Mangalore Saloon Attack, Dinesh Gundu Rao: ದೇವರ ಹೆಸರು ಇಟ್ಟುಕೊಂಡು ಗೂಂಡಾಗಿರಿ ಮಾಡೋದು ರಾಮನಿಗೆ ಕಳಂಕ ; ಸಚಿವ ಗುಂಡೂರಾವ್, ಕಠಿಣ ಕಾನೂನು ಕ್ರಮಕ್ಕೆ ಸೂಚಿಸಿದ್ದೇನೆ ; ಗೃಹ ಸಚಿವ ಪರಮೇಶ್ವರ್ 

23-01-25 05:15 pm       Bangalore Correspondent   ಕರ್ನಾಟಕ

ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ಮಾಡಿ ಕಾನೂನು ಕೈಗೆತ್ತಿಕೊಂಡ ಪ್ರಕರಣದಲ್ಲಿ ರಾಮನಗರದಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರು, ಜ.23: ಮಂಗಳೂರಿನಲ್ಲಿ ಮಸಾಜ್ ಸೆಂಟರ್ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ದಾಳಿ ಮಾಡಿ ಕಾನೂನು ಕೈಗೆತ್ತಿಕೊಂಡ ಪ್ರಕರಣದಲ್ಲಿ ರಾಮನಗರದಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಶ್ರೀರಾಮ ಸೇನೆ ಹೆಸರಿನಲ್ಲಿ ಗೂಂಡಾಗಿರಿ ಮಾಡುವ ಕೆಲಸ ಆಗ್ತಿದೆ. ದೇವರ ಹೆಸರು ಹೇಳಿಕೊಂಡು ಶ್ರೀರಾಮನಿಗೆ ಕಳಂಕ ತರುವ ಕೆಲಸ ಮಾಡಬೇಡಿ. ಯಾರಿಗೂ ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ. ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ. 

ಶ್ರೀರಾಮ ಸೇನೆ ಹೆಸರಲ್ಲಿ ಇಂತಹ ದಾಂಧಲೆ ಮಾಡುವುದು  ಸರಿಯಲ್ಲ. ಏನಾದರೂ ಅಕ್ರಮ ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತಂದು ದೂರು ನೀಡಬೇಕು. ಇವರೇ ನುಗ್ಗಿ ದಾಂಧಲೆ ಮಾಡಿ ಗೂಂಡಾಗಿರಿ ಮಾಡುವುದಲ್ಲ. ಕಾನೂನು ಸುವ್ಯವಸ್ಥೆಯನ್ನ ಎಲ್ಲರೂ ಪಾಲಿಸಬೇಕು. ಇಂಥವರ ಮೇಲೆ ಕಟ್ಟುನಿಟ್ಟಾದ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. 

ದೇವರ ಹೆಸರು ಇಟ್ಟುಕೊಂಡು ಇಂತಹ ಕೃತ್ಯ ಮಾಡೋದು ರಾಮನಿಗೆ ಅಗೌರವ. ಹಿಂದೂ ಸಂಘಟನೆಗಳು ಕೂಡಾ ಇದನ್ನ ಖಂಡಿಸಬೇಕು. ನೈತಿಕ ಪೊಲೀಸ್ ಗಿರಿ ಮಾಡಿ ಕಾನೂನು ಕೈಗೆತ್ತಿಕೊಂಡರೆ ಅಂತವರ ವಿರುದ್ಧ ಕ್ರಮ ವಹಿಸುತ್ತೇವೆ. ಈ ರೀತಿ ಮಾಡಿಕೊಂಡು ಹೋದರೆ ಮುಂದೆ ಮಂಗಳೂರಿನ ಅಭಿವೃದ್ಧಿಗೆ ಹಿನ್ನೆಡೆಯಾಗಲಿದೆ. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಆಗ್ತಿದೆ. ಕೆಲವು ಸಂಘಟನೆಗಳು ಗಲಾಟೆ ಮಾಡಿ ಗೊಂದಲ ಸೃಷ್ಠಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡ್ತಿದ್ದಾರೆ‌ ಎಂದರು. 

ಕಾನೂನು ಕ್ರಮಕ್ಕೆ ಸೂಚಿಸಿದ್ದೇನೆ; ಗೃಹ ಸಚಿವ 

ಇದೇ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್, ಯಾವ ಕಾರಣಕ್ಕೆ ದಾಳಿ ನಡೆದಿದೆಯೋ ಗೊತ್ತಿಲ್ಲ. ದಾಳಿ ಮಾಡಿದವರನ್ನು ತಕ್ಷಣ ಬಂಧಿಸಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಇಂತಹ ಕೃತ್ಯಗಳು ನಡೆಯಬಾರದು. ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು. ದಾಳಿ ಮಾಡಿದವರು ಯಾರೆಂದು ಗುರುತಿಸಿ ಇಲಾಖೆ ಕಾನೂನು ಕ್ರಮ ತೆಗೆದುಕೊಳ್ಳಲಿದೆ' ಎಂದರು.

'ಅನೈತಿಕ ಚಟುವಟಿಕೆ ಮಸಾಜ್ ಸೆಂಟರ್‌ಗಳಿದ್ದರೆ ಪೊಲೀಸ್ ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಬದಲಾಗಿ ನಾವೇ ಕಾನೂನು ಕೈಗೆತ್ತಿಕೊಳ್ಳುತ್ತೇವೆ ಎನ್ನುವುದು ಸರಿಯಲ್ಲ. ಮಹಾನಗರ ಪಾಲಿಕೆ ಪರವಾನಗಿ ಕೊಟ್ಟಿರುತ್ತದೆ. ಈ ವೇಳೆ ನಿಯಮ ಪಾಲಿಸದಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

Attack on saloon in Mangalore, home minister Parameshwara orders for strict action. Also incharge minister Dinesh Gundu Rao slams ram sena activist that keeping gods name they are doing work that is against God.