ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ್ಮಿಂಗ್ ಹ್ಯಾಮ್, ಲೀ ಮಿಂಗ್ಟನ್ ನಗರದ 400ಕ್ಕು ಹೆಚ್ಚು ಕನ್ನಡಿಗರು ಭಾಗಿ 

16-12-25 06:33 pm       HK News Desk   ದೇಶ - ವಿದೇಶ

ಇಂಗ್ಲೆಂಡಿನ ಮಿಡ್ಲಾಂಡ್ಸ್ ಪ್ರದೇಶದಲ್ಲಿ ಕರ್ನಾಟಕದ ಕನ್ನಡಿಗರು ಸೇರಿ ನ.29ರಂದು ರಾಜ್ಯೋತ್ಸವದ ಆಚರಣೆ ಮಾಡಿದ್ದಾರೆ. 400ಕ್ಕೂ ಹೆಚ್ಚು ಕನ್ನಡಿಗರು ಕಾರ್ಯಕ್ರಮದಲ್ಲಿ ಸೇರಿದ್ದು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಗೌರವಿಸಿದರು.

ಲಂಡನ್, ಡಿ.16 : ಇಂಗ್ಲೆಂಡಿನ ಮಿಡ್ಲಾಂಡ್ಸ್ ಪ್ರದೇಶದಲ್ಲಿ ಕರ್ನಾಟಕದ ಕನ್ನಡಿಗರು ಸೇರಿ ನ.29ರಂದು ರಾಜ್ಯೋತ್ಸವದ ಆಚರಣೆ ಮಾಡಿದ್ದಾರೆ. 400ಕ್ಕೂ ಹೆಚ್ಚು ಕನ್ನಡಿಗರು ಕಾರ್ಯಕ್ರಮದಲ್ಲಿ ಸೇರಿದ್ದು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಗೌರವಿಸಿದರು.

ಮಿಡ್ಲಾಂಡ್ಸ್ ಕನ್ನಡಿಗರ ಕೋ ವೆಂಟ್ರಿ ಕನ್ನಡಿಗರು, ಬರ್ಮಿಂಗ್ ಹ್ಯಾಮ್ ಕನ್ನಡ ಗ್ರೂಪ್, ಲೀ ಮಿಂಗ್ಟನ್ ಸ್ಪಾ / ವಾರ್ವಿಕ್ ಕನ್ನಡಿಗರು, ರಗ್ಬಿ ಕನ್ನಡಿಗರು ಮತ್ತು ನಮ್ಮವರು ಯುಕೆ ಸಂಸ್ಥೆಗಳ ಸಂಯೋಜಿತ ಪ್ರಯತ್ನದಿಂದ ಮಿಡ್ಲೆಂಡ್ಸ್ ಯುಕೆಯಾದ್ಯಂತದ ಕನ್ನಡಿಗರು ಒಂದೇ ವೇದಿಕೆಗೆ ಬಂದು ಸತತ ಐದನೇ ವರ್ಷದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದಾರೆ. ಐದು ವರ್ಷಗಳ ಹಿಂದೆ "ಒಗಟ್ಟಿನಲ್ಲಿ ಬಲವಿದೆ" ಎಂಬ ಘೋಷದೊಂದಿಗೆ ಆರಂಭಗೊಂಡಿದ್ದು ಮಿಡ್ಲಾಂಡ್ಸ್ ಕನ್ನಡಿಗರ ಸಂಘವು ಕೇವಲ ಒಂದು ಸಂಘಟನೆಯಲ್ಲ ; ಇದು ಸಾವಿರಾರು ಮೈಲಿಗಳ ದೂರದಲ್ಲಿ ಬೆಸೆದುಕೊಂಡಿರುವ ಒಂದು ಕುಟುಂಬ ಎಂದು ಕಾರ್ಯಕ್ರಮದ ಮೂಲಕ ಸಾರಲಾಯಿತು. 

ಗಣೇಶ ಚತುರ್ಥಿ ಸಡಗರದಿಂದ ಹಿಡಿದು, ಕನ್ನಡದ ನಲಿ ಕಲಿ ಪಾಠಶಾಲೆಗಳ ಪ್ರೋತ್ಸಾಹದ ವರೆಗೆ ಮತ್ತು ಆಟ /ಊಟ ನಮ್ಮ ಪ್ರತಿಯೊಂದು ಹೆಜ್ಜೆಯೂ ಕನ್ನಡ ಸಂಸ್ಕೃತಿ ಮತ್ತು ಭಾಷೆಯ ರಕ್ಷಣೆಗಾಗಿಯೇ ಮುಡಿಪಾಗಿದೆ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ರವಾನಿಸಲಾಯಿತು. 

ರಾಯಲ್ ಲೀ ಮಿಂಗ್ಟನ್ ಸ್ಪಾದಲ್ಲಿ ನಡೆದ ಈ ಉತ್ಸವಕ್ಕೆ ಬರ್ಮಿಂಗ್ ಹ್ಯಾಮ್ ಭಾರತೀಯ ಕಾನ್ಸುಲ್ ಜನರಲ್ ಡಾ. ವೆಂಕಟಾಚಲಂ ಮುರುಗನ್, ಲೀ ಮಿಂಗ್ಟನ್ ಸ್ಪಾ ಮೇಯರ್ ರಗ್ಗಿ ಸಿಂಗ್, ವಾರ್ವಿಕ್ ಕೌನ್ಸಿಲ್ ಚೇರ್ಮನ್ ನವೀನ್ ಟ್ಯಾಂಗ್ರಿ, ಕೌನ್ಸಿಲರ್ ಹೇಮಾ
ಯಲ್ಲಪ್ರಗಡ ಮತ್ತು ಖ್ಯಾತ ರೋಯಿಂಗ್ ಸಾಧಕಿ ಅನನ್ಯಾ ಪ್ರಸಾದ್ ಅತಿಥಿಗಳಾಗಿದ್ದರು. ಕಾನ್ಸುಲ್ ಜನರಲ್ ಮುರುಗನ್ ಅವರು ಕನ್ನಡದಲ್ಲಿಯೇ ಭಾಷಣ ಮಾಡುತ್ತಾ, ಕನ್ನಡ ಧ್ವಜದ ಬಣ್ಣಗಳ ಮಹತ್ವವನ್ನು ವಿವರಿಸಿದರು. ಕರ್ನಾಟಕವನ್ನು ಭಾರತದ ಟಾಪ್ ಐದು ಕಾರ್ಯಕ್ಷಮತೆಯ ರಾಜ್ಯವೆಂದೂ, ವಿಶೇಷವಾಗಿ ಐಟಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವೆಂದೂ ಒತ್ತಿ ಹೇಳಿದರು. 

ಕೌನ್ಸಿಲರ್ ಹೇಮಾ ಯಲ್ಲಪ್ರಗಡ ಅವರು ಪೋಷಕರು ತಮ್ಮ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡುವುದನ್ನು ನೋಡಿ ಸಂತೋಷ ವ್ಯಕ್ತಪಡಿಸಿ, ವಿದೇಶದಲ್ಲಿರುವ ಮಕ್ಕಳು ಕನ್ನಡ ಭಾಷೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದರ ಮಹತ್ವವನ್ನು ಒತ್ತಿ ಹೇಳಿದರು. ಖ್ಯಾತ ರೋಯಿಂಗ್ ಸಾಧಕಿ ಅನನ್ಯಾ ಪ್ರಸಾದ್ ಅವರು ತಮ್ಮ 3000 ಮೈಲಿಗಳ ‘ಗ್ರೇಟ್ ಅಟ್ಲಾಂಟಿಕ್ ರೋಯಿಂಗ್ ಚಾಲೆಂಜ್’ ಅನುಭವವನ್ನು ಹಂಚಿಕೊಂಡರು. ಇಡೀ ಕಾರ್ಯಕ್ರಮವನ್ನು ಸಾಲುಮರದ ತಿಮ್ಮಕ್ಕನವರಿಗೆ ಅರ್ಪಣೆ ಮಾಡಲಾಯಿತು. 

ಕರ್ನಾಟಕದ ವಿವಿಧ ಬಗೆಯ ಆಹಾರ ಮತ್ತು ಜವಳಿ ವ್ಯಾಪಾರ ಮಳಿಗೆಗಳನ್ನು ಆಯೋಜಿಸಿದ್ದು, ಇದು ಕನ್ನಡಿಗರಿಗೆ ಮತ್ತು ಸ್ಥಳೀಯರಿಗೆ ಕರ್ನಾಟಕದ ಆಹಾರ ಸಂಸ್ಕೃತಿಯ ಪರಿಚಯ ಮಾಡಿಕೊಟ್ಟಿತು. ಸಂಜೆಯ ಕಾರ್ಯಕ್ರಮದಲ್ಲಿ ವಿಜಯೇಂದ್ರ ಮತ್ತು ಶ್ರೀದೇವಿ ಅವರು
ಕನ್ನಡದ ಹಿಟ್ ಹಾಡುಗಳನ್ನು ಹಾಡಿ ರಂಜಿಸಿದರು. ಕರ್ನಾಟಕದ ಸಾಂಪ್ರದಾಯಿಕ ಖಾದ್ಯಗಳನ್ನು ಸವಿಯುತ್ತ, ಮಕ್ಕಳು ಮತ್ತು ಹಿರಿಯರು ಸಮಾನವಾಗಿ ಭಾಗವಹಿಸಿದರು.

Kannadigas living in the Midlands region of the United Kingdom came together to celebrate Kannada Rajyotsava on November 29, with over 400 people participating in the cultural event. The celebration was jointly organised by Midlands Kannadigas, Coventry Kannadigas, Birmingham Kannada Group, Leamington Spa/Warwick Kannadigas, Rugby Kannadigas and Namavaru UK, marking the fifth consecutive year of the festival under the banner of unity and cultural pride.