ಪಕ್ಷ - ಸರ್ಕಾರದಲ್ಲಿ ಕಡೆಗಣಿಸುತ್ತಿದ್ದಾರೆ ; ಡಿಕೆ ಸುರೇಶ್ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಸೋತ ಕಾಂಗ್ರೆಸಿಗರ ಸಭೆ, ಸಿಎಂ- ಡಿಸಿಎಂ ಭೇಟಿಗೆ ನಿರ್ಧಾರ 

25-01-25 02:39 pm       Bangalore Correspondent   ಕರ್ನಾಟಕ

ಬಿಜೆಪಿಯೊಳಗೆ ಬಣ ಸಂಘರ್ಷ ತಾರಕಕ್ಕೇರಿದ್ದರೆ, ಇತ್ತ ಕಾಂಗ್ರೆಸ್ ಒಳಗಡೆಯೂ ಪಕ್ಷದ ನಾಯಕರು, ಲೋಕಸಭೆ ಸೋತ ಅಭ್ಯರ್ಥಿಗಳು ಅಸಮಾಧಾನಗೊಂಡು ಪ್ರತ್ಯೇಕ ಸಭೆ ನಡೆಸಿದ್ದಾರೆ.

ಬೆಂಗಳೂರು, ಜ.25:  ಬಿಜೆಪಿಯೊಳಗೆ ಬಣ ಸಂಘರ್ಷ ತಾರಕಕ್ಕೇರಿದ್ದರೆ, ಇತ್ತ ಕಾಂಗ್ರೆಸ್ ಒಳಗಡೆಯೂ ಪಕ್ಷದ ನಾಯಕರು, ಲೋಕಸಭೆ ಸೋತ ಅಭ್ಯರ್ಥಿಗಳು ಅಸಮಾಧಾನಗೊಂಡು ಪ್ರತ್ಯೇಕ ಸಭೆ ನಡೆಸಿದ್ದಾರೆ. ಪಕ್ಷ ಹಾಗೂ ಸರ್ಕಾರದಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡ ಅಭ್ಯರ್ಥಿಗಳು ಬೆಂಗಳೂರು ಗ್ರಾಮಾಂತರ ಮಾಜಿ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆದಿದ್ದು, ಸರ್ಕಾರ ಮತ್ತು ಪಕ್ಷದೊಳಗಿನ ಆಗುಹೋಗುಗಳ ಕುರಿತು ಚರ್ಚೆ ನಡೆಸಿದರು.

ಇದೇ ವೇಳೆ, ಜನವರಿ 30 ರಂದು ನಡೆಯಲಿರುವ ಸಂಪುಟ ಸಭೆಗೂ ಮುನ್ನ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.‌ ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳಿಗೆ ಹೋಲಿಸಿದರೆ ನಮಗೆ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ಆಯಾ ವಿಧಾನಸಭೆ ಕ್ಷೇತ್ರಗಳಲ್ಲಿ ಪರಾಜಿತ ಅಭ್ಯರ್ಥಿಗಳಿಗಿಂತ ದುಪ್ಪಟ್ಟು ಮತ ಪಡೆದರೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಲೆಟರ್‌ ಹೆಡ್‌ಗಳನ್ನು ಪರಿಗಣಿಸುತ್ತಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೂ ಆದ್ಯತೆ ನೀಡಲಾಗುತ್ತಿದೆ ಎಂದು ಮಾಜಿ ಸಂಸದರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. 

ಪಕ್ಷದ ಸಂಘಟನೆಯಲ್ಲು ನಮ್ಮನ್ನು ಪರಿಗಣಿಸುತ್ತಿಲ್ಲ. ನಿಗಮ -ಮಂಡಳಿ ನೇಮಕಾತಿ ಸೇರಿದಂತೆ ಯಾವುದೇ ಹುದ್ದೆ ಅಥವಾ ಸ್ಥಾನಮಾನವನ್ನು ಕೇಳುತ್ತಿಲ್ಲ. ಆದರೆ, ಪಕ್ಷದ ವಿಚಾರದಲ್ಲಿ ನಮಗೆ ಆದ್ಯತೆ ಬೇಕು. ಈ ವಿಚಾರವನ್ನು ಸಿಎಂ ಹಾಗೂ ಡಿಸಿಎಂ ಅವರ ಗಮನಕ್ಕೆ ತರುತ್ತೇವೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಹೇಳಿದ್ದಾರೆ. ಸ್ಥಳೀಯ ಮತ್ತು ರಾಜ್ಯ ಚುನಾವಣೆಗಳಲ್ಲಿ ನಮ್ಮ ಪಾತ್ರವೇನು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಿದ್ದೇವೆ. ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಸಭೆಯಲ್ಲಿ ಪರಾಜಿತ ಲೋಕಸಭೆ ಅಭ್ಯರ್ಥಿಗಳಾದ ಮೃಣಾಲ್ ಹೆಬ್ಬಾಳ್ಕರ್, ಸಂಯುಕ್ತಾ ಪಾಟೀಲ್, ಸ್ಟಾರ್ ಚಂದ್ರು, ಎಸ್.ಪಿ.ಮುದ್ದಹನುಮೇಗೌಡ, ಪ್ರೊ.ರಾಜೇಗೌಡ, ಮನ್ಸೂರ್ ಅಲಿಖಾನ್, ಕೆ.ಜಯಪ್ರಕಾಶ್ ಹೆಗ್ಡೆ, ರಾಜು ಆಲಗೂರು ಸೇರಿದಂತೆ ಇನ್ನಿತರರು ಇದ್ದರು.

Miffed with their party and the state government ignoring them, the Congress candidates who lost the 2024 Lok Sabha polls held a meeting under the leadership of former Bengaluru Rural MP DK Suresh, the younger brother of DCM and KPCC president DK Shivakumar, at a hotel here on Friday.