ಚಿಕ್ಕಮಗಳೂರು, ಕೊಡಗಿನಲ್ಲಿ ಭಾರೀ ಮಳೆ ; ಘನ ವಾಹನ ಸಂಚಾರ ನಿಷೇಧ, ಮತ್ತೆ ಗುಡ್ಡ ಕುಸಿಯುವ ಆತಂಕ

16-06-21 03:31 pm       Headline Karnataka News Network   ಕರ್ನಾಟಕ

ಮಲೆನಾಡಲ್ಲಿ ಮುಂಗಾರು ಆರಂಭದಲ್ಲೇ ಅಬ್ಬರಿಸತೊಡಗಿದ್ದು ನಿರಂತರ ಮಳೆಯಾಗುತ್ತಿದೆ.‌ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯತೊಡಗಿವೆ.‌

ಚಿಕ್ಕಮಗಳೂರು, ಜೂನ್ 16: ಮಲೆನಾಡಲ್ಲಿ ಮುಂಗಾರು ಆರಂಭದಲ್ಲೇ ಅಬ್ಬರಿಸತೊಡಗಿದ್ದು ನಿರಂತರ ಮಳೆಯಾಗುತ್ತಿದೆ.‌ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು ನದಿಗಳು ತುಂಬಿ ಹರಿಯತೊಡಗಿವೆ.‌

ಕಳಸ-ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗಿದ್ದು ಭದ್ರಾ ನದಿ ಮೈದುಂಬಿ ಹರಿಯುತ್ತಿದೆ.‌ ಇದರಿಂದ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಭೀತಿಯಲ್ಲಿದೆ. ಸೇತುವೆಯ ಎರಡು ಅಡಿ ಅಂತರದಲ್ಲಿ ನೀರು ಹರಿಯುತ್ತಿದ್ದು ಮಳೆ ಹೀಗೆ ಮುಂದುವರಿದರೆ ಸಂಜೆ ವೇಳೆಗೆ ಮುಳುಗುವ ಸಾಧ್ಯತೆಯಿದೆ. ‌

ಕೊಪ್ಪ ತಾಲೂಕಿನ ಜಯಪುರ ಸಮೀಪದ ಬಸರಿಕಟ್ಟೆ ಎಂಬಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ಸ್ಥಗಿತಗೊಂಡಿದೆ. ಈ ಭಾಗದಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸಂಚಾರ ಸ್ಥಗಿತವಾಗಿದೆ.‌

ಭಾರೀ ಮಳೆಗೆ ಗುಡ್ಡ ಕುಸಿಯುವ ಆತಂಕ 

ಮೂಡಿಗೆರೆ ತಾಲೂಕಿನಲ್ಲೂ ಭಾರೀ ಮಳೆಯಾಗಿದ್ದು ಬಿನ್ನಡಿ ಗ್ರಾಮದ ಬಳಿ ಧರೆ ಕುಸಿತವಾಗಿದೆ. ಹೀಗಾಗಿ ಸ್ಥಳೀಯರಲ್ಲಿ ಗುಡ್ಡ ಕುಸಿತದ ಆತಂಕ ಉಂಟಾಗಿದೆ. ಈ ಭಾಗದಲ್ಲಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ. ಚಾರ್ಮಾಡಿ ಘಾಟಿಯಲ್ಲೂ ಭಾರೀ ಮಳೆಯಾಗುತ್ತಿದ್ದು ಮತ್ತೆ ಗುಡ್ಡ ಕುಸಿಯುತ್ತಾ ಎನ್ನುವ ಆತಂಕ ಜನರಲ್ಲಿ ಎದುರಾಗಿದೆ. 

ಕೊಡಗಿನಲ್ಲಿ ಮರಳು ಲಾರಿ, ಘನ ವಾಹನ ಸಂಚಾರ ನಿಷೇಧ 

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಜಿಲ್ಲೆಯಾದ್ಯಂತ ಮರಳು, ಮರ  ಸಾಗಾಣಿಕೆಯನ್ನು ನಿಷೇಧ ಮಾಡಲಾಗಿದೆ. ಇದೇ ವೇಳೆ ಭಾರೀ ಸರಕು ಸಾಗಾಣಿಕೆ ವಾಹನ ಸಂಚಾರ‌ವನ್ನೂ ನಿಷೇಧಿಸಲಾಗಿದೆ. ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಮಾಡಿದ್ದಾರೆ.‌

ರಸ್ತೆಗಳ ಕುಸಿತ ಆಗುವ ಸಾಧ್ಯತೆ ಮನಗಂಡು ಜಿಲ್ಲಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ.‌ 16,200 ಕೆ.ಜಿ.ಗೂ ಹೆಚ್ಚಿನ ತೂಕದ ಸರಕು ಸಾಗಾಣಿಕೆ ವಾಹನ ಮತ್ತು ಟ್ಯಾಂಕರ್ ಸಂಚಾರವನ್ನು ನಿಷೇಧ ಮಾಡಲಾಗಿದೆ. ಮಳೆಗಾಲ ಮುಗಿಯುವವರೆಗೂ ಈ‌ ಆದೇಶ ಜಾರಿ ಇರಲಿದೆ.‌

Heavy Rain: Rivers flowing at a Dangerous Level in Kodagu Chikmagalur.