ಗೋಮಾಂಸ ತಿನ್ನುವುದನ್ನೇ ಸಾಧನೆ ಎಂದುಕೊಂಡಿದ್ದಾರೆ ; ಸಿದ್ದು ಹೆಸರೇಳದೆ ತಿವಿದ ಯಡಿಯೂರಪ್ಪ !!

11-01-21 04:24 pm       Headline Karnataka News Network   ಕರ್ನಾಟಕ

ಕಾಂಗ್ರೆಸ್ ಪಕ್ಷ ದೇಶ ಮತ್ತು ರಾಜ್ಯದಲ್ಲಿ ನೆಲೆ ಇಲ್ಲದಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಮೈಸೂರಿನ ಮುಖಂಡರೊಬ್ಬರು ಗೋಮಾಂಸ ತಿನ್ನುವುದನ್ನೇ ಸಾಧನೆ ಎಂದುಕೊಂಡಿದ್ದಾರೆ.

ಮೈಸೂರು, ಜ.11 : ಕಾಂಗ್ರೆಸ್ ಪಕ್ಷ ದೇಶ ಮತ್ತು ರಾಜ್ಯದಲ್ಲಿ ನೆಲೆ ಇಲ್ಲದಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಮೈಸೂರಿನ ಮುಖಂಡರೊಬ್ಬರು ಗೋಮಾಂಸ ತಿನ್ನುವುದನ್ನೇ ಸಾಧನೆ ಎಂದುಕೊಂಡಿದ್ದಾರೆ. ಅದನ್ನೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಿದ್ದರಾಮಯ್ಯ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದಾರೆ. 

ಮುಂಬರುವ ಜಿಪಂ ಚುನಾವಣೆ ಹಿನ್ನೆಲೆ ಮತ್ತು ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯಲ್ಲಿ ಗೆದ್ದಿರುವ ಪಕ್ಷ ಬೆಂಬಲಿತ ಸದಸ್ಯರನ್ನು ಸನ್ಮಾನಿಸುವ ಉದ್ದೇಶದಿಂದ ಬಿಜೆಪಿ ರಾಜ್ಯ ಹಮ್ಮಿಕೊಂಡಿರುವ ‘ಜನ ಸೇವಕ್‌’ ಸಮಾವೇಶವನ್ನು ಮೈಸೂರಿನಲ್ಲಿ ಸಿಎಂ ಉದ್ಘಾಟಿಸಿ ಮಾತನಾಡಿದರು. 

ಕಾಂಗ್ರೆಸ್‌ ಹಾಗೂ ಆ ಪಕ್ಷದ ನಾಯಕರ ಬಗ್ಗೆ ಮಾತನಾಡುವಂತೆಯೇ ಇಲ್ಲ. ಅವರ ಬಗ್ಗೆ ಪ್ರತಿಕ್ರಿಯಿಸುವುದು ಶೋಭೆ ತರುವ ರೀತಿ ಇಲ್ಲ. ಏನೇನೋ ಹೇಳಿಕೊಂಡು, ಕೆಣಕುತ್ತಿದ್ದಾರೆ. ನನ್ನ ಪ್ರತಿಕ್ರಿಯೆಗಾಗಿ ಕಾದು ಟೀಕೆ ಮಾಡುತ್ತಾರೆ. ಅದಕ್ಕಾಗಿ ಯಾವುದಕ್ಕೂ ಪ್ರತಿಕ್ರಿಯೆ ಕೊಡುವುದನ್ನೇ ಕಡಿಮೆ ಮಾಡಿದ್ದೇನೆ ಎಂದರು. 

ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದು  ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಸಾಧನೆ ವಿವರಿಸಿದ್ದೇನೆ. ನಮ್ಮ ಸಾಧನೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ 140ರಿಂದ 150 ಸ್ಥಾನ ಗೆಲ್ಲುವ ಭರವಸೆ ಕೊಟ್ಟು ಬಂದಿದ್ದೇನೆ. ಪಕ್ಷದ ಕಾರ್ಯಕರ್ತರು ನಮ್ಮ ಗುರಿಯನ್ನು ಈಡೇರುವರೆಂಬ ಭರವಸೆ ನನಗಿದೆ ಎಂದು ಹೇಳಿದರು

ಕಾಂಗ್ರೆಸ್ ಗೆ ಶಾಪ ತಟ್ಟಿದೆ ; ನಳಿನ್ 

ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಗಾಂಧೀಜಿ ಹೆಸರು ಹೇಳಿಕೊಂಡು ಅಧಿಕಾರಕ್ಕೇರಿದ ಕಾಂಗ್ರೆಸ್‌ ಅವರು ಹೇಳಿದ್ದ ವಿಚಾರಗಳನ್ನು ದೂರವಿಟ್ಟಿತ್ತು. ಅಂಬೇಡ್ಕರ್‌ ಫೋಟೊ ಬಳಸಿ ಮತ ಕೇಳುತ್ತಾರೆ. ಆದರೆ, ಅವರು ಜೀವಂತ ಇದ್ದಾಗ ಹೀನಾಯವಾಗಿ ನಡೆದುಕೊಂಡಿದ್ದರು. ಗೋಮಾತೆಯ ಚಿಹ್ನೆ ಇಟ್ಟು ಮತ ಕೇಳಿದ್ದ ಕಾಂಗ್ರೆಸ್, ಹಸುಗಳನ್ನು ಹಂತಕರ ಕೈಗೆ ಕೊಟ್ಟಿತ್ತು. ಈ ಮೂರು ಶಾಪಗಳು ಕಾಂಗ್ರೆಸಿಗೆ ತಟ್ಟಿದೆ. ಈಗ ಒಬ್ಬರು ಗೋ‌ಮಾಂಸ ತಿಂತೀನಿ ಅನ್ನುತ್ತಾ ಈ ದೇಶದ ಸಂಸ್ಕೃತಿಗೇ ಅವಮಾನ ಮಾಡುತ್ತಿದ್ದಾರೆ ಎಂದರು. ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ನಾಯಕರೇ ಜಗಳ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಟವೆಲ್‌ ಹಾಕಿದರೆ, ಅದನ್ನು ಡಿ.ಕೆ.ಶಿ ಎಳೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.