ವೈದ್ಯರ ನಿರ್ಲಕ್ಷ್ಯ ಆರೋಪ ; ತಾಯಿ - ಮಗು ಸಾವು

15-03-21 12:26 pm       Headline Karnataka News Network   ಕರ್ನಾಟಕ

ಬಲವಂತದ ಹೆರಿಗೆಯಿಂದಾಗಿ ಗರ್ಭಿಣಿ ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ದಾವಣಗೆರೆ,ಮಾ.15 : ಬಲವಂತದ ಹೆರಿಗೆಯಿಂದಾಗಿ ಗರ್ಭಿಣಿ ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗು ಕಣ್ಬಿಡುವುದಕ್ಕೂ ಮುನ್ನವೇ ಕಣ್ಮುಚ್ಚಿರುವ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಕಾವ್ಯ (21) ಸಾವನ್ನಪ್ಪಿದ ಗರ್ಭಿಣಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಿಲವಂಜಿ ಗ್ರಾಮದ ನಿವಾಸಿ ಕಾವ್ಯ ತಡರಾತ್ರಿ ಹೆರಿಗೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಈ ವೇಳೆ, ವೈದ್ಯರು ಹಾಗೂ ನರ್ಸ್​ಗಳು ಬಲವಂತವಾಗಿ ನಾರ್ಮಲ್​ ಡೆಲಿವರಿ ಮಾಡಿಸಲು ಪ್ರಯತ್ನಿಸಿದ್ದು, ಗರ್ಭಿಣಿ ಕಾವ್ಯ ಹೊಟ್ಟೆಯನ್ನು ಜೋರಾಗಿ ಒತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಗರ್ಭದಲ್ಲಿಯೇ ಮಗು ಕಣ್ಮುಚ್ಚಿದ್ದು, ಮಹಿಳೆಯೂ ಕೂಡ ಸಾವನ್ನಪ್ಪಿದ್ದಾಳೆ ಎಂದು ಆಕೆ ಪೋಷಕರು ಆರೋಪಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದಾಗಿ ಮಹಿಳೆ ಹಾಗೂ ಆಕೆಯ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿರುವುದಾಗಿ ಆರೋಪಿಸಿ ಮೃತ ಮಹಿಳೆಯ ಕುಟುಂಬಸ್ಥರು ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರೂ ಕೂಡ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Doctors blamed of urgent delivery and killing of Mother and Baby in the womb in Davanagere.