ಮೇಲಾಧಿಕಾರಿ ಒತ್ತಡದಿಂದ ಪಿಎಸ್​ಐ ಕಿರಣ್ ಆತ್ಮಹತ್ಯೆ - ಎಚ್.ಡಿ.ರೇವಣ್ಣ ಆರೋಪ

31-07-20 11:56 am       Headline Karnataka News Network   ಕರ್ನಾಟಕ

ಒತ್ತಡದಿಂದ ಪಿಎಸ್​ಐ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ; ಅಂತಿಮ ದರ್ಶನದ ಬಳಿಕ ಎಚ್.ಡಿ.ರೇವಣ್ಣ ಆರೋಪ

ಹಾಸನ; ಚನ್ನರಾಯಪಟ್ಟಣ ಪಿಎಸ್​ಐ ಕಿರಣ್ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ಕಿರಣ್ ಮನೆಗೆ ಭೇಟಿ ನೀಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಬಳಿಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು, ಮೇಲಾಧಿಕಾರಿ ಒತ್ತಡದಿಂದ ಪಿಎಸ್​ಐ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋದು ನನಗೆ ತಿಳಿದ ಮಾಹಿತಿ. ಪಿಎಸ್​ಐ ಕಿರಣ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಫೋನ್ ಕಿತ್ತುಕೊಂಡಿದ್ದಾರೆ. ಅವರ ಫೋನ್ ಕಾಲ್ ಮತ್ತು ಮೆಸೇಜ್ ಗಳನ್ನು ಡಿಲೀಟ್ ಮಾಡಬದುಹು ಎಂದು ಶಂಕೆ ಇದೆ. ಪಿಎಸ್​ಐ ಕಿರಣ್ ಮೊಬೈಲ್ ಅನ್ನು ಐಜಿಪಿ ವಿಫುಲ್ ಕುಮಾರ್ ವಶಪಡಿಸಿಕೊಂಡಿದ್ದಾರೆ. ಅವರ ಮನೆಯವರ ಸಮ್ಮುಖದಲ್ಲಿ ಮೊಬೈಲ್ ಡಿಟೇಲ್ ಮಹಜರ್ ತೆಗೆಯಬೇಕಿತ್ತು. ಆದರೆ, ಹಾಗೆ ಮಾಡಿಲ್ಲ. ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರ ಮನೆಯವರ ಮುಂದೆ ತನಿಖೆ ನಡೆಸಬೇಕಿತ್ತು. ಹಾಗೆ ಮಾಡಿಲ್ಲ ಎಂದು ಆರೋಪಿ ಹಿರಿಯ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲೆಯಲ್ಲಿ ಪೊಲೀಸ್ ವರ್ಗಾವಣೆ ದಂಧೆ ಕೇವಲ ಒಬ್ಬ ಶಾಸಕ ಹಾಗೂ ಓರ್ವ ಸರ್ಕಲ್ ಇನ್ಸ್ ಪೆಕ್ಟರ್ ಕೈಯಲ್ಲಿದೆ. ಈ ಪ್ರಕರಣ ಸಿಬಿಐ ತನಿಖೆಯಾಗಬೇಕು. ಪ್ರಾಮಾಣಿಕ ಅಧಿಕಾರಿಗೆ ಬೆಲೆ ಎಲ್ಲಿದೆ. ಮೃತ ಕಿರಣ್ ಅವರ ಪತ್ನಿ ಬೆಳಿಗ್ಗೆ 11.15 ಕ್ಕೆ ಕಿರಣ್ ಗೆ ಫೋನ್ ಮಾಡಿ ಮಾತನಾಡಿದ್ದಾರೆ. ಮತ್ತೆ ಫೋನ್ ಮಾಡಿದಾಗ ಕಿರಣ್ ಫೋನ್ ಸ್ವಿಚ್ಡ್ ಆಫ್ ಆಗಿದೆ. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಅನವಶ್ಯಕ ಮಾತುಗಳು ಬೇಡ; ಸಿಬ್ಬಂದಿಗೆ ಐಜಿಪಿ ಮನವಿ

ನಮ್ಮ ಇಲಾಖೆ ಈಗ ಬಹಳ ಸಮಸ್ಯೆಗಳ ಒಳಗೆ ಕೆಲಸ ಮಾಡುತ್ತಿದೆ. ಆ ಸಮಸ್ಯೆಗಳ ಒಳಗೆ ನಮ್ಮ‌ ಸಿಬ್ಬಂದಿ ಸಾವಿನ ಬಗ್ಗೆ ಅನವಶ್ಯಕವಾಗಿ ಮಾತನಾಡಲು ಯಾರು ಹೋಗಬಾರದು. ಸಾವಿಗೆ ಕಾರಣ ಏನು ಎಂದು ತನಿಖೆ ಮಾಡಿ ಸತ್ಯಾಂಶ ಹೊರತರುತ್ತೇವೆ ಎಂದು ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್ ಹೇಳಿದರು.

ಎರಡು ಕೊಲೆ ಪ್ರಕರಣಗಳಲ್ಲಿ ಒತ್ತಡ ಇತ್ತು ಎಂದು ಹೇಳುತ್ತಿದ್ದಾರೆ. ಸುಮ್ಮನೆ ಈ ರೀತಿ ವದಂತಿ ಮಾಡಲು ಜನ ಹೋಗಬಾರದು. ಪೊಲೀಸರೆಲ್ಲ ಒಂದು ಕುಟುಂಬದ ರೀತಿ ಇದ್ದೇವೆ. ನಮಗೆ ಆಗಿರುವ ನೋವು ಬೇರೆಯವರ ಜೊತೆ ಹಂಚಿಕೊಳ್ಳಲು ಆಗಲ್ಲ. ಜೀವಕ್ಕೆ ಗೌರವ ಕೊಡುವುದಾದರೆ ವದಂತಿ ಹಬ್ಬಿಸಬಾರದು. ಕೊಲೆಗೆ ಸಂಬಂಧಿಸಿದಂತೆ ಗೈಡ್‌ಲೈನ್ಸ್ ಕೊಡುವ ಕೆಲಸ ಮಾಡಿರುತ್ತೇವೆ. ಅದಕ್ಕೂ ಆತ್ಮಹತ್ಯೆಗೂ ಸಂಬಂಧವಿಲ್ಲ. ನಾವು ಅನವಶ್ಯಕವಾಗಿ ಮಾತನಾಡಬಾರದು. ನಮ್ಮ ಕುಟುಂಬದ ಜೀವ ಕಳೆದುಕೊಂಡು ನೋವಾಗಿದೆ. ಅವರ ಕುಟುಂಬದವರು, ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರು ಬಹಳ ಒಳ್ಳೆಯ ಹಾಗೂ ದಕ್ಷ ಅಧಿಕಾರಿ. ಈ ವಿಷ್ಯದಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದು ಐಜಿಪಿ ಮನವಿ ಮಾಡಿದರು.