ಸಿಡಿ ಕೇಸ್ ; ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ಸಾಧ್ಯತೆ ! ಎಸ್ಐಟಿ ತಂಡದಿಂದ ವರದಿ ರೆಡಿ !

30-05-21 04:13 pm       Satish, Bengaluru Correspondent   ಕರ್ನಾಟಕ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸುಲಭದಲ್ಲಿ ಪಾರಾಗಲಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರು, ಮೇ 30: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸುಲಭದಲ್ಲಿ ಪಾರಾಗಲಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು, ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಸಲ್ಲಿಸಿ ಪ್ರಕರಣಕ್ಕೆ ಫುಲ್ ಸ್ಟಾಪ್ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ.‌ ಮಾರ್ಚ್ 26 ರಂದು ಯುವತಿ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ವಿರುದ್ಧ 376 ಸಿ (ಅಧಿಕಾರದಲ್ಲಿದ್ದ ವ್ಯಕ್ತಿಯಿಂದ ಅಸಭ್ಯ ವರ್ತನೆ), 354 ಎ (ಲೈಂಗಿಕ ಕಿರುಕುಳ), 504 (ಪ್ರಚೋದನೆ), 506 (ಕ್ರಿಮಿನಲ್ ಬೆದರಿಕೆ), ಐಪಿಸಿ 417 (ಮೋಸ) ಮತ್ತು 67 ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿದ್ದಾರೆ. ಜಾರಕಿಹೊಳಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ. ಮಹಿಳೆಯೇ ಪದೇ ಪದೇ ಜಾರಿಹೊಳಿಯವರನ್ನು ಸಂಪರ್ಕಿಸಿದ್ದಾರೆ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ಪ್ರಚೋದನೆ ನೀಡುವ ರೀತಿ ಮಾತನಾಡಿದ್ದಾರೆ. ಲಭ್ಯವಾಗಿರುವ ವಿಡಿಯೋದಲ್ಲಿ ಮಹಿಳೆಗೆ ಬಲವಂತ ಮಾಡಿರುವ, ದೌರ್ಜನ್ಯ ಎಸಗಿರುವ ಯಾವುದೇ ದೃಶ್ಯಗಳು ಕಂಡುಬಂದಿಲ್ಲ. ಇಬ್ಬರ ಸಹಮತದಿಂದಲೇ ಲೈಂಗಿಕ ಕ್ರಿಯೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರಕರಣ ಸಂಬಂಧಿಸಿ ಸಾಕಷ್ಟು ಜನರ ಹೇಳಿಕೆಯನ್ನು ಎಸ್ಐಟಿ ಅಧಿಕಾರಿಗಳು ದಾಖಲು ಮಾಡಿದ್ದಾರೆ. ವಿಡಿಯೋದಲ್ಲಿ ಇರುವುದು ನಾನಲ್ಲ. ವಿಡಿಯೋ ನಕಲಿ ಸೃಷ್ಟಿಯಾಗಿದೆ ಎಂದು ಆರಂಭದಲ್ಲಿ ಹೇಳಿಕೊಂಡು ಬಂದಿದ್ದ ಜಾರಕಿಹೊಳಿಯವರು ಕೆಲವು ದಿನಗಳ ಹಿಂದಷ್ಟೇ ಎಸ್ಐಟಿ ಮುಂದೆ ಹಾಜರಾಗಿ ವಿಡಿಯೋದಲ್ಲಿರುವುದು ನಾನೇ. ಅದು ಪರಸ್ಪರ ಒಪ್ಪಿಗೆಯಿಂದಲೇ ಮಾಡಿರುವ ಲೈಂಗಿಕ ಕ್ರಿಯೆಯಾಗಿತ್ತು ಎಂದು ಒಪ್ಪಿಕೊಂಡಿದ್ದರು.

ಎಲ್ಲ ಬೆಳವಣಿಗೆ ಬಳಿಕ ಜಾರಕಿಹೊಳಿಯವರು ಹನಿ ಟ್ರ್ಯಾಪ್'ಗೆ ಒಳಗಾಗಿದ್ದಾರೆಂದು ಹೇಳಲಾಗುತ್ತಿದ್ದು, ಈ ಸಂಬಂಧ ಎಸ್ಐಟಿ ಅಧಿಕಾರಿಗಳೂ ನ್ಯಾಯಾಲಯಕ್ಕೆ ಶೀಘ್ರದಲ್ಲಿಯೇ ವರದಿ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ.

ಆದರೆ, ಜಾರಕಿಹೊಳಿ ನೀಡಿರುವ ದೂರಿನ ಪ್ರಕರಣದಲ್ಲಿ ವಿಚಾರಣೆ ಮುಂದುವರಿಯಲಿದೆ. ಸಿಡಿ ಮುಂದಿಟ್ಟು ಬ್ಲಾಕ್ ಮೇಲ್ ಮಾಡಿದ್ದಾರೆಂದು ಆರೋಪ ಇರುವುದರಿಂದ ಅಧಿಕಾರಿಗಳು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದರೂ, ಸಿಗದೆ ತಲೆಮರೆಸಿಕೊಂಡಿದ್ದಾರೆ.

 The Special Investigation Team (SIT), probing the sleaze tape case involving former minister Ramesh Jarkiholi, is most likely to give a clean chit to him. Sources said the SIT will soon submit a ‘B’ report, which means there is no evidence against him, to the court, putting an end to the case.