ಡಿ.ಜೆ ಹಳ್ಳಿ ಗಲಭೆ; ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಕೆಸರೆರಚಾಟ ಶುರು

13-08-20 01:20 pm       Headline Karnataka News Network   ಕರ್ನಾಟಕ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಲಿತರ ಪರವೋ ಇಲ್ಲ ಭಯೋತ್ಪಾದಕರ ಪರವೋ ಎಂಬ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಠಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರು, ಆಗಸ್ಟ್.12: ಬೆಂಗಳೂರಿನ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿಯಲ್ಲಿ ನಡೆದ ದಾಂಧಲೆ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ಕೆಸರೆರಚಾಟ ಶುರುವಾಗಿದೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದಲಿತರ ಪರವೋ ಇಲ್ಲ ಭಯೋತ್ಪಾದಕರ ಪರವೋ ಎಂಬ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಠಕ್ಕರ್ ಕೊಟ್ಟಿದ್ದಾರೆ.

"ನಳಿನ್ ಕುಮಾರ್ ಕಟೀಲ್ ಅವರೇ ನಾವು ಮನುಷ್ಯರ ಪರ, ಮನುಷ್ಯವಿರೋಧಿಗಳ ಪರ ಅಲ್ಲ. ನಾವು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರ ಅಲ್ಲ. ನಾವು ಕಟ್ಟುವವರ ಪರ, ಕೆಡವುವವರ ಪರ ಅಲ್ಲ. ನಮ್ಮನ್ನು ಮತ್ತು ನಿಮ್ಮನ್ನು ಇದಕ್ಕಿಂತ ಚೆನ್ನಾಗಿ ಹೇಗೆ ಪರಿಚಯಿಸಲಿ ಹೇಳಿ?" ಎಂದು ಟ್ವಿಟರ್ ನಲ್ಲಿ ಟಾಂಗ್ ನೀಡಿದ್ದಾರೆ.



ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮರು ಪ್ರಶ್ನೆ ಹಾಕಿದ್ದಾರೆ. "ನೀವು ದಲಿತರ ಪರವೋ? ಹಿಂದೂಗಳ ಪರವೋ?, ನೀವೊಬ್ಬ ಹಿಂದುವಾದರೆ, ಅಖಂಡ ಶ್ರೀನಿವಾಸಮೂರ್ತಿ ಯಾಕೆ ಹಿಂದು ಅಲ್ಲ?, ಅವರು ಯಾಕೆ ಹಿಂದು ಆಗದೆ ಕೇವಲ ದಲಿತ ಆಗಿಬಿಟ್ಟರು?, ಹಿಂದುತ್ವದ ಸರಿಯಾದ ವ್ಯಾಖ್ಯಾನ ಏನೆಂದು ನಿಮ್ಮ ಹಿರಿಯರಿಂದ ಕೇಳಿ ತಿಳಿದುಕೊಂಡು ಸ್ಪಷ್ಟಪಡಿಸುವಿರಾ?" ಎಂದು ಟ್ವೀಟ್ ಮಾಡಿದ್ದಾರೆ.

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರಳಿಯ ನವೀನ್, ಒಂದು ಸಮುದಾಯದ ವಿರುದ್ಧ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆ ಮೊದಲಿಗೆ ಕಾವಲ್ ಬೈರಸಂದ್ರದಲ್ಲಿರುವ ಶಾಸಕರ ನಿವಾಸದ ಎದುರು ಆಗಸ್ಟ್.11ರ ರಾತ್ರಿ 8 ಗಂಟೆ ಸುಮಾರಿಗೆ ನೂರಾರು ಮಂದಿ ಉದ್ರಿಕ್ತರು ನೆರೆದು ಗಲಾಟೆ ಶುರು ಮಾಡಿದರು. ನೋಡನೋಡುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಶಾಸಕರ ಮನೆ ಗಾಜುಗಳಿಗೆ ಕಲ್ಲುತೂರಿದ ಉದ್ರಿಕ್ತರು ಮನೆ ಎದುರಿಗಿದ್ದ ವಾಹನಗಳನ್ನು ಪುಡಿಗಟ್ಟಿದರು. ದುಷ್ಕರ್ಮಿಗಳು ನಡೆಸಿದ ದುಷ್ಕೃತ್ಯಕ್ಕೆ ಶಾಸಕರ ನೆಲಮಹಡಿಯು ಸಂಪೂರ್ಣ ಸುಟ್ಟು ಭಸ್ಮವಾಯಿತು. ಈ ಘಟನೆಯನ್ನು ಖಂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು.