Mangalore DPR, shiradi ghat: ಶಿರಾಡಿ ಘಾಟಿಯಲ್ಲಿ ಸುರಂಗ ಹೆದ್ದಾರಿ ; 23 ಕಿಮೀ ಉದ್ದಕ್ಕೆ ಆರು ಕಡೆ ಸುರಂಗ ನಿರ್ಮಾಣ, ಐಐಎಸ್ಸಿ ವರದಿ ಆಧರಿಸಿ ಡಿಪಿಆರ್ ಸಿದ್ಧಪಡಿಸಿದ ಹೆದ್ದಾರಿ ಇಲಾಖೆ 

15-02-25 11:03 pm       Bangalore Correspondent   ಕರ್ನಾಟಕ

ಬೆಂಗಳೂರು - ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ಹೆದ್ದಾರಿಯ 23.63 ಕಿ.ಮೀ ಮಾರ್ಗದಲ್ಲಿ ಆರು ಕಡೆ ಸುರಂಗ ಮಾರ್ಗ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಿಪಿಆರ್‌ ಸಿದ್ಧಪಡಿಸಿದ್ದು, ಕೇಂದ್ರ ಸರಕಾರಕ್ಕೆ ಸಲ್ಲಿಸಲು ರೆಡಿಯಾಗಿದೆ. ಈ ಹೆದ್ದಾರಿಯಲ್ಲಿ ಸಂಚಾರ ಸುಗಮಗೊಳಿಸಲು ಸುರಂಗ ಮಾರ್ಗ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಪ್ರಸ್ತಾಪ ಕೇಳಿಬಂದಿತ್ತು.

ಬೆಂಗಳೂರು, ಫೆ.15: ಬೆಂಗಳೂರು - ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ಹೆದ್ದಾರಿಯ 23.63 ಕಿ.ಮೀ ಮಾರ್ಗದಲ್ಲಿ ಆರು ಕಡೆ ಸುರಂಗ ಮಾರ್ಗ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಡಿಪಿಆರ್‌ ಸಿದ್ಧಪಡಿಸಿದ್ದು, ಕೇಂದ್ರ ಸರಕಾರಕ್ಕೆ ಸಲ್ಲಿಸಲು ರೆಡಿಯಾಗಿದೆ. ಈ ಹೆದ್ದಾರಿಯಲ್ಲಿ ಸಂಚಾರ ಸುಗಮಗೊಳಿಸಲು ಸುರಂಗ ಮಾರ್ಗ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಪ್ರಸ್ತಾಪ ಕೇಳಿಬಂದಿತ್ತು. ಪ್ರಸ್ತುತ ಹಾಸನ-ಮಂಗಳೂರು ರೈಲ್ವೇ ಮಾರ್ಗದಲ್ಲಿ ಮಾತ್ರ ಸುರಂಗ ಮಾರ್ಗವಿದೆ. 

ಸುರಂಗ ಮಾರ್ಗ ನಿರ್ಮಾಣ ಸಂಬಂಧಿಸಿ ಭಾರತೀಯ ವಿಜ್ಞಾನ ಸಂಸ್ಥೆಯ ವರದಿ ಆಧರಿಸಿ ನೀಡಿದ ವಿಸ್ಕೃತ ವರದಿಗೆ ಕೇಂದ್ರ ಅನುಮೋದನೆ ನೀಡಿತ್ತು. ಇದೀಗ ಹೆದ್ದಾರಿ ಪ್ರಾಧಿಕಾರವು 12.60 ಕಿ.ಮೀ ಉದ್ದದ ಆರು ಸುರಂಗ ಮಾರ್ಗ, 1.5 ಕಿ.ಮೀ ಉದ್ದದ 10 ಸೇತುವೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದೆ. ಈ ಮಾರ್ಗದಲ್ಲಿ ದ್ವಿಮುಖ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡುವ ಜತೆಗೆ ತುರ್ತು ಸಂದರ್ಭಕ್ಕಾಗಿ 8.58 ಮೀ. ವಿಸ್ತಾರದ ತುರ್ತು ಮಾರ್ಗವೂ ಯೋಜನೆಯಲ್ಲಿದೆ. ಶಿರಾಡಿ ಸುರಂಗ ಮಾರ್ಗದ ಕಾಮಗಾರಿಗೆ ಜಪಾನ್‌ ಇಂಟರ್‌ ನ್ಯಾಷನಲ್‌ ಕೋ ಆಪರೇಷನ್‌ ಏಜೆನ್ಸಿ(ಜೆಐಸಿಎ) ಆರ್ಥಿಕ ನೆರವು ಒದಗಿಸಲಿದೆ. 

ಸುರಂಗ ಮಾರ್ಗದ ಚಿಂತನೆ ಒಂದೆಡೆಯಾದರೆ ಹಿಂದಿನ ವರ್ಷ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತ, ಅನಾಹುತದಿಂದ ಎಚ್ಚೆತ್ತು ಶಿರಾಡಿ ಮಾರ್ಗದ ಹೆದ್ದಾರಿ ಕಾಮಗಾರಿಯನ್ನು ಚುರುಕುಗೊಳಿಸಲಾಗಿದೆ. ಪ್ರತಿ ಮಳೆಗಾಲದಲ್ಲಿ ಭೂಕುಸಿತ, ಸಂಚಾರ ಸ್ಥಗಿತ ಸಮಸ್ಯೆ ಮರುಕಳಿಸುತ್ತಲೇ ಇರುವುದನ್ನು ಮನಗಂಡು ಈಗಾಗಲೇ ಚತುಷ್ಪಥ ರಸ್ತೆ ಹಾಗೂ ಸಕಲೇಶಪುರದಿಂದ ಮಾರನಹಳ್ಳಿ ವರೆಗೆ ಅಲ್ಲಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಹಗಲು-ರಾತ್ರಿ ಈ ಕಾಮಗಾರಿ ಮಾಡುವ ಮೂಲಕ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಪೂರ್ಣಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Mangalore DPR ready for shiradi ghat, 23 kilometer tunnel to be built.