ಜಿಂದಾಲ್ ಭೂಮಿಗೆ ಸಂಪುಟ ಸಭೆಯಲ್ಲಿ ಬ್ರೇಕ್ ; ಸಿಎಂ ಯಡಿಯೂರಪ್ಪ ಧಾವಂತಕ್ಕೆ ಅಡ್ಡಗಾಲು

27-05-21 04:21 pm       Bangalore Correspondent   ಕರ್ನಾಟಕ

ಬಿಜೆಪಿ ಶಾಸಕರಿಂದಲೇ ಭಾರೀ ವಿರೋಧಕ್ಕೆ ಕಾರಣವಾಗಿದ್ದ ಜಿಂದಾಲ್ ಸಂಸ್ಥೆಗೆ ಬಳ್ಳಾರಿಯಲ್ಲಿ 3667 ಎಕ್ರೆ ಭೂಮಿ ನೀಡುವ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿ ಬ್ರೇಕ್ ಹಾಕಲಾಗಿದೆ.

ಬೆಂಗಳೂರು, ಮೇ 27: ಬಿಜೆಪಿ ಶಾಸಕರಿಂದಲೇ ಭಾರೀ ವಿರೋಧಕ್ಕೆ ಕಾರಣವಾಗಿದ್ದ ಜಿಂದಾಲ್ ಸಂಸ್ಥೆಗೆ ಬಳ್ಳಾರಿಯಲ್ಲಿ 3667 ಎಕ್ರೆ ಭೂಮಿ ನೀಡುವ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿ ಬ್ರೇಕ್ ಹಾಕಲಾಗಿದೆ. ಈ ಹಿಂದಿನ ಸಂಪುಟ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಜಿಂದಾಲ್ ಸಂಸ್ಥೆಗೆ ಭೂಮಿ ನೀಡಲು ಒಪ್ಪಿಗೆ ನೀಡಿದ್ದು ವಿರೋಧಕ್ಕೆ ಕಾರಣವಾಗಿತ್ತು.

ಬಿಜೆಪಿ ಶಾಸಕರೇ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಸಿಎಂ ನಿರ್ಧಾರದ ಬಗ್ಗೆ ಆಕ್ಷೇಪ ಕೇಳಿಬಂದಿತ್ತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯಂತೂ, ಜಿಂದಾಲ್ ಸಂಸ್ಥೆಗೆ ಭೂಮಿ ನೀಡುವ ವಿಚಾರದಲ್ಲಿ ಬಿಜೆಪಿಯಿಂದ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಇದೀಗ ನಾವೇ ಅಧಿಕಾರದಲ್ಲಿರುವಾಗ 3500 ಕೋಟಿ ಬೆಲೆಯ ಭೂಮಿಯನ್ನು ಚಿಲ್ಲರೆ ಹಣಕ್ಕೆ ನೀಡುವುದು ಎಷ್ಟು ಸರಿ. ಈ ಬಗ್ಗೆ ಸ್ವತಃ ಯಡಿಯೂರಪ್ಪ ಅವರೇ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದರು. ಬಳ್ಳಾರಿ ಮೂಲದ ಬಿಜೆಪಿ ಶಾಸಕ ಆನಂದ್ ಸಿಂಗ್ ಕೂಡ ಇದೇ ಮಾತು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ (ಇಂದು) ನಡೆಯುವ ಸಂಪುಟ ಸಭೆಗೆ ಮಹತ್ವ ಲಭಿಸಿತ್ತು.

ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಜಿಂದಾಲ್ ಸಂಸ್ಥೆಗೆ ಭೂಮಿ ನೀಡುವ ವಿಚಾರಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿಲ್ಲ. ಈ ವಿಚಾರದಲ್ಲಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಕೆಯಾಗಿದ್ದರಿಂದ ಸದ್ಯಕ್ಕೆ ತಡೆಹಿಡಿಯಲಾಗಿದೆ. ಆದರೆ, ಭವಿಷ್ಯದಲ್ಲಿ ಈ ಬಗ್ಗೆ ಏನಾಗಲಿದೆ ಎಂಬುದನ್ನು ಹೇಳುವಂತಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟ ರೀತಿ ಹೇಳಿಕೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಸಂಬಂಧ ಎನ್ ಜಿಟಿ ನೀಡಿರುವ ಆದೇಶವನ್ನು ಪ್ರಶ್ನಿಸಿ ಅದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಜಲಸಂಪನ್ಮೂಲ ಖಾತೆಯ ಅಧಿಕಾರಿಗಳು ಮತ್ತು ಕಾನೂನು ತಜ್ಞರ ಜೊತೆ ಸಭೆ ನಡೆಸಲಾಗಿದೆ. ಮಾಧ್ಯಮಗಳ ವರದಿ ನೋಡಿ ಎನ್ ಜಿಟಿ ಈ ಆದೇಶ ನೀಡಿದ್ದು ಅದನ್ನು ವಾಪಸ್ ಪಡೆಯಲು ಕೋರಲಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ. 

BS Yediyurappa-led Karnataka Cabinet agreed to sell 3,667 acres of land to the Sajjan Jindal-led JSW Steel Ltd in Ballari has now come to hold after a cabinet meeting held today.