ಬೆಂಗಳೂರು ನಗರದಲ್ಲಿ ಐದು ಕಮಿಷನರೇಟ್ ; ವಿಭಜನೆಗೆ ಸಚಿವ ಸಂಪುಟ ಅಸ್ತು, 1022 ಹುದ್ದೆಗಳ ಸೃಷ್ಟಿಗೆ ಆರ್ಥಿಕ ಇಲಾಖೆ ಒಪ್ಪಿಗೆ 

06-10-26 10:46 pm       HK News Desk   ಕರ್ನಾಟಕ

ರಾಜಧಾನಿ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿದ್ದು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಪರಿಣಾಮಕಾರಿ ನಿರ್ವಹಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಐದಾಗಿ ವಿಭಜಿಸಿ ಪುನರ್‌ ಸಂಘಟಿಸಲು ಮಂಗಳವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ

ಬೆಂಗಳೂರು, ಅ.6 ರಾಜಧಾನಿ ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿದ್ದು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಮತ್ತಷ್ಟು ಪರಿಣಾಮಕಾರಿ ನಿರ್ವಹಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಐದಾಗಿ ವಿಭಜಿಸಿ ಪುನರ್‌ ಸಂಘಟಿಸಲು ಮಂಗಳವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ

ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಬೆಂಗಳೂರಿನಲ್ಲಿ ಐದು ಪ್ರತ್ಯೇಕ ಕಮಿಷನರೇಟ್‌ಗಳ ರಚನೆ ಆಗಲಿದೆ. ಇದಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.

ಸದ್ಯ ಚಾಲ್ತಿಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತಾಲಯವನ್ನು ಮುಖ್ಯ ಪೊಲೀಸ್ ಆಯುಕ್ತರ ಒಟ್ಟಾರೆ ಮೇಲ್ವಿಚಾರಣೆಯಲ್ಲಿ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್ ಗಳಾಗಿ ವಿಭಜಿಸಿ ಪುನರ್ ರಚಿಸಲಾಗುವುದು ಎಂದು ಹೇಳಿದರು. 

ಪ್ರಸ್ತುತ ಪೊಲೀಸ್ ಆಯುಕ್ತರ ಹುದ್ದೆಯನ್ನು 'ಮುಖ್ಯ ಪೊಲೀಸ್ ಆಯುಕ್ತರು' ಎಂದು ಮೇಲ್ದರ್ಜೆಗೆ ಏರಿಸಲಾಗುವುದು. ಜಂಟಿ ಅಥವಾ ಅಪರ ಪೊಲೀಸ್ ಆಯುಕ್ತರ (ಸಂಚಾರ) ಹುದ್ದೆಯನ್ನು 'ಪೊಲೀಸ್ ಆಯುಕ್ತರು(ಸಂಚಾರ)' ಎಂದು ಹೆಸರಿಸಲಾಗುವುದು. ಈ ಯೋಜನೆಗೆ ಅಗತ್ಯವಿರುವಂತೆ ಒಟ್ಟು 1,022 ಹೊಸ ಹುದ್ದೆಗಳನ್ನು ಸೃಜಿಸಲು ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದ್ದು, ಸಚಿವ ಸಂಪುಟ ಅನುಮೋದಿಸಿದೆ ಎಂದರು.

ಪ್ರಸ್ತಾವಿತ ಘಟಕಗಳಲ್ಲಿ ಅಪರಾಧ ಪ್ರಕರಣಗಳ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಸಾರ್ವಜನಿಕ ಭದ್ರತೆಗಾಗಿ ಒಟ್ಟು 6,550 ಹುದ್ದೆಗಳ ಅಗತ್ಯವಿದ್ದು, ಹೊಸ ಹುದ್ದೆಗಳ ಜೊತೆಗೆ ಪ್ರಸ್ತುತ ಚಾಲ್ತಿಯಲ್ಲಿರುವ ಹುದ್ದೆಗಳನ್ನು ಮರು ನಿಯೋಜಿಸಿ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಂಚಾರ ನಿರ್ವಹಣೆಗೆ ಅನುಕೂಲವಾಗುವಂತೆ ಕೇಂದ್ರ ಸಂಚಾರ ವಿಭಾಗಕ್ಕೆ 2, ಪಶ್ಚಿಮ ಸಂಚಾರ ವಿಭಾಗಕ್ಕೆ 1, ಉತ್ತರ ಸಂಚಾರ ವಿಭಾಗಕ್ಕೆ 1 ಮತ್ತು ಪಶ್ಚಿಮ ಕಾನೂನು ಸುವ್ಯವಸ್ಥೆ ವಿಭಾಗಕ್ಕೆ 2ರಂತೆ ಒಟ್ಟು 6 ಹೊಸ ಎಸಿಪಿ (ACP) ಹುದ್ದೆಗಳನ್ನು ಸೃಷ್ಟಿಸಲಾಗುವುದು. ಪ್ರತಿಯೊಂದು ಎಸಿಪಿ ಕಚೇರಿಗೆ ತಲಾ 5 ಕಾರ್ಯಕಾರಿ ಹುದ್ದೆಗಳನ್ನು ಹೊಸದಾಗಿ ನೀಡಲಾಗುವುದು ಎಂದರು.