಯ್ಯ ಅವರನ್ನು ಎದುರು ಕೂರಿಸಿಕೊಂಡೇ ಅಪಮಾನ ಮಾಡಿದ್ದಾರಲ್ಲ. ಸಿದ್ದರಾಮಯ್ಯ ಸ್ವಾಭಿಮಾನಿ ಎಂದು ನಾನು ಅಂದುಕೊಂಡಿದ್ದೆ. ಅವರದ್ದು ಸ್ವಾಭಿಮಾನದ ರಾಜಕಾರಣ ಅಂದುಕೊಂಡಿದ್ದೆ. ನನ್ನಂಥವನು ಸಿಎಂ ಆಗಿ ಹೀಗೆಲ್ಲ ಆಗಿದ್ದರೆ ಒಂದು ಕ್ಷಣವೂ ನಾನು ಅಪಮಾನ ಸಹಿಸುತ್ತಿರಲಿಲ್ಲ. ಸಿದ್ದರಾಮಯ್ಯ ಅದು ಹೇಗೆ ಈ ಅಪಮಾನ ಸಹಿಸಿಕೊಂಡರೋ ಗೊತ್ತಿಲ್ಲ. ಇದು ನನಗೆ ಈಗಲೂ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದರು.

C T Ravi slams Mallikarjun Kharge, says calling priyanka gandhi as Kittur Chennamma is an insult to the freedom fighter.