ಏಯ್ ನನಗೆ ಮುಂದಿನ ಸಿಎಂ ಅನ್ಬೇಡ್ರೀ.. ಅದು ನಂಗೇ ಡೇಂಜರ್ ಆಗುತ್ತೆ ; ಕುಟುಕಿದ ಪರಮೇಶ್ವರ್ !

24-06-21 04:36 pm       Headline Karnataka News Network   ಕರ್ನಾಟಕ

ನನಗೆ ಮುಂದಿನ ಸಿಎಂ ಎನ್ನಬೇಡಿ.. ಆ ಪದವೇ ನನಗೆ ಡೇಂಜರ್ ಆಗುತ್ತೆ. ಹೀಗೆಂದು ಕಾರ್ಯಕ್ರಮ ಒಂದರಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಹೇಳಿಕೊಂಡಿದ್ದು ಈಗ ಚರ್ಚೆಗೆ ಕಾರಣವಾಗಿದೆ. 

ತುಮಕೂರು, ಜೂನ್ 24: ನನಗೆ ಮುಂದಿನ ಸಿಎಂ ಎನ್ನಬೇಡಿ.. ಆ ಪದವೇ ನನಗೆ ಡೇಂಜರ್ ಆಗುತ್ತೆ. ಹೀಗೆಂದು ಕಾರ್ಯಕ್ರಮ ಒಂದರಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಹೇಳಿಕೊಂಡಿದ್ದು ಈಗ ಚರ್ಚೆಗೆ ಕಾರಣವಾಗಿದೆ. 

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗಂಕಾರನಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಪರಮೇಶ್ವರ್ ಭಾಷಣಕ್ಕೆ ನಿಂತಿದ್ದರು.‌ ಭಾಷಣದಲ್ಲಿ ನಿಮ್ಮಿಂದಾಗಿ ಈ ರಾಜ್ಯದ ಉಪ ಮುಖ್ಯಮಂತ್ರಿಯಾದೆ ಎಂದ ಪರಮೇಶ್ವರ್ ಮಾತು ಕೇಳಿ, ಪ್ರಚೋದಿತನಾದ ಕಾರ್ಯಕರ್ತನೊಬ್ಬ ಮುಂದಿನ ಸಿಎಂ ಪರಮೇಶ್ವರ್ ಅಂತಾ ಘೋಷಣೆ ಕೂಗಿದ್ದಾನೆ. ಕೂಡಲೇ, ಏಯ್ ಸಿಎಂ ಅಂತಾ ಹೇಳಬೇಡಪ್ಪಾ.. ಅದು ನನಗೆ ಡೇಂಜರ್ ಆಗುತ್ತದೆ ಎಂದು ಹೇಳಿ ಬಾಯಿ ಮುಚ್ಚಿಸಿದ ಪರಿ ನೆರೆದಿದ್ದವರನ್ನೇ ಅಚ್ಚರಿಗೆ ಈಡುಮಾಡಿದೆ. 

2013 ರ ವಿಧಾನಸಭೆ ಚುನಾವಣೆಗೂ ಮುನ್ನ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದರು. ಆದರೆ, ಸಿಎಂ ಅಭ್ಯರ್ಥಿಯಾಗಿದ್ದರೂ ತನ್ನ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಸೋಲು ಕಂಡಿದ್ದು ಆಘಾತ ಸೃಷ್ಟಿಸಿತ್ತು. 

ಗೆಲ್ಲುತ್ತಾ ಬಂದಿದ್ದ ಪರಮೇಶ್ವರ ಅವರನ್ನು ಸಿಎಂ ಆಗುತ್ತಾರೆ ಎಂದು ಸ್ವಂತ ಪಕ್ಷದವರೇ ಸೋಲಿಸಿದ್ದರು ಎನ್ನುವ ಆರೋಪಗಳಿದ್ದವು. ಪರಮೇಶ್ವರ್ ಸೋತಿದ್ದರಿಂದ ಸಿದ್ದರಾಮಯ್ಯ ಆಕಸ್ಮಿಕವಾಗಿ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು. ಆಮೂಲಕ ಕೈಗೆ ಬಂದ ತುತ್ತ ಬಾಯಿಗೆ ಬರದೆ, ಮೊದಲ ದಲಿತ ಮುಖ್ಯಮಂತ್ರಿ ಆಗುವ ಪರಮೇಶ್ವರ್ ಕನಸು ಒಡೆದು ಹೋಗಿತ್ತು. 

ಇದೇ ಕಾರಣಕ್ಕೋ ಏನೋ ರಾಜ್ಯದಲ್ಲಿ ಮುಂದಿನ ಸಿಎಂ ವಿಚಾರದಲ್ಲಿ ಕಚ್ಚಾಟ ನಡೆಯುತ್ತಿರುವ ಮಧ್ಯೆಯೇ ಕಾರ್ಯಕರ್ತರು ಮುಂದಿನ ಸಿಎಂ ಎಂದು ಕೂಗು ಎಬ್ಬಿಸಿದ ಕೂಡಲೇ ಪರಮೇಶ್ವರ್ ಜಾಗೃತರಾದ್ರಾ ಅನ್ನುವ ಅನುಮಾನ ಬಂದಿದೆ. ಸದ್ಯಕ್ಕೆ ಕ್ಷೇತ್ರದಲ್ಲಿ ಸೈಲೆಂಟ್ ಆಗಿ ಕೆಲಸ ಮಾಡುತ್ತಿರುವ ಪರಮೇಶ್ವರ್, ಕೂಡ ಸಿಎಂ ಗಾದಿಯ ರೇಸಿನಲ್ಲಿದ್ದಾರೆ. ಗೆದ್ದ ಬಳಿಕ ಸಿಎಂ ಸ್ಥಾನಕ್ಕಾಗಿ ಪೈಪೋಟಿ ನೀಡುವ ಲೆಕ್ಕಾಚಾರದಲ್ಲಿ ಪರಮೇಶ್ವರ್ ಇದ್ದಾರೆ. 

ಸದ್ಯಕ್ಕೆ ಸಿಎಂ ರೇಸನಲ್ಲಿ ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ಪರಮೇಶ್ವರ್, ಖರ್ಗೆ ಹೆಸರು ಕೂಡ ಕೇಳಿಬರುತ್ತಿದೆ. ಇದೇ ವೇಳೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕೆಂಬ ಕೂಗು ಕೂಡ ಜೀವಂತ ಇದ್ದು ಕೆಲವು ಶಾಸಕರು ಆ ರೀತಿಯ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.

ont call me as CM now it will effect my future taunts Parameshwar