ಜೂನ್ 14ರ ನಂತರವೂ ದಕ್ಷಿಣ ಕನ್ನಡ ಸೇರಿ ಈ 5 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಕೆ?

09-06-21 03:37 pm       Headline Karnataka News Network   ಕರ್ನಾಟಕ

ಜೂನ್ 14ರ ನಂತರವೂ ಮೈಸೂರು, ದಕ್ಷಿಣ ಕನ್ನಡ, ತುಮಕೂರು, ಹಾಸನ ಮತ್ತು ಶಿವಮೊಗ್ಗ  ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಕೆ;

ಮಂಗಳೂರು, ಜೂನ್ 9: ಹೊಸ ಸೋಂಕಿತರ ಪ್ರಮಾಣ ಇಳಿಕೆ ಮತ್ತು ದೈನಂದಿನ ಡಿಸ್ಚಾರ್ಜ್ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸರಕಾರ ಹಂತ ಹಂತವಾಗಿ ಅನ್‌ಲಾಕ್ ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಯಾವ ಯಾವ ಕ್ಷೇತ್ರಕ್ಕೆ ಅನ್‌ಲಾಕ್ ಭಾಗ್ಯ ಸಿಗಲಿದೆ ಎನ್ನುವುದು ಇನ್ನೆರಡು ದಿನಗಳಲ್ಲಿ ತಿಳಿಯಲಿದೆ. ಬೆಂಗಳೂರಿಗೆ ಒಂದು ಮತ್ತು ರಾಜ್ಯದ ಇತರ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಬೀಳುವ ಸಾಧ್ಯತೆಯಿದೆ.

ಹಂತ-ಹಂತವಾಗಿ ಅನ್‌ಲಾಕ್ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಅನ್‌ಲಾಕ್ ಕುರಿತು ತಾಂತ್ರಿಕ ಸಲಹಾ ಸಮಿತಿ ಸೋಮವಾರ (ಜೂನ್ 7) ಸರ್ಕಾರಕ್ಕೆ ವರದಿ ನೀಡಿದೆ. ಈಜುಕೊಳ, ಧಾರ್ಮಿಕ ಕೇಂದ್ರ, ಸಿನಿಮಾ ಮಂದಿರ ಮುಂತಾದವು ಸದ್ಯಕ್ಕೆ ತೆರೆಯುವ ಸಾಧ್ಯತೆಯಿಲ್ಲ.

ಜೂನ್ 14ರ ನಂತರವೂ ಮೈಸೂರು, ದಕ್ಷಿಣ ಕನ್ನಡ, ತುಮಕೂರು, ಹಾಸನ ಮತ್ತು ಶಿವಮೊಗ್ಗ  ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಕೆ?

  • ಮೈಸೂರು ಜಿಲ್ಲೆಯಲ್ಲಿ ಜೂನ್ ಎಂಟಕ್ಕೆ ವರದಿಯಾದಂತೆ ಒಂದೇ ದಿನ 974 ಹೊಸ ಪ್ರಕರಣಗಳು ದಾಖಲಾಗಿದ್ದವು. ಅಲ್ಲಿ, ಸಕ್ರಿಯ ಪ್ರಕರಣ ಸದ್ಯ 14,059 ಇವೆ. ಇನ್ನು, ಮಂಗಳವಾರ 1,241 ಜನರು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಹಾಗಾಗಿ ಇಲ್ಲಿ ಅನ್‌ಲಾಕ್ ಇನ್ನೂ ಅನಿಶ್ಚಿತತೆಯಲ್ಲಿದೆ.
  • ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸೋಂಕಿನ ಇಳಿಕೆ ಪ್ರಮಾಣ ನಿರೀಕ್ಷಿಸಿದ ರೀತಿಯಲ್ಲಿ ಕಮ್ಮಿಯಾಗುತ್ತಿಲ್ಲ. ಜಿಲ್ಲೆಯಲ್ಲಿ ಜೂನ್ ಎಂಟರಂದು 525 ಹೊಸ ಪ್ರಕರಣಗಳು ದಾಖಲಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,045 ಇದೆ. ಹಾಗಾಗಿ, ಇಲ್ಲೂ ಅನ್‌ಲಾಕ್ ಆಗುತ್ತಾ ಎಂದು ಕಾದು ನೋಡಬೇಕಿದೆ.
  • ತುಮಕೂರು ಜಿಲ್ಲೆಯಲ್ಲೂ ಪರಿಸ್ಥಿತಿ ಜಿಲ್ಲಾಡಳಿತದ ಯೋಜನೆಯಂತೆ ಸಂಪೂರ್ಣ ಹತೋಟಿಗೆ ಬರುತ್ತಿಲ್ಲ. ಇಲ್ಲಿ ಜೂನ್ ಎಂಟರಂದು 589 ಹೊಸ ಪ್ರಕರಣಗಳು ದಾಖಲಾಗಿದ್ದವು. ಅಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 10,125 ಇದೆ. ಜಿಲ್ಲಾಧಿಕಾರಿಗಳು ಅನ್‌ಲಾಕ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು.
  • ಶಿವಮೊಗ್ಗ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸೋಂಕು ಹತೋಟಿಗೆ ಬರುತ್ತಿಲ್ಲ. ಜೂನ್ ಎಂಟರಂದು 703 ಹೊಸ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6,207. ಒಟ್ಟು ಮೃತ ಪಟ್ಟವರ ಸಂಖ್ಯೆ 879.
  • ಹಾಸನದಲ್ಲೂ ಸೋಂಕಿನ ತೀವ್ರತೆ ತಗ್ಗುತ್ತಿಲ್ಲ. ಜೂನ್ ಎಂಟರಂದು 659 ಹೊಸ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಒಟ್ಟು 10,461 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಜಿಲ್ಲೆಯಲ್ಲಿ ಮೃತ ಪಟ್ಟವರ ಸಂಖ್ಯೆ 988.

Five Karnataka districts including Dakshina Kannada may continue lockdown sources ?